ಸಾರಾಂಶ
ಆನಂದ್ ಸಿ. ಕುಂದರ್ ಅವರಿಗೆ ಅಮೃತ ಮಹೋತ್ಸವ ಅಮೃತ ಗೌರವ ನೀಡಲಾಗುತ್ತದೆ. ಕೋಟ ಹೋಬಳಿ ಮಟ್ಟದ ರಾಸುಗಳ ಹಾಲು ಹಿಂಡುವ, ಗೋ ಕರುಗಳ ಸ್ಪರ್ಧೆ, ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಕೋಟ
ಕರಾವಳಿಯ ಪ್ರಸಿದ್ದ ಮತ್ಸ್ಯೋದ್ಯಮಿ ಆನಂದ ಸಿ. ಕುಂದರ್ ಹುಟ್ಟು ಹಬ್ಬದ ಅಮೃತಮಹೋತ್ಸವ ಸಂಭ್ರಮ ಕಾರ್ಯಕ್ರಮದಂಗವಾಗಿ ಇಲ್ಲಿನ ಕೋಟ ಶಾಂಭವೀ ಶಾಲಾ ಮೈದಾನದಲ್ಲಿ ಫೆ.೨೦ರಂದು ಕೋಟ ಹೋಬಳಿ ಮಟ್ಟದ ರಾಸುಗಳ ಹಾಲು ಹಿಂಡುವ, ಗೋ ಕರುಗಳ ಸ್ಪರ್ಧೆ, ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.ಜಿಲ್ಲಾ ಪಶು ಪಾಲನಾ ಮತ್ತು ವೈದಕೀಯ ಸೇವಾ ಇಲಾಖೆ, ಕೆ.ಎಂ.ಎಫ್. ಮಂಗಳೂರು, ಕೋಟ ಸಹಕಾರಿ ವ್ಯವಸಾಯಕ ಸಂಘ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಗೀತಾನಂದ ಫೌಂಡೇಶನ್ ಮಣೂರು, ಕೋಟ ಪಂಚವರ್ಣ ಯುವಕ ಮಂಡಲ ಮತ್ತು ಪಂಚವರ್ಣ ಮಹಿಳಾ ಮಂಡಲ, ಕೋಟ ವಲಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಆನಂದ್ ಸಿ. ಕುಂದರ್ ಅವರಿಗೆ ಅಮೃತ ಮಹೋತ್ಸವ ಅಮೃತ ಗೌರವ ನೀಡಲಾಗುತ್ತದೆ.
ಬೆಳಗ್ಗೆ ೮ಕ್ಕೆ ಕರುಗಳ ನೋಂದಣಿ ಕಾರ್ಯಕ್ರಮಕ್ಕೆ ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿ. ಶೆಟ್ಟಿ ಚಾಲನೆ ನೀಡಲಿದ್ದಾರೆ. 9 ಗಂಟೆಗೆ ತಾಂತ್ರಿಕ ವಿಚಾರಗೋಷ್ಠಿ ಕಾರ್ಯಕ್ರಮಕ್ಕೆ ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಪಶು ವೈದ್ಯಾಧಿಕಾರಿ ಮಂಜುನಾಥ ಅಡಿಗ ಭಾಗವಹಿಸಲಿದ್ದಾರೆ.10 ಗಂಟೆಗೆ ಅಮೃತ ಗೌರವ ಸಮಾರಂಭವನ್ನು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಲಿದ್ದಾರೆ.ಕರುಗಳ ಪ್ರದರ್ಶನವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಸ್ಪರ್ಧೆಯಲ್ಲಿ ಅತ್ಯುತ್ತಮ ಗೋಕರುಗಳ ತಳಿಗಳಿಗೆ ಬಹುಮಾನ ನೀಡಲಾಗುತ್ತದೆ ಎಂದು ಗೋ ಕರುಗಳ ಸ್ಪರ್ಧಾ ಸಮಿತಿ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.