ಮಂಗಳೂರಿನಲ್ಲಿ ಕೇವಲ ಮೀನು ತಿನ್ನುವುದಕ್ಕಾಗಿ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.

ಉಡುಪಿ ; ಮಂಗಳೂರಿನಲ್ಲಿ ಕೇವಲ ಮೀನು ತಿನ್ನುವುದಕ್ಕಾಗಿ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.ಉಡುಪಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಅವರು ಕಲಬುರಗಿಯಲ್ಲಿ ಸಂಪುಟ ಸಭೆ ನಡೆಸಿ ನೂರಾರು ಕೋಟಿ ರು.ಗಳ ಆಶ್ವಾಸನೆ ನೀಡಿದ್ದರು. ಆದರೆ ಅವುಗಳಲ್ಲಿ ಒಂದೂ ಈಡೇರಿಲ್ಲ ಎಂದು ನೆನಪಿಸಿದರು.ಕರಾವಳಿಯಲ್ಲಿ ಬದಲಾವಣೆ ತರುತ್ತೇವೆ ಎಂದು ತೋರಿಸಿ, ಇಲ್ಲಿನ ವಾತಾವರಣ ಕೆಡಿಸಿ, ತಮ್ಮ ವೋಟ್ ಬ್ಯಾಂಕ್‌ ಹೆಚ್ಚಿಸಿಕೊಳ್ಳಲು ಸರ್ಕಾರ ಈ ಸಭೆ ನಡೆಸುತ್ತಿದೆ. ಘೋಷಣೆಗಳು ಕಾರ್ಯರೂಪಕ್ಕೆ ಬರಬೇಕು, ಆಗ ಮಾತ್ರ ಸಭೆ ಸಾರ್ಥಕ ಎಂದರು.

ವಂದೇ ಮಾತರಂ ಗೀತೆಗೆ ಕತ್ತರಿ ವಿವಾದದ ಕುರಿತು ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಿಗೆ ಪಾಕಿಸ್ತಾನದ ಬಗ್ಗೆ ಹೆಚ್ಚು ಕಾಳಜಿಯೇ ಅಥವಾ ಕರ್ನಾಟಕದ ಬಗ್ಗೆ ಕಾಳಜಿಯೇ ಎಂಬುದು ಗೊತ್ತಾಗುತ್ತಿಲ್ಲ, ಅವರ ಮಾತಿನ ಹಿಂದೆ ಹಿಂದೆ ರಾಹುಲ್ ಗಾಂಧಿ ಅವರ ಕುಮ್ಮಕ್ಕಿದೆ ಎಂದು ಟೀಕಿಸಿದರು.ವಂದೇ ಮಾತರಂ ಹೇಳುವುದರಲ್ಲಿ ತಪ್ಪೇನಿದೆ ? ದೇಶಕ್ಕೆ ತಾಯಿಯ ಗೌರವ ನೀಡುವುದರಲ್ಲಿ ಕೋಮು ಗಲಭೆ ಎಲ್ಲಿದೆ ? ಕೇವಲ ಮುಸ್ಲಿಂ ವೋಟ್ ಬ್ಯಾಂಕ್‌ಗಾಗಿ ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಹಾಗೂ ರಷ್ಯಾ ಅಧ್ಯಕ್ಷರ ಮುಂದೆ ದೇಶದ ಗೌರವ ಕಾಪಾಡಿಕೊಂಡು ನಡೆದುಕೊಂಡಿದ್ದಾರೆ. ಮೋದಿ ಅವರು ಬಗ್ಗಿದರು, ಅಮೆರಿಕದವರ ಮುಂದೆ ಬಗ್ಗಿದರು ಎಂಬ ಟೀಕೆ ಸರಿಯಲ್ಲ ಎಂದರು. ಗಣೇಶ ವಿಸರ್ಜನಾ ಮೆರವಣಿಗೆಗೆ ಜಿಲ್ಲೆಗೊಂದರಂತೆ ಆದೇಶ ನೀಡಲಾಗುತ್ತಿದೆ, ಚಿತ್ರದುರ್ಗದಲ್ಲಿ ಡಿಜೆಗೆ ಪರವಾನಗಿ ಇಲ್ಲ, ಟಿ. ನರಸೀಪುರದಲ್ಲಿ ಮಸೀದಿ ಮುಂದೆ ಮೆರವಣಿಗೆ ಹಾಗೂ ಪಟಾಕಿಗೆ ಅವಕಾಶವಿಲ್ಲ. ಆದರೆ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅವರ ಕಟೌಟ್‌ಗಳನ್ನು ರಾಜ್ಯದಲ್ಲಿ ಬೇಕಾಬಿಟ್ಟಿಯಾಗಿ ಹಾಕಲಾಗುತ್ತಿದೆ. ಗಣೇಶೋತ್ಸವಕ್ಕೆ ಮಾತ್ರ ನಿಯಮಗಳನ್ನು ವಿಧಿಸಲಾಗುತ್ತಿದೆ. ಮುಸ್ಲಿಮರ ಹಬ್ಬಗಳಿಗೆ ಯಾವುದೇ ನಿಯಮಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಯತ್ನಾಳ್, ರಾಜ್ಯದಲ್ಲಿ ಇಂತಹ ತಾರತಮ್ಯ ಎದುರಿಸಲು ಹಿಂದೂಗಳು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.

ಕರಾವಳಿಗೆ ಗೋವಾ ಮಾದರಿ ಬೇಡ: ಕರಾವಳಿ ಅಭಿವೃದ್ಧಿಗೆ ಗೋವಾ ಮಾದರಿಯಾಗುವುದು ಸರಿಯಲ್ಲ, ಅದನ್ನು ತಡೆಯಬೇಕು ಎಂದು ಯತ್ನಾಳ್ ಹೇಳಿದರು.

ಕರಾವಳಿಯ ಸಂಸ್ಕೃತಿ ಹಾಗೂ ಪರಂಪರೆಗೆ ಪೂರಕವಾದ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು, ಇಲ್ಲಿ ಬೇಕಾದಷ್ಟು ದೇವಾಲಯಗಳು, ಸುಂದರ ಸಮುದ್ರ ತೀರಗಳಿದ್ದು ಪ್ರವಾಸೋದ್ಯಮಕ್ಕೆ ಅವಕಾಶಗಳಿವೆ. ಆದರೇ ಗೋವಾ ಮಾದರಿ ಪ್ರವಾಸೋದ್ಯಮ ನಮ್ಮ ಸಂಸ್ಕೃತಿಗೆ ಹೊಂದಿಕೆಯಾಗುವುದಿಲ್ಲ, ಅದ್ದರಿಂದ ಇಲ್ಲಿ ಗೋವಾದ ಸಂಸ್ಕೃತಿ ಬರದಂತೆ ತಡೆಯಬೇಕು ಎಂದವರು ಹೇಳಿದರು.