ಸಾರಾಂಶ
-ವಾರ್ಷಿಕ ಕ್ರಿಯಾ ಯೋಜನೆಯ ಅನುಮೋದನೆಗಾಗಿ ವಿಶೇಷ ಗ್ರಾಮ ಸಭೆ ಆಯೋಜನೆ
----ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ 2025-26 ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಸಿಒ ಎಚ್.ಎಸ್. ಕೀರ್ತನಾ ಹೇಳಿದರು.ಕ್ರಿಯಾ ಯೋಜನೆ ಸಿದ್ಧಪಡಿಸಲು ಮನೆ ಮನೆ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಾಮಸ್ಥರಿಗೆ ಹಾಗೂ ರೈತರಿಗೆ ಯೋಜನೆಯಡಿ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ವೈಯಕ್ತಿಕ ಕಾಮಗಾರಿಗಳ ಬೇಡಿಕೆ ಸಂಗ್ರಹಿಸಲಾಗುತ್ತಿದೆ. ಅಕ್ಟೋಬರ್ 3 ರಿಂದ ನವೆಂಬರ್ 30 ರವರೆಗೆ 2 ತಿಂಗಳ ಕಾಲ ವಾರ್ಷಿಕ ಕ್ರಿಯಾ ಯೋಜನೆಯ ಅನುಮೋದನೆಗಾಗಿ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ ಕೆಲಸ, ಗಂಡು-ಹೆಣ್ಣಿಗೂ ಸಮಾನ ಕೆಲಸ ಸಮಾನ ಕೂಲಿ (ಅಂದರೆ ಪ್ರತಿದಿನಕ್ಕೆ 349 ರು.ಳ ಕೂಲಿ) ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯಗಳು ಮತ್ತು ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆ, ಹಿರಿಯ ನಾಗರಿಕರಿಗೆ ವಿಶೇಷ ಚೇತನರಿಗೆ ನಿರ್ವಹಿಸಬೇಕಾದ ಕಾಮಗಾರಿ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ಇರುವುದು. ಕಾಮಗಾರಿ ಸ್ಥಳದಲ್ಲಿ ಒದಗಿಸಲಾಗುವ ಸೌಲಭ್ಯಗಳು, ಅಕುಶಲ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾಂತರು ನಿರ್ವಹಿಸುವ ಕೆಲಸಕ್ಕೆ ಕೂಲಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಶೇ.10 ರಷ್ಟು ಕೆಲಸದ ಪ್ರಮಾಣದಲ್ಲಿರುವ ರಿಯಾಯಿತಿ ನೀಡುವುದರ ಬಗ್ಗೆ ಮಾಹಿತಿಯನ್ನು ಒದಗಿಸಲಾಗುತ್ತಿದೆ.ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿಶೇಷ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಗಳು ನಡೆಯುತ್ತಿದ್ದು, ವೈಯಕ್ತಿಕ ಕಾಮಗಾರಿಗಳಾದ ಜಾನುವಾರು ಶೆಡ್, ಕುರಿ, ಕೋಳಿ ಹಾಗೂ ಹಂದಿ ಶೆಡ್ ನಿರ್ಮಾಣ, ತೋಟಗಾರಿಕೆ ಬೆಳೆ, ರೇಷ್ಮೆ ಬೆಳೆ ಹಾಗೂ ಕೃಷಿ ಪ್ರದೇಶ ವಿಸ್ತರಣೆ, ಕಂದಕ ಬದು, ಕೃಷಿ ಹೊಂಡ ನಿರ್ಮಾಣ, ಬೂದು ನೀರು, ಬಚ್ಚಲು ಗುಂಡಿ ನಿರ್ಮಿಸಿಕೊಳ್ಳಲು ಉದ್ಯೋಗ ಚೀಟಿ ಹೊಂದಿದ ಎಲ್ಲಾ ಕುಟುಂಬಗಳಿಗೆ ಅವಕಾಶವಿದೆ. ಗ್ರಾಮ ಸಭೆಯಲ್ಲಿ ಭಾಗವಹಿಸಿ ಬೇಡಿಕೆಯನ್ನು ಸಲ್ಲಿಸಿ, ನರೇಗಾ ಯೋಜನೆಯಡಿ ಅರ್ಹ ಫಲಾನುಭವಿಗಳು ತಮ್ಮ ಜೀವಿತಾವಧಿಯಲ್ಲಿ 5 ಲಕ್ಷ ರು.ಗಳ ನೆರವು ಪಡೆಯಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಪೋಟೋ ಫೈಲ್ ನೇಮ್ 23 ಕೆಸಿಕೆಎಂ 1