ಸುಭಾಷ್‌ಚಂದ್ರ ಬೋಸ್ ಜನ್ಮದಿನಾಚರಣೆ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ನಿವೃತ್ತ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಸಮೀಪದ ತೋಳೂರು ಶೆಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ‍್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯನ್ನು ಪರಾಕ್ರಮ ದಿನ ಹಾಗೂ ಹುತಾತ್ಮರ ದಿನವಾಗಿ ಅರ್ಥಪೂರ್ಣವಾಗಿ ಶುಕ್ರವಾರ ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ಅವರು ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಸುಭಾಷ್ ಚಂದ್ರ ಬೋಸ್ ದೇಶದ ಸ್ವಾತಂತ್ರ‍್ಯಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಅಪ್ರತಿಮ ದೇಶಭಕ್ತರು. ಅವರ ತ್ಯಾಗ, ಶೌರ್ಯ ಮತ್ತು ನಾಯಕತ್ವ ಯುವ ಪೀಳಿಗೆಗೆ ಸದಾ ಪ್ರೇರಣೆಯಾಗಬೇಕು ಎಂದು ಅವರು ಹೇಳಿದರು.ವಿದ್ಯಾರ್ಥಿಗಳಿಂದ ಭಾಷಣ, ಭಾವಗೀತೆ, ಕೋಲಾಟ, ನೃತ್ಯ ಹಾಗೂ ಚಿತ್ರಕಲೆ ಸ್ಪರ್ಧೆಗಳು ನಡೆಯಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಸಿ.ಕೆ. ಮಲ್ಲಪ್ಪ ಅವರು ರಚಿಸಿದ ‘ನಾಡ ಹನಿ’ ಕಥಾ ಸಂಕಲನವನ್ನು ಶಾಲಾ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಲಾಯಿತು. ಸಂಘದ ವತಿಯಿಂದ ಸುಭಾಷ್ ಚಂದ್ರ ಬೋಸ್ ಭಾವಚಿತ್ರ, ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳು ಹಾಗು ೨೦೨೬ರ ಕ್ಯಾಲೆಂಡರ್ ವಿತರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಡಿ. ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಎಸ್.ಜೆ. ವಾರಿಜಮಣಿ, ಸಂಘದ ಗೌರವ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಉಪಾಧ್ಯಕ್ಷ ಎಚ್.ಜಿ. ಕುಟ್ಟಪ್ಪ, ಕಾರ್ಯದರ್ಶಿ ಬಿ.ಎಂ. ಆನಂದ, ಖಜಾಂಚಿ ಎಸ್.ಆರ್. ಕೆಂಚೇಗೌಡ, ಸಲಹೆಗಾರ ಎಂ.ಎ. ವೀರಪ್ಪ, ನಿರ್ದೇಶಕ ಟಿ.ಕೆ. ಮಾಚಯ್ಯ ಸೇರಿದಂತೆ ಹಲವರು ಇದ್ದರು.
ಸುಭಾಷ್‌ಚಂದ್ರ ಬೋಸ್ ಜನ್ಮದಿನಾಚರಣೆ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.