ಸಾರಾಂಶ
ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಮುಂಬರುವ ಲೋಕಸಭೆ ಚುನಾವಣೆಯ ಜೊತೆಗೇ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಹಾಗೂ ಶಾಸಕರೂ ಆಗಿದ್ದ ರಾಜಾ ವೆಂಕಟಪ್ಪ ನಾಯಕ (67) ಅವರ ನಿಧನದಿಂದಾಗಿ ತೆರವಾಗಿರುವ ಸುರಪುರ ವಿಧಾನಸಭಾ ಕ್ಷೇತ್ರಕ್ಕೂ ಉಪ ಚುನಾವಣೆಯೂ ನಡೆಸುವ ಸಾಧ್ಯತೆಗಳು ದಟ್ಟವಾಗಿವೆ.
2024ರ ಲೋಕಸಭೆ ಚುನಾವಣೆ ಕುರಿತು ಕೇಂದ್ರ ಚುನಾವಣಾ ಆಯೋಗದ ಇಷ್ಟರಲ್ಲೇ ನೀತಿಸಂಹಿತೆ ಘೋಷಿಸಲಿದೆ. ಇದರ ಜೊತೆಗೆನೇ, ಸುರಪುರದ ವಿಧಾನಸಭೆ ಉಪ ಚುನಾವಣೆಯೂ ನಡೆಯುವ ಸಾಧ್ಯತೆ ಹೆಚ್ಚು. ಹೀಗಾಗಿ, ಇವಿಎಂ ಯಂತ್ರಗಳು ಸೇರಿದಂತೆ ಸುರಪುರ ಉಪ ಚುನಾವಣೆಗಾಗಿ ಇನ್ನುಳಿದ ಸಿದ್ಧತೆಗಳನ್ನು ತೀವ್ರಗತಿಯಲ್ಲಿ ನಡೆಸಲಾಗುತ್ತಿದೆ ಜಿಲ್ಲಾಡಳಿತದ ಬಲ್ಲ ಮೂಲಗಳು "ಕನ್ನಡಪ್ರಭ "ಕ್ಕೆ ತಿಳಿಸಿವೆ.ತೆರವಾಗಿರುವ ಸುರಪುರ ವಿಧಾನಸಭೆ ಚುನಾವಣೆಯನ್ನೂ ಏಕಕಾಲಕ್ಕೆ ನಡೆಸಿದರೆ ಸೂಕ್ತ ಎಂಬ ಅಭಿಪ್ರಾಯಗಳ ಹಿನ್ನೆಲೆಯಲ್ಲಿ, ಆಯೋಗ ಈ ಬಗ್ಗೆ ಚಿಂತನೆ ನಡೆಸುತ್ತಿದೆ. ಸುರಪುರ ಮತಕ್ಷೇತ್ರದ ಮತಗಟ್ಟೆಗಳಲ್ಲಿ ಲೋಕಸಭೆಗೆ ಹಾಗೂ ವಿಧಾನಸಭೆಗೆಂದು ಪ್ರತ್ಯೇಕ ಮತಯಂತ್ರಗಳನ್ನು ಅಳವಡಿಸಿ, ಮತದಾನಕ್ಕೆ ಅನುಕೂಲ ಮಾಡಿಕೊಡುವ ಬಗ್ಗೆ ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ.
ಸುರಪುರದ ಶಾಸಕರಾಗಿದ್ದ, ಕಾಂಗ್ರೆಸ್ಸಿನ ರಾಜಾ ವೆಂಕಟಪ್ಪ ನಾಯಕ್ ಅವರು ಅನಾರೋಗ್ಯದಿಂದಾಗಿ ಕಳೆದ ತಿಂಗಳು ಫೆ.25 ರಂದು ನಿಧನರಾಗಿದ್ದರು. ಕಳೆದ ವರ್ಷ (2023) ಮೇ 10 ರಂದು ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಸುರಪುರ (ಶೋರಾಪುರ) ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ನರಸಿಂಹ ನಾಯಕ್ (ರಾಜೂಗೌಡ) ವಿರುದ್ಧ ಕಾಂಗ್ರೆಸ್ಸಿನ ರಾಜಾ ವೆಂಕಟಪ್ಪ ನಾಯಕ್ 25 ಸಾವಿರ ಮತಗಳಿಗೂ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸಿದ್ದರು.ಇದಕ್ಕೂ ಮುನ್ನ, ರಾಜಾ ವೆಂಕಟಪ್ಪ ನಾಯಕ್ ಅವರು ಮೂರು ಬಾರಿ (1994, 1999 ಹಾಗೂ 2013) ಶಾಸಕರಾಗಿ ಆಯ್ಕೆಯಾಗಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ರಾಜಾ ವೆಂಕಟಪ್ಪ ನಾಯಕ್ ನಿಧನಕ್ಕೂ ಕೆಲವು ದಿನಗಳ ಹಿಂದಷ್ಟೇ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರ ತಂದೆ ರಾಜಾ ಕುಮಾರ ನಾಯಕ್ ಸಹ ಎರಡು ಬಾರಿ ಸುರಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಆರ್‌ವಿಎನ್ ಪುತ್ರನಿಗೆ ಕಾಂಗ್ರೆಸ್ ಟಿಕೆಟ್?:ಲೋಕಸಭೆ ಚುನಾವಣೆಯ ಜೊತೆಗೇ ಸುರಪುರ ವಿಧಾನಸಭಾ ಉಪ ಚುನಾವಣೆ ನಡೆದರೆ, ರಾಜಾ ವೆಂಕಟಪ್ಪ ನಾಯಕ್ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆಗಳಿವೆ. 9 ತಿಂಗಳು ಅಂತರದಲ್ಲೇ ತಂದೆಯ ಸಾವಿನ ಅನುಕಂಪದ ಮತಗಳು ಜೊತೆಗೆ, ಕಳೆದ (2023) ಚುನಾವಣೆಯಲ್ಲಿ ತಂದೆಯ ಪ್ರಚಾರದಲ್ಲಿ ಹೆಗಲಿಗೆ ಹೆಗಲಾದ ರಾಜಾ ವೇಣುಗೋಪಾಲ ನಾಯಕ್‌ಗೆ ಇಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಸಬಹುದು. ಕುರುಬ, ಪರಿಶಿಷ್ಟ ಪಂಗಡ/ಜಾತಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಅತಿ ಹೆಚ್ಚಿರುವ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಸಹಕಾರಿಯಾದೀತು ಎಂಬ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ.
ಅಲ್ಲದೆ, ಏಕಕಾಲಕ್ಕೆ ಎರಡೂ ನಡೆದರೆ ಮೋದಿ ಮೇನಿಯಾ ಜೊತೆಗೆ, ಕ್ರಾಸ್ ವೋಟಿಂಗ್ ಆಗಿ ಬಿಜೆಪಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಬಹುದು ಅನ್ನೋದು ಬಿಜೆಪಿಯ ಮತ್ತೊಂದು ಲೆಕ್ಕಾಚಾರ.