ಸಾರಾಂಶ
ಕನ್ನಡಪ್ರಭ ವಾರ್ತೆ, ಕಡೂರು
ಮೂರು ತಿಂಗಳ ಒಳಗೆ ಎಲ್ಲ ಖಾತೆದಾರರು ಇ-ಖಾತಾ ಮತ್ತು ಬಿ- ಖಾತಾ ಪಡೆಯಬೇಕು ಎಂದು ಸರ್ಕಾರ ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ಪುರಸಭೆಯಿಂದ ಪಟ್ಟಣದ ಖಾತೆದಾರರಿಗೆ ಇ- ಖಾತಾ ವಿತರಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು. ಶನಿವಾರ ಇ-ಖಾತಾ ಅಭಿಯಾನಕ್ಕೆ ಪುರಸಭೆ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಸದಸ್ಯರೊಂದಿಗೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪಟ್ಟಣದಲ್ಲಿ ವಿವಿಧ ಬಡಾವಣೆಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಸೊತ್ತಿಗೆ ಇ-ಖಾತಾ ನೀಡಿಲ್ಲ. ಇ-ಖಾತಾ ಆಗದಿರುವವರಿಗೆ ಬಿ-ಖಾತಾ ನೀಡುತ್ತಿಲ್ಲ. ಸದರಿ ಸಮಸ್ಯೆ ನಿವಾರಣೆಯಾಗದೆ ರಾಜ್ಯಾದ್ಯಂತ ಕಗ್ಗಂಟಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಇಲಾಖೆ ಅಧಿಕಾರಿಗಳಾದ ರಹೀಮ್ ಖಾನ್, ಸಚಿವ ಭೈರತಿ ಸುರೇಶ್ , ಇಲಾಖೆಯ ಕಾರ್ಯದರ್ಶಿ ಯೋಜನೆ ರೂಪಿಸಿದ್ದು, ಈ ನಿಟ್ಟಿನಲ್ಲಿ ಸೆಪ್ಟೆಂಬರ್ 2024ಕ್ಕೂ ಹಿಂದಿನ ಕ್ರಯ ಪತ್ರ, ದಾನಪತ್ರ ಮತ್ತಿತರ ದಾಖಲೆ ನೀಡಿ ಮೂರು ತಿಂಗಳ ಒಳಗಾಗಿ ಎಲ್ಲ ಖಾತೆದಾರರು ಇ-ಖಾತಾ ಮತ್ತು ಬಿ- ಖಾತಾ ಪಡೆಯಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ ಎಂದರು.ಪಟ್ಟಣದ 23 ವಾರ್ಡುಗಳ ಸದಸ್ಯರು ತಮ್ಮ ವಾರ್ಡಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾದ ಸ್ವತ್ತುಗಳನ್ನು ಗುರುತಿಸಿ ಅವರ ಆಸ್ತಿಗಳಿಗೆ ದಾಖಲೆ ಮಾಡಿಸುವುದರಿಂದ ಅವರ ಸ್ವತ್ತುಗಳನ್ನು ಪರಭಾರೆ, ಸಾಲ ಪಡೆಯಲು, ಕುಟುಂಬದ ವಿಭಾಗ ಪತ್ರ ಮಾಡಿಸಲು ಅವಕಾಶವಿದೆ ಎಂದರು. ಈ ಸೌಲಭ್ಯ ಜನರಿಗೆ ನೀಡುವುದರಿಂದ ರಾಜ್ಯ ಸರ್ಕಾರಕ್ಕೂ ಆದಾಯ ಬರಲಿದೆ. ಇದರಿಂದ ಸ್ಥಳೀಯ ಸಂಸ್ಥೆಗಳು ಜನರಿಂದ ಬಂದ ತೆರಿಗೆ ಹಣದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ. ಪ್ರತಿಯೊಬ್ಬರೂ ಕೂಡ ತೆರಿಗೆಗೆ ಒಳಪಡಬೇಕು. 23 ವಾರ್ಡುಗಳು ಹಾಗೂ ಪುರಸಭೆ ವ್ಯಾಪ್ತಿಯ ಕಂದಾಯ ಇಲಾಖೆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದರೆ ಅಂತಹ ಕಟ್ಟಡವನ್ನು ಸಕ್ರಮ ಮಾಡಿಸಿ ಇ- ಖಾತೆಗೆ ಒಳಪಡಿಸಿ ಇ-ಖಾತಾ ಮಾಡಲಾಗುವುದು. ಇದರ ಸದುಪಯೋಗವನ್ನು ಎಲ್ಲರೂ ಪಡೆದು ಪಟ್ಟಣದ ಅಭಿವೃದ್ಧಿಗೆ ಸಾರ್ವಜನಿಕರು ತೆರಿಗೆ ಕಟ್ಟುವ ಮೂಲಕ ಸಹಕರಿಸಬೇಕು ಎಂದರು.
ಶೀಘ್ರ ಪಟ್ಟಣದ 23 ವಾರ್ಡುಗಳಲ್ಲೂ ಖಾತಾ ಅಭಿಯಾನ ಮಾಡಲಿದ್ದೇವೆ ಬಡಾವಣೆಗಳಿಗೆ ನಾವು, ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಸದಸ್ಯರನ್ನು ಒಳಗೊಂಡ ಇ- ಖಾತೆ ಕೊಡುವ ಕಾರ್ಯಕ್ರಮ ಪ್ರಾರಂಭಿಸುತ್ತೇವೆ. ಅನಧಿಕೃತ ಕಟ್ಟಡ ಮತ್ತು ಕಂದಾಯ ಜಾಗದಲ್ಲಿರುವವರು ಮತ್ತು ಹಳೆಯ ಕಡೂರು ಪಟ್ಟಣದ ಜನರು ಕೂಡ ತೆರಿಗೆ ವ್ಯಾಪ್ತಿಗೆ ಬಂದು ಕಂದಾಯ ಕಟ್ಟಿದರೆ ಮಾತ್ರ ಬಿ ಖಾತೆಗೆ ಒಳಪಡುತ್ತಾರೆ. ಹಾಗಾಗಿ ಎಲ್ಲರೂ ತಮ್ಮ ಮನೆ ಮತ್ತು ನಿವೇಶನಗಳ ತೆರಿಗೆ ನೀಡಿ ದಾಖಲೆ ಮಾಡಿಸಿಕೊಳ್ಳಬೇಕು ಎಂದರು. ಮುಖ್ಯಾಧಿಕಾರಿ ಕೆ. ಎಸ್ ಮಂಜುನಾಥ್ ಮಾತನಾಡಿ, ಇ-ಖಾತಾ ಮತ್ತು ಬಿ-ಖಾತಾ ಕುರಿತು ಕಚೇರಿ ವೇಳೆಯಲ್ಲಿ ಬಂದು ಮಾಹಿತಿ ಪಡೆಯಬಹುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಇ- ಖಾತಾವನ್ನು ಸಾಂಕೇತಿಕವಾಗಿ ನಿವಾಸಿಗಳಾದ ರೇಣುಕಾ, ಸವಿತಾ, ಮರಿಯಮ್ಮ ಮತ್ತಿತರರಿಗೆ ವಿತರಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಗೋವಿಂದರಾಜು, ಯಾಸೀನ್, ಮೋಹನ್, ಮನುಮರುಗುದ್ದಿ, ಸುಧಾ ಉಮೇಶ್, ಕಮಲಾ ವೆಂಕಟೇಶ್, ಕೆ.ಎಸ್.ತಿಪ್ಪೇಶ್. ಶಾಮಿಯಾನ ಚಂದ್ರು,ಚಿನ್ನರಾಜು, ಹರ್ಷಕುಮಾರ್, ತಿಮ್ಮಯ್ಯ, ಪ್ರೇಮ್, ಶ್ರೇಯಸ್, ಜಗದೀಶ್,ಕುಮಾರ್, ಚಂದ್ರಪ್ಪ, ಸ್ತ್ರೀಶಕ್ತಿ ಸಂಘದ ಮಹಿಳೆಯರು ಮತ್ತಿತರರು ಇದ್ದರು.-- ಬಾಕ್ಸ್ ಸುದ್ದಿಗೆ--- ಇ.ಖಾತಾ ಅಭಿಯಾನ ಒಂದು ಮಹತ್ವಕಾಂಕ್ಷಿ ಯೋಜನೆ. ಬಡವರು ಸೇರಿದಂತೆ ಎಲ್ಲರ ಆಸ್ತಿಗಳು ಮಾಲೀಕರ ಹೆಸರಿಗೆ ಖಾತೆ ಮಾಡುವ ಪ್ರಮುಖ ಯೋಜನೆ. ಯಾರೇ ಮಧ್ಯವರ್ತಿಗಳು ಇಲ್ಲದೆ ಜನರು ನೇರವಾಗಿ ಪುರಸಭೆಗೆ ಬಂದು ದಾಖಲೆ ಮಾಡಿಸಿಕೊಳ್ಳಬಹುದು. ಇದಕ್ಕೆ ಯಾವುದೇ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ ಹಾಗೇನಾದರೂ ಸಿಬ್ಬಂದಿ ಮತ್ತು ಮದ್ಯವರ್ತಿಗಳು ಕಂಡು ಬಂದಲ್ಲಿ ತಮಗೆ ತಿಳಿಸಿದಲ್ಲಿ ಕಠಿಣ ಕ್ರಮಕೈಗೊಳ್ಳುತ್ತೇವೆ. ಹಾಗಾಗಿ ಯಾರಿಗೂ ಹಣ ನೀಡದೆ ಜನರು ಮೋಸ ಹೋಗಬಾರದು
-- ಭಂಡಾರಿ ಶ್ರೀನಿವಾಸ್,ಅಧ್ಯಕ್ಷರು . 1ಕೆಕೆಡಿಯು1.ಕಡೂರು ಪುರಸಭೆಯಿಂದ ಇ-ಖಾತ ವಿತರಣಾ ಅಭಿಯಾನ ಕಾರ್ಯಕ್ರಮಕ್ಕೆ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಚಾಲನೆ ನೀಡಿದರು.