ರೈತರಿಗೆ ಪರಿಹಾರ ಕೊಡಲು ಲೆಕ್ಕ ಹಾಕ್ತಾರೆ

| Published : Apr 23 2024, 12:53 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಮೋದಿಯವರು ಹೇಳಿದಂತೆ ಯಾವುದನ್ನು ಈಡೇರಿಸಲಿಲ್ಲ. ಆದರೆ ನಾವು ನುಡಿದಂತೆ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ. ಅವರು ಶ್ರೀಮಂತರ ಸಾಲ ಮನ್ನಾ ಮಾಡುತ್ತಾರೆ. ನಾವು ಬಡವರಿಗೆ ದುಡ್ಡು ಹಾಕಿದರೆ ದಿವಾಳಿಯಾಗುತ್ತದೆ ಎನ್ನುತ್ತಾರೆ. ಆದರೆ, ಅಚ್ಚುಕಟ್ಟಾಗಿ ಯೋಜನೆ ತಲುಪಿಸಿದ್ದು ನಮ್ಮ ಸಾಧನೆ ಎಂದು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ಮೋದಿಯವರು ಹೇಳಿದಂತೆ ಯಾವುದನ್ನು ಈಡೇರಿಸಲಿಲ್ಲ. ಆದರೆ ನಾವು ನುಡಿದಂತೆ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ. ಅವರು ಶ್ರೀಮಂತರ ಸಾಲ ಮನ್ನಾ ಮಾಡುತ್ತಾರೆ. ನಾವು ಬಡವರಿಗೆ ದುಡ್ಡು ಹಾಕಿದರೆ ದಿವಾಳಿಯಾಗುತ್ತದೆ ಎನ್ನುತ್ತಾರೆ. ಆದರೆ, ಅಚ್ಚುಕಟ್ಟಾಗಿ ಯೋಜನೆ ತಲುಪಿಸಿದ್ದು ನಮ್ಮ ಸಾಧನೆ ಎಂದು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಬಬಲೇಶ್ವರ ತಾಲೂಕಿನ ಗಲಗಲಿ ಬಳಿಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಭಾವನೆ ಕೆರಳಿಸುವ ಹಾಗೂ ಬದುಕು ರೂಪಿಸುವ ನಡುವಿನ ಸಂಘರ್ಷದ ಲೋಕಸಭೆ ಚುನಾವಣೆ ಇದಾಗಿದೆ ಎಂದರು.ರೈತರಿಗೆ ವಿಮೆ ಕೊಡುವುದರಲ್ಲೂ ಹಗರಣ ಮಾಡಲಾಗಿದೆ. ಎಕರೆಗೆ ಎಪ್ಪತ್ತು ರುಪಾಯಿ ಪರಿಹಾರವನ್ನು ರೈತರಿಗೆ ನೀಡಿ ಮೋದಿ ಸರ್ಕಾರ ನಾಚಿಕೆ ಮೆರೆದಿದೆ. ಹೀಗಾಗಿ, ಮತದಾರರು ಪ್ರಜಾಪ್ರಭುತ್ವ ಹಕ್ಕನ್ನು ಉಳಿಸಲು ಪ್ರಜ್ಞಾವಂತಿಕೆ ಮೆರೆಯಬೇಕಿದೆ. ಸಂಸತ್ತನ್ನು ತಮ್ಮ ದುರ್ನಡತೆಗೆ ಬಳಸಿಕೊಂಡಿದ್ದಾರೆ. ಚುನಾವಣಾ ಬಾಂಡ್ ಮೂಲಕ ನಡೆಸಿದ ಅವ್ಯವಹಾರದ ಬಣ್ಣವನ್ನು ಸುಪ್ರೀಂ ಕೋರ್ಟ್ ಕಳಚಿದೆ ಎಂದು ವಾಗ್ದಾಳಿ ನಡೆಸಿದರು.

ರೈತರ ಹೋರಾಟಕ್ಕೆ ಬೆಲೆ ಇಲ್ಲ, ಅವರ ಕಲ್ಯಾಣದ ವಿಚಾರವಿಲ್ಲ. ವ್ಯಾಪಾರಿಗಳ ₹ 14 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡುವ ಇವರು, ರೈತರಿಗೆ ನೀಡುವ ಪರಿಹಾರದ ಲೆಕ್ಕ ಹಾಕುತ್ತಾರೆ ಎಂದು ದೂರಿದ ಅವರು, ಸದ್ಯ ಲೋಕಸಭೆಗೆ ವಿವೇಚನೆಯಿಂದ ಆಲಗೂರರಿಗೆ ಮತ ನೀಡಿದರೆ ವಿಜಯಪುರ ಅಭಿವೃದ್ಧಿಯಾಗಲಿದೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ. ಗ್ಯಾರಂಟಿಗಳ ಮೂಲಕ ಬಡವರ ಮನೆಗೆ ಸೌಖ್ಯ ಬಂದಿದೆ. ಬೆಲೆ ಏರಿಕೆ ದಿನಗಳಲ್ಲಿ ಇದು ಸಂಜೀವಿನಿಯಾಗಿದೆ. ಕೇಂದ್ರ ಸರ್ಕಾರ ಎಲ್ಲ ರಂಗಗಳಲ್ಲಿ ಮಾತು ತಪ್ಪಿ ವೈಫಲ್ಯ ಕಂಡಿದ್ದು, ಸಂಸದರು ಯಾವೊಂದು ಕೆಲಸ ಮಾಡಿಲ್ಲ. ಇದೆಲ್ಲ ವ್ಯತ್ಯಾಸ ಗಮನಿಸಿ ತಮಗೆ ಮತ ನೀಡಿದರೆ ನಿಮ್ಮ ವಿಶ್ವಾಸ ಉಳಿಸಿಕೊಳ್ಳುವೆ ಎಂದು ಮನವಿ ಮಾಡಿದರು.

ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಆನಂದಕುಮಾರ ದೇಸಾಯಿ, ಮುಖಂಡರಾದ ಬಸವರಾಜ ದೇಸಾಯಿ, ಎಚ್.ಬಿ.ಹರಣಹಟ್ಟಿ, ಅದೃಶ್ಯಪ್ಪ ದೇಸಾಯಿ, ಸಂಗಮೇಶ ಬಬಲೇಶ್ವರ, ಡಾ.ಮಹಾಂತೇಶ ಬಿರಾದಾರ, ಲಕ್ಷ್ಮಣ ಚಿಕ್ಕದಾನಿ, ತಿಪ್ಪಣ್ಣ ತುಂಗಳ, ಶಶಿಧರ ಬೀದರ, ಎಸ್.ಟಿ.ಪಾಟೀಲ, ರಮೇಶ ದೇಸಾಯಿ, ಶಂಕರಗೌಡ ಪಾಟೀಲ ಮುಂತಾದವರು ಹಾಜರಿದ್ದರು.