50 ಎಕರೆ ಖರೀದಿಸಿ ಬಡವರಿಗೆ ನಿವೇಶನ: ದಿನೇಶ್‌ ಶೆಟ್ಟಿ

| Published : Aug 01 2024, 12:21 AM IST

ಸಾರಾಂಶ

ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.

- ದೂಡಾ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ । ಬಡವರು, ಮಧ್ಯಮ ವರ್ಗಕ್ಕೆ ಕಡಿಮೆ ದರದಲ್ಲಿ ನಿವೇಶನ: ಶಾಸಕ ಡಾ.ಶಾಮನೂರು ವಿಶ್ವಾಸ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಬುಧವಾರ ಅಧಿಕಾರ ಸ್ವೀಕರಿಸಿದರು.

ನಗರದ ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತದ ಶ್ರೀ ಗಣೇಶ ದೇವಸ್ಥಾನ, ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಬೆಳಗ್ಗೆ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನೇರವಾಗಿ ದೂಡಾ ಕಚೇರಿಗೆ ಧಾವಿಸಿದ ದಿನೇಶ ಶೆಟ್ಟಿ ತಮ್ಮ ನಾಯಕ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಸಮಕ್ಷಮ ಅಧಿಕಾರ ವಹಿಸಿಕೊಂಡರು.

ಇದೇ ವೇಳೆ ಮಾತನಾಡಿದ ದಿನೇಶ ಕೆ. ಶೆಟ್ಟಿ ಅವರು, ನನ್ನಂತಹ ಸಾಮಾನ್ಯ ಕಾರ್ಯಕರ್ತರನ್ನು ಕಾಂಗ್ರೆಸ್‌ ದೂಡಾ ಅಧ್ಯಕ್ಷನನ್ನಾಗಿ ಮಾಡಿದೆ. ಇಂಥದ್ದೆಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ. ಬೇರೆ ಪಕ್ಷಗಳಲ್ಲಿ ಬೇರೆ ಪಕ್ಷದಿಂದ ಬಂದವರನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದರು.

ದಾವಣಗೆರೆ ಮಹಾನಗರ ಒಂದೇ ಕಡೆ ಬೆಳೆಯುವುದಕ್ಕಿಂತ ನಾಲ್ಕೂ ದಿಕ್ಕಿನಲ್ಲೂ ಅಭಿವೃದ್ಧಿಯಾಗಬೇಕು. ಇದಕ್ಕಾಗಿಯೇ 50 ಎಕರೆ ಜಾಗ ಖರೀದಿಸಿ, ಬಡವರು, ಮಧ್ಯಮ ವರ್ಗ, ವಿಶೇಷವಾಗಿ ಆಟೋ ರಿಕ್ಷಾ ಚಾಲಕರು, ಖಾಸಗಿ ಬಸ್‌ ಚಾಲಕರು, ಚಿತ್ರ ಮಂದಿರಗಳ ಕೆಲಸಗಾರರಿಗೆ ಪ್ರಾಧಿಕಾರದಿಂದ ನಿವೇಶನ ನೀಡುತ್ತೇವೆ. ಪ್ರಾಧಿಕಾರವು ಕೇವಲ ದಾವಣಗೆರೆ ನಗರಕ್ಕಷ್ಟೇ ಸೀಮಿತವಲ್ಲ. ಹರಿಹರ ನಗರದಲ್ಲೂ ಉತ್ತಮ ಬಡಾವಣೆ ನಿರ್ಮಾಣ ಮಾಡುತ್ತೇವೆ. ಎಲ್ಲರ ಸಹಕಾರದಲ್ಲಿ ಬಡ, ಮಧ್ಯಮ ವರ್ಗಕ್ಕೆ ಕಡಿಮೆ ದರದಲ್ಲಿ ನಿವೇಶನ ನೀಡಲು ವ್ಯವಸ್ಥೆ ಮಾಡುತ್ತೇವೆ ಎಂದು ದಿನೇಶ ಶೆಟ್ಟಿ ಭರವಸೆ ನೀಡಿದರು.

ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ ಮಾತನಾಡಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಬಾಲ್ಯದಿಂದಲೂ ಕ್ರೀಡಾಪಟು. ದಾವಣಗೆರೆ, ಹರಿಹರ ಅವಳಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಹ ಕ್ರೀಡಾ ಮನೋಭಾವದೊಂದಿಗೆ, ಯಾವುದೇ ಪಕ್ಷ ಬೇಧವಿಲ್ಲದೇ ಎಲ್ಲ ಸದಸ್ಯರ ಸಹಕಾರದಲ್ಲಿ ಮಾಡಲಿ. ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.

ಹಿರಿಯ ಉದ್ಯಮಿಗಳಾದ ಅಣಬೇರು ರಾಜಣ್ಣ, ಅಥಣಿ ಎಸ್. ವೀರಣ್ಣ, ಎಸ್.ಕೆ.ವೀರಣ್ಣ, ಉದ್ಯಮಿ ಉದಯ ಶಿವಕುಮಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ದೂಡಾದ ನೂತನ ನಾಮ ನಿರ್ದೇಶಿತ ಸದಸ್ಯರಾದ ಎಂ.ಆರ್.ವಾಣಿ ಬಕ್ಕೇಶ ನ್ಯಾಮತಿ, ಎಂ.ಮಂಜುನಾಥ ತಕ್ಕಡಿ, ಹರಿಹರದ ಎಚ್‌.ಜಬ್ಬಾರ್ ಖಾನ್‌, ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ, ವಿಶೇಷ ಭೂ ಸ್ವಾಧೀನಾಧಿಕಾರಿ ಎಸ್.ರವಿ ಇತರರು ನೂತನ ಅಧ್ಯಕ್ಷ, ಸದಸ್ಯರಿಗೆ ಶುಭ ಹಾರೈಸಿದರು.

ಪಾಲಿಕೆ ಸದಸ್ಯರಾದ ಎ.ನಾಗರಾಜ, ಜಿ.ಎಸ್. ಮಂಜುನಾಥ ಗಡಿಗುಡಾಳ, ಉದಯಕುಮಾರ, ಆಶಾ ಉಮೇಶ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ, ಮಾಜಿ ಮೇಯರ್‌ ಅನಿತಾಬಾಯಿ ಮಾಲತೇಶ, ಕಾಂಗ್ರೆಸ್ ಮುಖಂಡರಾದ ಅಭಿ ಕಾಟನ್ಸ್ ಮಾಲೀಕ ಬಕ್ಕೇಶ್ ನ್ಯಾಮತಿ, ಮಲ್ಲಿಕಾರ್ಜುನ ಕಬಡ್ಡಿ ಮಲ್ಲು, ಸುರಭಿ ಎಸ್. ಶಿವಮೂರ್ತಿ, ಅಯೂಬ್ ಪೈಲ್ವಾನ್, ಶ್ರೀಕಾಂತ ಬಗರೆ, ಯುವರಾಜ, ಹೋಟೆಲ್ ಉದ್ಯಮಿ ಮಹೇಶ ಶೆಟ್ಟಿ, ಪಿ.ಸಿ. ರಾಮನಾಥ, ಶಂಭು ಉರೇಕೊಂಡಿ, ರಾಜು ಭಂಡಾರಿ, ಸತೀಶ ಶೆಟ್ಟಿ, ಅನಿಲ ಗೌಡ, ಬಸವರಾಜ ಇತರರು ಇದ್ದರು.

- - -

ಬಾಕ್ಸ್‌ * ಬಿಜೆಪಿ ವಿರುದ್ಧ ಹರಿಹಾಯ್ದ ಶಾಸಕ ಡಾ.ಶಿವಶಂಕರಪ್ಪ

ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಕಾಂಗ್ರೆಸ್ಸಿನಲ್ಲಿ ಸಾಮಾನ್ಯ ಕಾರ್ಯಕರ್ತರಾದ ದಿನೇಶ ಶೆಟ್ಟಿಗೆ ದೂಡಾ ಅಧ್ಯಕ್ಷರಾಗಿ ಮಾಡಲಾಗಿದೆ. ಬಿಜೆಪಿಯವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋದವರಿಗೆ, ಕರೆದುಕೊಂಡು ಅಧ್ಯಕ್ಷರನ್ನಾಗಿ ಮಾಡಿದ್ದರು. ನಾವು ಅಂತಹ ಖದೀಮ ಕೆಲಸ ಮಾಡುವುದಿಲ್ಲ. ಈ ಹಿಂದೆ ದೂಡಾ ಅಧ್ಯಕ್ಷರಾಗಿದ್ದವರು ಹೆಂಡತಿ, ತಂಗಿ ಹೆಸರಿಗೆ ನಿವೇಶನ ಪಡೆದು, ನಂತರ ತಮ್ಮ ಹೆಸರಿಗೆ ಮಾಡಿಕೊಂಡು, ದೊಡ್ಡ ಕಟ್ಟಡ ಕಟ್ಟಿಕೊಂಡಿದ್ದಾರೆ ಎಂದು ಬಿಜೆಪಿಯವರ ವಿರುದ್ಧ ಹರಿಹಾಯ್ದರು. ನೂತನ ದೂಡಾ ಅಧ್ಯಕ್ಷ ಅಂತಹ ಕೆಲಸ ಮಾಡುವುದಿಲ್ಲ. ಬೇರೆಯವರು ಅಂತಹ ಕೆಲಸ ಮಾಡುವುದಕ್ಕೆ ಬಿಡುವುದೂ ಇಲ್ಲ. ಬಡವರು, ಮಧ್ಯಮ ವರ್ಗದವರು, ಶ್ರಮಿಕರಿಗೆ ಕಡಿಮೆ ದರದಲ್ಲಿ ನಿವೇಶನ ನೀಡುವಂತಹ ಒಳ್ಳೆಯ ಕೆಲಸ ಮಾಡುತ್ತಾರೆಂಬ ವಿಶ್ವಾಸವಿದೆ. ನಾವು ಸಹ ಎಲ್ಲ ರೀತಿಯ ಸಹಕಾರ, ಮಾರ್ಗದರ್ಶನ ನೀಡುತ್ತೇವೆ. ಜನರಿಗೆ ಕಡಿಮೆ ದರದ ನಿವೇಶನ ನೀಡಬೇಕೆಂಬುದು ನಮ್ಮೆಲ್ಲರ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.

- - -

ಕೋಟ್‌ * ಏಂಜಲ್ ಮೇರಿಗೆ ನಿವೇಶನಕ್ಕೆ ಒತ್ತಾಯ

ದೂಡಾಗೆ ಹಿಂದೆ ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿ ಆಗಿದ್ದ ವೇಳೆ ದಾವಣಗೆರೆಯವರೇ ಆದ ಅಂತರ ರಾಷ್ಟ್ರೀಯ ಅಥ್ಲೀಟ್‌ ಏಂಜಲ್ ಮೇರಿ ಅವರಿಗೆ ನಿವೇಶನ ನೀಡುವಂತೆ ಮನವಿ ಮಾಡಲಾಗಿತ್ತು. ಸ್ವತಃ ಏಂಜಲ್ ಮೇರಿ ತಾವಾಗಿಯೇ ಕೇಳುವುದು ಬೇಡ. ಪಿ.ಟಿ.ಉಷಾ ಅವರಿಗಿಂತಲೂ ಮುನ್ನವೇ ಭಾರತವನ್ನು ಪ್ರತಿನಿಧಿಸಿದ್ದ ಏಂಜಲ್ ಮೇರಿ ಅವರಿಗೆ ನಾವೇ ಸೈಟ್‌ ಕೊಡುವುದರಿಂದ ದಾವಣಗೆರೆಗೂ ಗೌರವ ಬರುತ್ತದೆ

- ಬಿ.ಪಿ.ಹರೀಶ, ಶಾಸಕ, ಹರಿಹರ ಕ್ಷೇತ್ರ

- - - ಟಾಪ್‌ ಕೋಟ್‌ಹರಿಹರ ನಗರವೂ ದೂಡಾ ವ್ಯಾಪ್ತಿಯಲ್ಲೇ ಬರುತ್ತದೆ. ಆದರೆ, ನಮ್ಮ ತಾಲೂಕು ಕೇಂದ್ರದ ಅಭಿವೃದ್ಧಿಯೇ ಕುಂಠಿತವಾಗಿದೆ. ಪ್ರಾಧಿಕಾರದ ನೂತನ ಅಧ್ಯಕ್ಷರಾದ ದಿನೇಶ ಕೆ. ಶೆಟ್ಟಿ ತಮ್ಮ ಅಧಿಕಾರ ಅವಧಿಯಲ್ಲಿ ಹರಿಹರದಲ್ಲೂ ಉತ್ತಮ ಬಡಾವಣೆ ನಿರ್ಮಾಣ ಮಾಡಲಿ. ಒಳ್ಳೆಯ ಕೆಲಸವನ್ನು ಮಾಡಿ, ಜನರಿಗೆ ಅನುಕೂಲ ಮಾಡಿಕೊಡಲಿ

- ಬಿ.ಪಿ.ಹರೀಶ, ಶಾಸಕ

- - - -31ಕೆಡಿವಿಜಿ7:

ದಾವಣಗೆರೆಯಲ್ಲಿ ಬುಧವಾರ ದೂಡಾ ನೂತನ ಅಧ್ಯಕ್ಷರಾಗಿ ದಿನೇಶ ಕೆ. ಶೆಟ್ಟಿ ಕಾಂಗ್ರೆಸ್‌ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಮ್ಮುಖ ಅಧಿಕಾರ ವಹಿಸಿಕೊಂಡರು. -31ಕೆಡಿವಿಜಿ8:

ದಾವಣಗೆರೆಯಲ್ಲಿ ಬುಧವಾರ ದೂಡಾ ನೂತನ ಅಧ್ಯಕ್ಷರಾಗಿ ದಿನೇಶ ಕೆ. ಶೆಟ್ಟಿ ಕಾಂಗ್ರೆಸ್ಸಿನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಮ್ಮುಖ ಅಧಿಕಾರ ಸ್ವೀಕರಿಸಿದರು.