ಯಲಬುರ್ಗಾ: ಮಳೆ ಅಭಾವದಿಂದ ಬೆಳೆ ಹಾನಿಗೊಳಗಾದ ತಾಲೂಕಿನ ಸಂಗನಾಳ ಮತ್ತು ರಾಜೂರು ಗ್ರಾಮಗಳ ರೈತರ ಜಮೀನುಗಳಿಗೆ ನೂತನ ಸಚಿವ ಬಸವರಾಜ ರಾಯರಡ್ಡಿ ಮತ್ತು ಶಿವರಾಜ ತಂಗಡಗಿ ಗುರುವಾರ ಜಂಟಿಯಾಗಿ ಭೇಟಿ ನೀಡಿ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲಿಸಿದರು.
ಬಳಿಕ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಉಂಟಾಗಿದ್ದು, ಹಾಳಾದ ಬೆಳೆ ಖುದ್ದಾಗಿ ವೀಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಪ್ರತಿಯೊಬ್ಬ ರೈತರಿಗೂ ಪರಿಹಾರ ದೊರೆಯಬೇಕು. ಕೃಷಿ ಇಲಾಖೆ ಅಧಿಕಾರಿಗಳು ಹಾನಿಯ ಸಮಗ್ರ ವರದಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು. ಯಾವುದೇ ರೈತರು ಪರಿಹಾರದಿಂದ ವಂಚಿತರಾಗದಂತೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.ರಾಜ್ಯ ಸರ್ಕಾರ ರೈತರ ಪರವಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರವೇ ಬೆಳೆ ಪರಿಹಾರ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು. ನಾನು ಹಾಗೂ ಸಚಿವ ಶಿವರಾಜ ತಂಗಡಗಿ ಒಟ್ಟಾಗಿ ರೈತರಿಗೆ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಚಿವ ಶಿವರಾಜ ತಂಗಡಗಿ ಮಾತನಾಡಿ, ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಮುಂಗಾರಿನಲ್ಲಿ ಬಿತ್ತನೆಗೊಂಡ ಬೆಳೆಗಳು ಹಾನಿಗೊಳಗಾಗಿವೆ. ಸರ್ಕಾರ ಬರ ಪರಿಸ್ಥಿತಿ ಘೋಷಿಸಿದ್ದು, ಅಧಿಕಾರಿಗಳು ಬೆಳೆ ಹಾನಿಯ ಸಮೀಕ್ಷೆ ನಡೆಸುತ್ತಿದ್ದಾರೆ. ಸಮೀಕ್ಷೆಯ ವರದಿ ಬಂದ ಬಳಿಕ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದರು.ಹೆಸರು, ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳು ತೇವಾಂಶದ ಕೊರತೆಯಿಂದ ಹಾನಿಗೊಳಗಾಗಿವೆ. ಜಿಲ್ಲೆಯಾದ್ಯಂತ ಬೆಳೆ ಹಾನಿ ಸಮೀಕ್ಷೆ ಪ್ರಗತಿ ಪರಿಶೀಲಿಸಲಾಗಿದ್ದು, ಶೀಘ್ರದಲ್ಲೇ ರೈತರಿಗೆ ಪರಿಹಾರ ನೀಡುವ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಅಧಿಕಾರಿಗಳು ಹಾಗೂ ರೈತರಿಂದ ಬೆಳೆ ಹಾನಿಯ ಕುರಿತು ಮಾಹಿತಿ ಪಡೆದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಮೂರ್ತಿ, ಉಭಯ ಸಚಿವರಿಗೆ ಬೆಳೆ ಹಾನಿ ಹಾಗೂ ಬರ ಪರಿಹಾರಕ್ಕೆ ಸಂಬಂಧಿಸಿದ ಮಾಹಿತಿ ವಿವರಿಸಿದರು.
ಈ ಸಂದರ್ಭ ರೈತರಾದ ಗವಿಸಿದ್ದಪ್ಪ ಚೋಳಿನ್, ಅಡಿವೆಪ್ಪ ಲಕ್ಕಲಕಟ್ಟಿ ಮಾತನಾಡಿ, ಪ್ರತಿ ಎಕರೆಗೆ ₹10ರಿಂದ ₹20 ಸಾವಿರದವರೆಗೆ ಖರ್ಚು ಮಾಡಿ ಬಿತ್ತನೆ ಮಾಡಿದ್ದೇವೆ. ಆದರೆ ಮಳೆಯ ಕೊರತೆಯಿಂದ ಬೆಳೆಗಳು ಹಾನಿಗೊಳಗಾಗಿವೆ. ಸರ್ಕಾರ ಸೂಕ್ತ ಪರಿಹಾರ ನೀಡಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.ಈ ವೇಳೆ ಮಾಜಿ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ಸುರೇಶ.ಬಿ.ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣ ಉಕ್ಕುಂದ, ಎಸ್ಪಿ ರಾಮ್ ಎಲ್.ಅರಸಿದ್ದಿ, ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒಗಳಾದ ನೀಲಗಂಗಾ ಬಬಲಾದ, ಬೆಟದೇಶ ಮಾಳೇಕೊಪ್ಪ, ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಸೇರಿದಂತೆ, ಕೃಷಿ ವಿಜ್ಞಾನಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಇದ್ದರು.
ರೈತರ ಪರವಾಗಿ ಕಾಂಗ್ರೆಸ್ ಸರ್ಕಾರ: ಸಚಿವ ರಾಯರಡ್ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ನಾಡಿನ ಅನ್ನದಾತರ ಪರವಾಗಿ ಕೆಲಸ ಮಾಡುತ್ತಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಮರ್ಪಕವಾಗಿ ಎದುರಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ರಾಯರಡ್ಡಿ ಹೇಳಿದರು.
ರೈತರಿಗೆ ನ್ಯಾಯಯುತ ಪರಿಹಾರ ಶೀಘ್ರದಲ್ಲೇ ನೀಡಲಾಗುವುದು, ಸರ್ಕಾರಕ್ಕೆ ಬೆಳೆ ಹಾನಿಯ ಸಮಗ್ರ ವರದಿ ಬಂದ ತಕ್ಷಣ ರೈತರಿಗೆ ಪರಿಹಾರ ನೀಡಲಾಗುವುದು. ಇಂತಹ ವೇಳೆ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುವ ಬದಲು ಕೇಂದ್ರ ಸರ್ಕಾರವೂ ರಾಜ್ಯದ ರೈತರ ನೆರವಿಗೆ ಧಾವಿಸಲಿ. ರಾಜ್ಯ ಬಿಜೆಪಿಯ ನಾಯಕರು ಕೇಂದ್ರದಿಂದ ರಾಜ್ಯಕ್ಕೆ ಅಗತ್ಯ ಅನುದಾನ ತರಲು ಪ್ರಯತ್ನಿಸಬೇಕು ಎಂದರು.