ಆರಂಭಿಕ ಬಾಲ್ಯದ ಆರೈಕೆ ಶಿಕ್ಷಣ ಯೋಜನೆ ವಾಪಸ್ಸಿಗೆ ಒತ್ತಾಯ

| Published : May 28 2024, 01:09 AM IST

ಆರಂಭಿಕ ಬಾಲ್ಯದ ಆರೈಕೆ ಶಿಕ್ಷಣ ಯೋಜನೆ ವಾಪಸ್ಸಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ, ಗರ್ಭಿಣಿಯರ ಹಾಗೂ ಬಾಣಂತಿಯರ ಆರೈಕೆಗೆ ಅಂಗನವಾಡಿ ಕೇಂದ್ರಗಳು ಕೆಲಸ ಮಾಡುತ್ತಿವೆ

ಕನ್ನಡಪ್ರಭ ವಾರ್ತೆ ರಾಯಚೂರು

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆರಂಭಿಕ ಬಾಲ್ಯದ ಆರೈಕೆ (ಇಸಿಸಿಇ) ಶಿಕ್ಷಣ ಪ್ರಾರಂಭಿಸಲು ಸರ್ಕಾರ ಹೊರಡಿಸಿದ ಸುತ್ತೋಲೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಜೂ.3ರಂದು ಕಲಬುರಗಿ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಮುಂದೆ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎಚ್.ಪದ್ಮಾ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾಥಮಿಕ ಶಾಲೆಗಳೆಂದು ಘೋಷಿಸಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು ಎಂದು ಅನೇಕ ವರ್ಷಗಳ ಬೇಡಿಕೆ ಈಡೇರಿಸದ ರಾಜ್ಯ ಸರ್ಕಾರ ಈಗ ಏಕಾಏಕಿ ಆರಂಭಿಕ ಬಾಲ್ಯದ ಆರೈಕೆ ಶಿಕ್ಷಣ ನೀಡಲು ಕಲ್ಯಾಣ ಕರ್ನಾಟಕದ 8 ಜಿಲ್ಲೆಗಳಲ್ಲಿ ಪ್ರಾರಂಭಿಸಲು ಆದೇಶ ನೀಡಿದ್ದು, ಇದು ಅಂಗನವಾಡಿ ಮುಚ್ಚುವ ಹುನ್ನಾರವಾಗಿದೆ. ಸರ್ಕಾರದ ಈ ನಿರ್ಧಾರ ಖಂಡಿಸಿ ಜಿಲ್ಲೆ ಎಲ್ಲಾ ಅಂಗನವಾಡಿ ಕೇಂದ್ರ ಬಂದ್ ಮಾಡಿ ಕಲಬುರಗಿ ಚಲೋ ಹೋರಾಟ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದರು.

ರಾಷ್ಟ್ರೀಯ ಮಕ್ಕಳ ಶಿಕ್ಷಣ ನೀತಿ ಭಾಗವಾಗಿ ಲೀಗ್ ಆಫ್ ನೇಷನ್ ರಾಷ್ಟ್ರಗಳು ಯುನಿಸೆಫ್ ಸಂಸ್ಥೆ ಮೂಲಕ 6 ವರ್ಷದ ಮಕ್ಕಳು ದೇಶದ ಸಂಪತ್ತು, ಸಮಾಜದ ಪುನರುತ್ಪಾದನೆ ಎಂದು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಆರಂಭಿಸಲಾಗಿತ್ತು. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ, ಗರ್ಭಿಣಿಯರ ಹಾಗೂ ಬಾಣಂತಿಯರ ಆರೈಕೆಗೆ ಅಂಗನವಾಡಿಕೇಂದ್ರಗಳು ಕೆಲಸ ಮಾಡುತ್ತಿವೆ. ಇಲ್ಲಿಯೇ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಿ ಬಳಿಕ ಪ್ರಾಥಮಿಕ ಶಾಲೆಗೆ ವರ್ಗಾಯಿಸುವ ಯೋಜನೆ ಸರ್ಕಾರ ರೂಪಿಸಬೇಕಾಗಿತ್ತು. ಆದರೆ ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಇಸಿಸಿಇ ಆರಂಭಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಇದರಿಂದ ಈ ಭಾಗದ 39 ತಾಲ್ಲುಕುಗಳ 1,170 ಅಂಗನವಾಡಿ ಕೇಂದ್ರಗಳು ಮುಚ್ಚಲಿವೆ. ಕೂಡಲೇ ಸರ್ಕಾರ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಮುಖಂಡರಾದ ರಂಗಮ್ಮ, ವರಲಕ್ಷ್ಮೀ,ಡಿ.ಎಸ್.ಶರಣಬಸವ, ಕೆ.ಜಿ.ವೀರೇಶ ಇದ್ದರು.