ಸಾರಾಂಶ
ಬೆಂಗಳೂರು : ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮುಗಿಯುತ್ತಿದ್ದಂತೆ ಬೆಟ್ಟಿಂಗ್ ಭರಾಟೆ ಜೋರಾಗಿದ್ದು, ಚನ್ನಪಟ್ಟಣವೇ ಎಲ್ಲರ ಫೇವರೆಟ್ ಆಗಿದೆ. ವಿಶೇಷವೆಂದರೆ, ಈ ಮೂರು ಕ್ಷೇತ್ರಗಳಲ್ಲಿ ಮಾತ್ರ ಬೆಟ್ಟಿಂಗ್ ಭರಾಟೆ ನಡೆಯುತ್ತಿಲ್ಲ. ಈ ಚುನಾವಣೆಯ ಬಗ್ಗೆ ಆಸಕ್ತಿ ಹೊಂದಿದ ಇತರ ಜಿಲ್ಲೆಗಳಲ್ಲೂ ಬೆಟ್ಟಿಂಗ್ ನಡೆಯುತ್ತಿದೆ.
ಶಿಗ್ಗಾಂವಿ, ಸಂಡೂರು ಕ್ಷೇತ್ರಕ್ಕಿಂತ ಚನ್ನಪಟ್ಟಣವೇ ಎಲ್ಲರ ಫೇವರೆಟ್ ಆಗಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಗೆಲುವಿನ ವಿಚಾರವಾಗಿ 50 ಸಾವಿರ ರು.ನಿಂದ 5 ಲಕ್ಷ ರು.ವರೆಗೆ ಬೆಟ್ಟಿಂಗ್ ನಡೆಯುತ್ತಿರುವುದಾಗಿ ತಿಳಿದು ಬಂದಿದೆ. ಬೆಟ್ಟಿಂಗ್ ಕಣದಲ್ಲಿ ನಿಖಿಲ್ ಗೆಲುವಿನ ಬಗ್ಗೆ ಹೆಚ್ಚು ಭರವಸೆಯನ್ನಿಟ್ಟುಕೊಂಡು ಹಣ ಹೂಡುತ್ತಿದ್ದಾರೆ. ಆರಂಭದಲ್ಲಿ ಚನ್ನಪಟ್ಟಣದಲ್ಲಿ ಸಿಪಿವೈ ಮೇಲುಗೈ ಸಾಧಿಸಿದ್ದರು. ದೇವೇಗೌಡರ ಆಗಮನ, ಜಮೀರ್ ಅಹಮದ್ ಮಾತುಗಳು ನಿಖಿಲ್‌ಗೆ ವರದಾನವಾದವು ಎಂಬುದು ಬೆಟ್ಟಿಂಗ್‌ನಲ್ಲಿರುವವರ ಅಭಿಪ್ರಾಯ. ಚನ್ನಪಟ್ಟಣ ಮಾತ್ರವಲ್ಲದೆ, ಮಂಡ್ಯ, ಮದ್ದೂರುಗಳಲ್ಲಿಯೂ ಚನ್ನಪಟ್ಟಣ ಅಭ್ಯರ್ಥಿಗಳ ಪರ ಬೆಟ್ಟಿಂಗ್ ನಡೆಯುತ್ತಿದೆ.
ಇನ್ನು ಕಾಂಗ್ರೆಸ್ ಭದ್ರಕೋಟೆಯಾಗಿರುವ ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯತ್ತ ಬೆಟ್ಟಿಂಗ್ ಒಲವು ವ್ಯಕ್ತವಾಗುತ್ತಿದೆ. 70% ಬೆಟ್ಟಿಂಗ್ ಅನ್ನಪೂರ್ಣ ಪರವಾಗಿ ಇದೆ, ಬಿಜೆಪಿ ಅಭ್ಯರ್ಥಿ ಬಂಗಾರು ಲಕ್ಷ್ಮಣ್ ಈ ಬಾರಿ ಕ್ಷೇತ್ರದಲ್ಲಿ ಪೈಪೋಟಿ ನೀಡಿದರೂ ಗೆಲ್ಲುವ ಸಾಧ್ಯತೆ ಕಾಂಗ್ರೆಸ್ ಪರವಾಗಿದೆ ಎಂಬುದು ಬೆಟ್ಟಿಂಗ್‌ನಲ್ಲಿ ಇರುವವರ ಅಭಿಪ್ರಾಯ.
ಇನ್ನು, ಶಿಗ್ಗಾಂವಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದ್ದರೂ, ಚುನಾವಣೆಯ ಕೊನೆಯ ಹಂತದ ಬೆಳವಣಿಗೆಗಳ ಆಧಾರದಲ್ಲಿ ಭರತ್ ಬೊಮ್ಮಾಯಿ ಪರವಾಗಿ ಬೆಟ್ಟಿಂಗ್ ಒಲವು ಕಾಣಿಸುತ್ತಿದೆ ಎಂಬ ಮಾಹಿತಿ ಇದೆ.