ಬಾಗಲಕೋಟೆಯ ಉಪ ಚುನಾವಣೆ ಗೆಲುವು ಮುಂದಿನ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಾಗಲಕೋಟೆ ಉಪ ಚುನಾವಣೆ ಉಸ್ತುವಾರಿ ಅರುಣ ಶಹಾಪೂರ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆಯ ಉಪ ಚುನಾವಣೆ ಗೆಲುವು ಮುಂದಿನ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಾಗಲಕೋಟೆ ಉಪ ಚುನಾವಣೆ ಉಸ್ತುವಾರಿ ಅರುಣ ಶಹಾಪೂರ ಹೇಳಿದರು.ನವನಗರದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಬಾಗಲಕೋಟೆ ಉಪ ಚುನಾವಣೆಯ ಪೂರ್ವ ಭಾವಿಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಅಭಿವೃದ್ಧಿ ಕೆಲಸಗಳ ಮೂಲಕ ಇಲ್ಲಿ ಬಿಜೆಪಿ ಭದ್ರಕೋಟೆಯಾಗಿದೆ. ಅದನ್ನು ಮತ್ತೆ ಮರುಸ್ಥಾಪಿಸುವ ಸಂಕಲ್ಪ ನಮ್ಮ ಮುಂದೆ ಇದೆ. ಈ ಉಪ ಚುನಾವಣೆಯಲ್ಲಿನ ಬಿಜೆಪಿ ಗೆಲವು ಮುಂದಿನ 2028ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಉಪಮುಖ್ಯಮಂತ್ರಿ, ಚಿತ್ರದುರ್ಗದ ಸಂಸದರಾದ ಗೋವಿಂದ ಕಾರಜೋಳ ಮಾತನಾಡಿ, ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಾಕಷ್ಟು ಅವಕಾಶಗಳಿವೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಎಲ್ಲಿ ನೋಡಿದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಸರಕಾರದ ಆಡಳಿತಕ್ಕೆ ಜನ ಬೇಸತ್ತು ಹೋಗಿದ್ದಾರೆ. ಬಾಗಲಕೋಟೆಯಲ್ಲಿ ನಮ್ಮ ಗೆಲುವು ಶತಸಿದ್ಧ ಎಂದರು.ಮಾಜಿ ಸಚಿವ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಮಾತನಾಡಿ, ಜಿಲ್ಲೆಯಲ್ಲಿ ನಾವು ಎಲ್ಲ ನಾಯಕರೂ ಒಂದಾಗಿದ್ದೇವೆ. ಎಲ್ಲರೂ ಕೂಡಿ ಬಾಗಲಕೋಟೆ ಉಪಚುನಾವಣೆಯಲ್ಲಿ ಪಕ್ಷ ಗೇಲ್ಲಿಸೋಣ, ಮತ್ತೆ ರಾಜ್ಯದಲ್ಲಿ ಬಿಜೆಪಿಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಸಂಸದ ಪಿ.ಸಿ. ಗದ್ದಿಗೌಡರ ಹಾಗೂ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿದರು. ಸಭೆಯಲ್ಲಿ ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ, ಜಮಖಂಡಿ ಶಾಸಕರಾದ ಜಗದೀಶ ಗುಡುಗುಂಟಿ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ಜಿ.ಎಸ್.ನ್ಯಾಮಗೌಡ, ರಾಜಶೇಖರ ಶೀಲವಂತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಮಲ್ಲಯ್ಯ ಮೂಗನೂರಮಠ, ಅಶೋಕ ಲಿಂಬಾವಳಿ, ಬಸವರಾಜ ಯಂಕಂಚಿ ಸೇರಿದಂತೆ ಅನೇಕರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಭೆಯಲ್ಲಿ ಬಾಗಲಕೋಟೆ ಮತಕ್ಷೇತ್ರದ ಶಕ್ತಿಕೇಂದ್ರ ಪ್ರಮುಖರು ಭಾಗವಹಿಸಿದ್ದರು.