ಅಧಿಕಾರಿಗಳು ಮನಸ್ಸಿನಿಂದ ಕಾರ್ಯನಿರ್ವಹಿಸಿ ಉತ್ತಮ ಕೆಲಸ ಮಾಡುವ ಉತ್ಸಾಹ ತೋರಬೇಕು. ಭೀಷ್ಮಕೆರೆಯ ಅಳತೆ ಜಮಾ ಮಾಡಿಸಿ, ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ರೀತಿಯ ವಸತಿ ನಿರ್ಮಾಣಕ್ಕೆ ಅವಕಾಶ ನೀಡಬಾರದು.

ಗದಗ: ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಭೀಷ್ಮಕೆರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಕೆರೆಗೆ ಚರಂಡಿ ನೀರು ಸೇರುತ್ತಿರುವುದನ್ನು ಗಮನಿಸಿದ ಅವರು, ಅದನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗುರುವಾರ ಬೆಳಗಿನ ಜಾವ ನಗರದ ಭೀಷ್ಮ ಕೆರೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿ, ಅಧಿಕಾರಿಗಳು ಮನಸ್ಸಿನಿಂದ ಕಾರ್ಯನಿರ್ವಹಿಸಿ ಉತ್ತಮ ಕೆಲಸ ಮಾಡುವ ಉತ್ಸಾಹ ತೋರಬೇಕು. ಭೀಷ್ಮಕೆರೆಯ ಅಳತೆ ಜಮಾ ಮಾಡಿಸಿ, ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ರೀತಿಯ ವಸತಿ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದರು.

ಚರಂಡಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಎಸ್‌ಟಿಪಿ ಯೋಜನೆ ರೂಪಿಸಿ ಜಾರಿಗೊಳಿಸಬೇಕು ಎಂದು ಸೂಚಿಸಿದ ಅವರು, ಈ ಕುರಿತು ನಿರ್ಲಕ್ಷ್ಯ ತೋರಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗುವವರೆಗೂ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸೇರಿದಂತೆ ತಾಲೂಕು ಮತ್ತು ನಗರಸಭೆ ಅಧಿಕಾರಿಗಳು ಇದ್ದರು.ಹೊಸ ಬಸ್ ನಿಲ್ದಾಣ ಪರಿಶೀಲನೆ

ಗದಗ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಗುರುವಾರ ನಗರದ ಹೊಸ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.ಈ ವೇಳೆ ಕುಡಿಯುವ ನೀರಿನ ಘಟಕದಲ್ಲಿ ಪೂರೈಕೆಯಾಗುತ್ತಿರುವ ನೀರನ್ನು ಪರೀಕ್ಷೆಗೆ ಒಳಪಡಿಸಿ, ಅದು ಕುಡಿಯಲು ಯೋಗ್ಯವೇ ಎಂಬ ಕುರಿತು ತಕ್ಷಣ ವರದಿ ಪಡೆಯುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ಅವರು, ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳು ಹಾಗೂ ವ್ಯವಸ್ಥೆಗಳ ಕುರಿತು ಮಾಹಿತಿ ಕಲೆ ಹಾಕಿದರು. ನಿಲ್ದಾಣದಲ್ಲಿ ಸ್ವಚ್ಛತೆ, ಕುಡಿಯುವ ನೀರು, ಆಸನ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಬಸ್‌ ಗಳು ಸರಿಯಾದ ಸಮಯಕ್ಕೆ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಸಾರ್ವಜನಿಕ ಸೇವೆಯಲ್ಲಿ ಯಾವುದೇ ವಿಳಂಬ ಅಥವಾ ಅಸಮರ್ಪಕತೆ ಇರಬಾರದು ಎಂದು ಎಚ್ಚರಿಸಿದರು.