ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಆಧುನಿಕತೆಗೆ ಬೆನ್ನುಬಿದ್ದು ಆರೋಗ್ಯಕರ ಬದುಕನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಔಷಧೀಯ ಗುಣಗಳುಳ್ಳ ಗಡ್ಡೆಗೆಣಸು, ಸೊಪ್ಪುಗಳ ಮಹತ್ವದ ಬಗ್ಗೆ ಅರಿವು ಹೊಂದಬೇಕು. ಇವುಗಳನ್ನು ನಿತ್ಯ ಉಪಯೋಗಿಸುವ ಬಗ್ಗೆ ಅಭಿಯಾನವನ್ನು ಕೈಗೊಳ್ಳಬೇಕು ಎಂದು ಅಡಕೆ ಪತ್ರಿಕೆ ಸಂಪಾದಕ, ಅಂತರ್ಜಲ ತಜ್ಞ ಶ್ರೀಪಡ್ರೆ ಹೇಳಿದ್ದಾರೆ.ಮಂಗಳೂರಿನ ಸಂಘನಿಕೇತನದಲ್ಲಿ ಶನಿವಾರ ಎರಡು ದಿನಗಳ ಅಂತರ್‌ರಾಜ್ಯ ಮಟ್ಟದ ಗೆಡ್ಡೆಗೆಣಸು, ಸೊಪ್ಪು ಮೇಳದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಕುಳಿತಲ್ಲಿಗೆ ಆಹಾರ ಪೂರೈಕೆಯಾಗುವ ಇಂದಿನ ಕಾಲದಲ್ಲಿ ಕಂದಮೂಲಗಳನ್ನು ಸಂರಕ್ಷಿಸುವ ಕೆಲಸಗಳು ಆಗಬೇಕಾಗಿದೆ. ಈ ದಿಶೆಯಲ್ಲಿ ಕಂದಮೂಲ ಮೇಳ ಆರಂಭಿಕ ದಿಟ್ಟ ಹೆಜ್ಜೆಯಾಗಿದೆ. ಆಧುನಿಕತೆಯ ಆಹಾರ ಪದ್ಧತಿಯನ್ನು ಬಳಸುವ ಮೂಲಕ ಸಂಪಾದನೆಯ ಬಹುಅಂಶವನ್ನು ಅನಾರೋಗ್ಯ ಕಾರಣ ಆಸ್ಪತ್ರೆಗೆ ಸುರಿಯುವಂತಾಗಿದೆ. ರೋಗನಿರೋಧಕ ಶಕ್ತಿ ಇರುವ ಗೆಡ್ಡೆಗೆಣಸು, ಸೊಪ್ಪುಗಳನ್ನು ದೈನಂದಿನ ಜೀವನದಲ್ಲಿ ಉಪಯೋಗಿಸಿದರೆ, ಕನಿಷ್ಠ ರೋಗದಿಂದ ದೂರ ಇರಲು ಸಾಧ್ಯವಿದೆ. ಅದಕ್ಕಾಗಿ ಗಡ್ಡೆಗೆಣಸು, ಸೊಪ್ಪು ಬೆಳೆಸುವ ಪ್ಯಾಕೆಜ್ ಮಾಡಿಕೊಟ್ಟರೆ, ಎಲ್ಲರ ಮನೆಗಳಲ್ಲೂ ಕಂದಮೂಲ ಬೆಳೆಸಲು ಅನುಕೂಲವಾಗಲಿದೆ, ಇದನ್ನು ಅಭಿಯಾನವಾಗಿ ಮಾರ್ಪಡಿಸಬೇಕು ಎಂದು ಅವರು ಆಶಿಸಿದರು.ವಿಷ ರಹಿತ ಅಡುಗೆ ಮನೆಗೆ ಸಂಕಲ್ಪಿಸಿ: ಕಾಸರಗೋಡು ಉಪ್ಪಳ ಕೊಂಡೆವೂರು ಮಠದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ದೀಪ ಬೆಳಗಿಸಿ, ಗೆಡ್ಡೆಗೆಣಸನ್ನು ತುಂಡರಿಸುವ ಮೂಲಕ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಧಾರ್ಮಿಕ ಕೇಂದ್ರಗಳಲ್ಲೂ ಸಾವಯವ ಕೃಷಿ ಕಾರ್ಯಕ್ಕೆ ಮುಂದಾಗಬೇಕು. ಹಡಿಲು ಬಿದ್ದ ಜಮೀನಿನಲ್ಲಿ ಕೃಷಿ ನಡೆಸಬೇಕು. ಪ್ರತಿ ಮನೆಯು ವಿಷ ರಹಿತ ಅಡುಗೆ ಮನೆ ಆಗಬೇಕು ಎಂದು ಆಶಿಸಿದರು.ಪ್ರತಿ ಮನೆಯಲ್ಲಿ ಗೋ, ಕೃಷಿ: ನಾವು ಮನೆಯಲ್ಲಿ ವಿಷ ಉಣ್ಣುತ್ತೇವೆ, ಮಾತ್ರವಲ್ಲ ಮನೆಗೆ ಬರುವವರಿಗೂ ವಿಷವನ್ನೇ ಕೊಡುತ್ತೇವೆ. ವಿಷವಲ್ಲದ ಸಾವಯವ ಕೃಷಿಯತ್ತ ಮುಖಮಾಡಬೇಕು. ಅಂಗಳ, ಗದ್ದೆಗಳಲ್ಲಿ ಕೃಷಿ ಮಾಡಿದರೆ ಆಯಿಲ್, ಮಣ್ಣು, ಶಾಖದ ಸಂಹವನ ಉಂಟಾಗುತ್ತದೆ. ಇದು ಆರೋಗ್ಯಕ್ಕೆ ಉತ್ತಮ. ಮನೆ ಮಂದಿ ಯಾವಾಗಲೂ ಶುದ್ಧ ಆಹಾರ ಸೇವಿಸಬೇಕು. ಪ್ರತಿ ಮನೆಯಲ್ಲಿ ಗೋಸಾಕಾಣಿಕೆ ಆಗಬೇಕು, ಗ್ರಾಮಕ್ಕೊಂದು ಗೋ ಶಾಲೆ ಇರಬೇಕು. ಕೃಷಿಕರ ಬಳಗ ಆಗಬೇಕು. ಮನೆಗೆ ಬೇಕಾಗುವ ತರಕಾರಿಯನ್ನು ಮನೆಯಲ್ಲೇ ಬೆಳೆಸಬೇಕು ಎಂದು ಅವರು ಹೇಳಿದರು. ಕಂದಮೂಲ ಆಹಾರ ಸೇವಿಸಿ: ಗೆಡ್ಡೆಗೆಣಸು, ಸೊಪ್ಪು ಮೇಳದ ಪ್ರದರ್ಶನಕ್ಕೆ ಚಾಲನೆ ನೀಡಿದ ದ.ಕ. ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ, ನಮ್ಮ ಆರೋಗ್ಯಕರ ಬದುಕು ಕಟ್ಟಿಕೊಳ್ಳಲು ಕಂದಮೂಲಗಳ ಆಹಾರವನ್ನು ಸೇವಿಸುವ ಪರಿಪಾಠ ರೂಢಿಸಿಕೊಳ್ಳಬೇಕು. ರೋಗನಿರೋಧಕ ಶಕ್ತಿಗೆ ಹೆಚ್ಚಿನ ಗೆಡ್ಡೆಗೆಣಸು ಸೇವಿಸಬೇಕು ಎಂದರು.
ಶಾಲೆಗಳಲ್ಲಿ ಕಂದಮೂಲಗಳ ಕಾರ್ಯಕ್ರಮ: ಗೆಡ್ಡೆಗೆಣಸು, ಸೊಪ್ಪು ಕೃಷಿ ಕುರಿತ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಸರಸ್ವತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಪ್ರತಿ ಮನೆಗಳಲ್ಲಿ ವಿಷಯುಕ್ತ ಆಹಾರ ತಯಾರಾಗುತ್ತಿದೆ. ಋಷಿ ಮತ್ತು ಕೃಷಿ ಸಂಸ್ಕೃತಿ ಒಟ್ಟಾದರೆ ಖುಷಿ ಮೇಳೈಸುತ್ತದೆ. ಮುಂದಿನ ದಿನಗಳಲ್ಲಿ ಕರಾವಳಿಯ ಶಾಲೆಗಳಲ್ಲೂ ಕಂದಮೂಲಗಳ ಅರಿವು ಕಾರ್ಯಕ್ರಮ ನಡೆಯಲಿದೆ ಎಂದರು.ಕಂದಮೂಲ ಮೇಳದ ಗೌರವಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ, ಹೈನುಗಾರಿಕೆ, ಕೃಷಿ ವಿಜ್ಞಾನದ ತಿಳಿವಳಿಕೆ ಇಂದಿನ ಅಗತ್ಯವಾಗಿದ್ದು, ಇಂತಹ ಮೇಳಗಳಿಗೆ ಮಕ್ಕಳನ್ನು ಕರೆದುಕೊಂಡು ಬರಬೇಕು. ಮುಂದಿನ ವರ್ಷ ನನ್ನ ಸಂಸ್ಥೆಯಲ್ಲೂ ಕಂದಮೂಲ ಮೇಳ ಆಯೋಜಿಸಲಾಗುವುದು ಎಂದರು.
ಕಂದಮೂಲ ಸಮಿತಿಯ ಅಧ್ಯಕ್ಷ ಪ್ರಭಾಕರ ಶರ್ಮಾ ಅಧ್ಯಕ್ಷತೆ ವಹಿಸಿದ್ದರು.ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕ ಡಾ.ವಾಮನ ಶೆಣೈ ಅವರು ಧ್ವಜಾರೋಹಣ ನೆರವೇರಿಸಿದರು.
ಸಾವಯವ ಕೃಷಿ ಗ್ರಾಹಕ ಬಳಗ ಗೌರವಾಧ್ಯಕ್ಷ ಅಡ್ಡೂರು ಕೃಷ್ಣ ರಾವ್, ಕಂದಮೂಲ ಕಾರ್ಯಾಧ್ಯಕ್ಷ ಜಿ.ಆರ್.ಪ್ರಸಾದ್, ಕಾರ್ಯದರ್ಶಿ ರತ್ನಾಕರ ಕುಳಾಯಿ, ಕೋಶಾಧಿಕಾರಿ ಶರತ್ ಕುಮಾರ್ ಮತ್ತಿತರರಿದ್ದರು.ಭರತ್‌ರಾಜ್ ಸೊರಕೆ ಹಾಗೂ ಜಯಶ್ರೀ ಪ್ರವೀಣ್ ನಿರೂಪಿಸಿದರು.
ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಆಶ್ರಯದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿ, ಶ್ರೀಸರಸ್ವತಿ ಚಾರಿಟೇಬಲ್ ಟ್ರಸ್ಟ್ ಮತ್ತು ಹಲವು ಸಂಘಸಂಸ್ಥೆಗಳ ಸಹಕಾರದಲ್ಲಿ ಕಂದಮೂಲ ಅಂತ್‌ರಾಜ್ಯ ಗೆಡ್ಡೆ ಗೆಣಸು ಮತ್ತು ಸೊಪ್ಪು ಮೇಳ ನಡೆಯುತ್ತಿದೆ.ಸಮಾರಂಭದಲ್ಲಿ ಕಂಡದ್ದು...
-ಗೆಡ್ಡೆ ಗೆಣಸು ಮತ್ತು ಸೊಪ್ಪಿನ ವಿಶೇಷತೆ ಸಾರುವ ಆಶಯ ಗೀತೆಯನ್ನು ಸಮಾರಂಭದಲ್ಲಿ ಪ್ರಸ್ತುತಪಡಿಸಲಾಯಿತು. -ಅತಿಥಿಗಳಿಗೆ ಹಾಳೆ ತಟ್ಟೆಯಲ್ಲಿ ಸಾವಯವ ಬೆಲ್ಲ, ಅಕ್ಕಿ ಹಾಗೂ ಸೊಪ್ಪುನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಲಾಯಿತು. -ಮೊದಲ ದಿನ ಶನಿವಾರ ‘ಕಂದಮೂಲ ಜ್ಞಾನ ಸಂಪತ್ತು ಆರೋಗ್ಯದ ಕರಾಮತ್ತು’ ಬಗ್ಗೆ ಮಧ್ಯಾಹ್ನ ಹಾಗೂ ಸಂಜೆ ‘ಹಿತ್ತಲ ಗಿಡ ಮದ್ದೇ?’ ಕುರಿತು ಯುವ ವಿಚಾರಗೋಷ್ಠಿ ನಡೆಯಿತು.