ಸಂಸದ ಬಿ.ವೈ.ರಾಘವೇಂದ್ರ ಅವರು ನವದೆಹಲಿಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ, ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶೈಕ್ಷಣಿಕ ವಲಯಕ್ಕೆ ನೇರವಾಗಿ ಅನುಕೂಲ ಕಲ್ಪಿಸುವ ಹಲವು ಮಹತ್ವಪೂರ್ಣ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಅವರು ನವದೆಹಲಿಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ, ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶೈಕ್ಷಣಿಕ ವಲಯಕ್ಕೆ ನೇರವಾಗಿ ಅನುಕೂಲ ಕಲ್ಪಿಸುವ ಹಲವು ಮಹತ್ವಪೂರ್ಣ ವಿಷಯಗಳ ಕುರಿತು ಚರ್ಚೆ ನಡೆಸಿದರು. ಶಿವಮೊಗ್ಗ ಜಿಲ್ಲೆಯ ಪ್ರಮುಖ ಶೈಕ್ಷಣಿಕ ಮೂಲಸೌಕರ್ಯ ಯೋಜನೆಗಳ ಕುರಿತು ಕೇಂದ್ರ ಸಚಿವರ ತುರ್ತು ಗಮನ ಸೆಳೆದ ಸಂಸದ ರಾಘವೇಂದ್ರ ಅವರು, ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯದ ಕೊರತೆಯಿದ್ದು, ಈ ನಿಟ್ಟಿನಲ್ಲಿ ಯುಜಿಸಿಗೆ ಕಳುಹಿಸಲಾಗಿರುವ ವಿಶೇಷ ಅನುದಾನ ಪ್ರಸ್ತಾವನೆಯನ್ನು ಶೀಘ್ರವಾಗಿ ಅನುಮೋದಿಸುವಂತೆ ಒತ್ತಾಯಿಸಿದರು.ಜಿಲ್ಲೆಯ ಸಂತೇಕಡೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಡಿಸೆಂಬರ್ ೨೦೨೪ರಲ್ಲಿ ಮಂಜೂರಾಗಿರುವ ಹೆಚ್ಚುವರಿ ವಿಭಾಗಗಳಿಗೆ ತಕ್ಕಂತೆ ಅಗತ್ಯ ಮೂಲಭೂತ ಸೌಲಭ್ಯಗಳು ಮತ್ತು ಕೊಠಡಿಗಳ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.ಕರ್ನಾಟಕದ ಏಕೈಕ ಸಂಸ್ಕೃತ ಭಾಷಾಭಿಮಾನಿ ಗ್ರಾಮವಾದ ಮತ್ತೂರು-ಹೊಸಳ್ಳಿಯಲ್ಲಿ ರಾಷ್ಟ್ರೀಯ ಆದರ್ಶ ವೇದ ವಿದ್ಯಾಲಯ ಸ್ಥಾಪನೆಗೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಸ್ತಾವನೆಯನ್ನು ಅನುಮೋದಿಸಲು ಸಂಸದರು ಬೇಡಿಕೆಯನ್ನು ಮಂಡಿಸಿದರು.2009ರ ಪೂರ್ವದಲ್ಲಿ ಎಂ.ಫಿಲ್. ಪದವಿ ಪಡೆದ, 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಪದವಿಯನ್ನು ನೆಟ್‌ಗೆ ಸಮಾನವಾಗಿ ಪರಿಗಣಿಸಲು, ಮಹಾರಾಷ್ಟ್ರ ಸರ್ಕಾರದ ಉದಾಹರಣೆಯನ್ನು ಅನುಸರಿಸಿ ಮಾನ್ಯತೆ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು.ಪಿ-ಪೋಷನ್ ಯೋಜನೆಯ ಅಡಿಯಲ್ಲಿ ಕೆಲಸ ಮಾಡುವ 25 ಲಕ್ಷಕ್ಕೂ ಹೆಚ್ಚು ಕುಕ್-ಕಮ್-ಹೆಲ್ಪರ್ಸ್‌ಗಳಿಗೆ ೨೦೦೯ ರಿಂದ ಬದಲಾಗದ ಕೇವಲ 600 ರು. ಕೇಂದ್ರದ ಹಂಚಿಕೆ ದೊರೆಯುತ್ತಿರುವುದರಿಂದ, ಸಂಭಾವನೆ ಹೆಚ್ಚಿಸುವುದು, ಆರೋಗ್ಯ ವಿಮೆ, ಸಾಮಾಜಿಕ ಭದ್ರತೆ ಮತ್ತು ಕಾನೂನುಬದ್ಧ ಹುದ್ದೆ ನೀಡುವಂತೆ, ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಸೇವೆಯಲ್ಲಿ ಇದ್ದ ಶಿಕ್ಷಕರಿಗೆ ಟಿಇಟಿ ಕಡ್ಡಾಯವಾಗಿರುವುದರಿಂದ ಉಂಟಾದ ಆತಂಕಕ್ಕೆ ಪರಿಹಾರವಾಗಿ, ಟಿಇಟಿ ನಿಯಮ ಜಾರಿಗಿಂತ ಮೊದಲೇ ನೇಮಕಗೊಂಡ ಶಿಕ್ಷಕರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.ಶಿವಮೊಗ್ಗ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಪರಿವರ್ತನೆ ನಿಟ್ಟಿನಲ್ಲಿ ಕೇಂದ್ರ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.