ಸಾಲ ವಸೂಲಿಗೆ ಕಿರುಕುಳ ನೀಡಿದರೆ ಸಹಾಯವಾಣಿಗೆ ಕರೆ ಮಾಡಿ!

| Published : Jan 31 2025, 12:46 AM IST

ಸಾರಾಂಶ

ಕೇವಲ ವ್ಯಾಪಾರದ ದೃಷ್ಟಿಯಿಂದ ನಡೆದುಕೊಂಡಿದ್ದು ಕಂಡುಬಂದಲ್ಲಿ ದೂರು ಬರದೇ ಇದ್ದರೂ ಸೋಮೋಟೋ ಕೇಸ್ ದಾಖಲಿಸಿ, ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ಎಚ್ಚರಿಕೆ ನೀಡಿದ್ದಾರೆ.

ಧಾರವಾಡ:

ಮೈಕ್ರೋ ಫೈನಾನ್ಸ್, ವಿವಿಧ ಹಣಕಾಸು ಸಂಸ್ಥೆ ಹಾಗೂ ಲೇವಾದೇವಿಗಾರರು ಸಾಲ ವಸೂಲಾತಿಯಲ್ಲಿ ನಿಯಮ ಬಾಹಿರವಾಗಿ ನಡೆದುಕೊಂಡಲ್ಲಿ ಕಿರುಕುಳಕ್ಕೆ ಒಳಗಾದವರು ಪ್ರಕರಣ ದಾಖಲಿಸಿದರೆ, ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಮೈಕ್ರೋಫೈನಾನ್ಸ್, ಫೈನಾನ್ಸ್ ಕಾರ್ಪೋರೇಶನ್, ಲೇವಾದೇವಿಗಾರರು, ಗಿರವಿದಾರರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್‌ಗಳು ಆರ್‌ಬಿಐ ನಿಯಮದ ಪ್ರಕಾರ ವ್ಯವಹಾರ ನಡೆಸಬೇಕು. ಸಾಲದ ಕಾರಣಕ್ಕೆ ಜೀವಹಾನಿ ಆಗಬಾರದು. ನಿದಿ್ಷ್ಟಪಡಿಸಿರುವ ನಿಯಮಗಳ ಚೌಕಟ್ಟಿನಲ್ಲಿ ಸಾಲ ವಸೂಲಾತಿ ಆಗಬೇಕು ಹೊರತು, ಸಾಲಗಾರರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ದೂರು ಬಂದಲ್ಲಿ ಕ್ರಮ ನಿಶ್ಚಿತ ಎಂದರು.

ವಿವಿರ ಫಲಕ ಇರಲಿ:

ಸಾಲ ಪಡೆಯುವ ವ್ಯಕ್ತಿಗೆ ಸಾಲ ಎಷ್ಟು, ಬಡ್ಡಿದರ, ಕಂತು, ವಸೂಲಿ ಸ್ಥಳ, ವಸೂಲುಗಾರ ಯಾರು, ಮುಂತಾದ ವಿವರ ಇರುವ ಕಾರ್ಡ್ ನೀಡಬೇಕು. ತಮ್ಮ ಸಂಸ್ಥೆಯ ಕಚೇರಿಯಲ್ಲಿ ಅಥವಾ ವ್ಯವಹಾರದ ನಿರ್ದಿಷ್ಟ ಸ್ಥಳದಲ್ಲಿ ತಮ್ಮ ಮೈಕ್ರೋಫೈನಾನ್ಸ್ ಆರ್ಥಿಕ ಕಾರ್ಯಚಟುವಟಿಕೆಗಳ ಬಗ್ಗೆ ವಿವರವಾದ ಫಲಕವನ್ನು ಸಾರ್ವಜನಿಕರಿಗೆ ಅಥವಾ ಗ್ರಾಹಕರಿಗೆ ಕಾಣುವಂತೆ ಅಳವಡಿಸಬೇಕು ಎಂದ ಜಿಲ್ಲಾಧಿಕಾರಿ, ಕೇವಲ ವ್ಯಾಪಾರದ ದೃಷ್ಟಿಯಿಂದ ನಡೆದುಕೊಂಡಿದ್ದು ಕಂಡುಬಂದಲ್ಲಿ ದೂರು ಬರದೇ ಇದ್ದರೂ ಸೋಮೋಟೋ ಕೇಸ್ ದಾಖಲಿಸಿ, ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಮಹಾನಗರ ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ವ್ಯಾಪಾರಸ್ಥರ ಬಳಿ ದಿನದ ಬಡ್ಡಿ ಪಡೆದು ಶೇ. 100ಕ್ಕಿಂತಲೂ ಹೆಚ್ಚು ಲಾಭ ಪಡೆಯುವ ಬಡ್ಡಿ ಕುಳಗಳು ಇವೆ. ರೈತರಿಂದ ದಲ್ಲಾಳಿ ಅಂಗಡಿಗಳಲ್ಲಿಯೂ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ನೊಂದವರು ದೂರು ನೀಡಿದರೆ ಪೊಲೀಸ್ ಇಲಾಖೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಿದೆ ಎಂದರು.

ಎಸ್ಪಿ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಮೈಕ್ರೋಫೈನಾನ್ಸ್ ಹಾಗೂ ಇತರ ಸಾಲ ನೀಡುವ ಸಂಘಗಳು ಗ್ರಾಮೀಣ ಭಾಗದಲ್ಲಿ ಸಾಲ ವಸೂಲಾತಿಗಾಗಿ ಸಂಘದ ಗುಂಪಿನ ಸದಸ್ಯರು, ಗ್ರಾಮದ ಪ್ರಮುಖರನ್ನು ಬಳಸಿಕೊಳ್ಳುತ್ತಿರುವ ಮತ್ತು ಸಾಲಗಾರರ ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರು ಮತ್ತು ಒಡನಾಡಿಗಳ ಮೂಲಕವೂ ಸಾಲ ವಸೂಲಾತಿಗೆ ಒತ್ತಡ ಹಾಕುತ್ತಿರುವ ಮಾಹಿತಿ ಬಂದಿದೆ. ಇವುಗಳನ್ನು ಬೀಟ್ ಪೊಲೀಸ್‌ ಹಾಗೂ ಇತರ ಮೂಲಗಳ ಮೂಲಕ ಪರಿಶೀಲಿಸಲಾಗುತ್ತಿದೆ. ಅಂತಹ ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು.

ಆರ್‌ಬಿಐನ ಸಹಾಯಕ ಪ್ರಧಾನ ವ್ಯವಸ್ಥಾಪಕ ಅರುಣಕುಮಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ಅಗ್ರಣಿ ಬ್ಯಾಂಕನ ವ್ಯವಸ್ಥಾಪಕ ಪ್ರಭುದೇವ ಎನ್.ಜಿ, ಸಹಕಾರಿ ಸಂಘಗಳ ಉಪನಿಬಂಧಕ ರಮೇಶ ಬಗಲಿ ಇದ್ದರು.ಸಹಾಯವಾಣಿ ಆರಂಭರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿ ನೆಪದಲ್ಲಿ ಸಾಲಗಾರರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುಖ್ಯಮಂತ್ರಿಗಳ ಸೂಚನೆಯಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ನೊಂದವರು 0836-2445508 ಅಥವಾ ಟೋಲ ಪ್ರೀ ನಂ. 1077ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಕರೆ ಸ್ವೀಕರಿಸಲು ವಾರದ ಏಳು ದಿನಗಳಲ್ಲಿ 24 ಗಂಟೆ ಕಾಲ ಅಧಿಕಾರಿಗಳಿರುತ್ತಾರೆ. ಜತೆಗೆ ದೂರಿನ ಸಮಸ್ಯೆ ಅಂಶಗಳ ಬಗ್ಗೆ ಆಯಾ ತಾಲೂಕಿನ ತಹಸೀಲ್ದಾರ್‌ಗೆ ಮತ್ತು ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ನೀಡುವರು. ಜಿಲ್ಲಾಧಿಕಾರಿ ಕಚೇರಿಯಲ್ಲಿನ ಈ ಸಹಾಯವಾಣಿ ಕೇಂದ್ರ ಮೇಲುಸ್ತುವಾರಿ ಅಧಿಕಾರಿಯನ್ನಾಗಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ ಬಗಲಿ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.