ಸಾರಾಂಶ
ಮಂಗಳೂರು : ಅಡಕೆ ಬೆಳೆಗಾರರ ಹಿತರಕ್ಷಣಾ ಸಂಸ್ಥೆ ಕ್ಯಾಂಪ್ಕೋ, ರಾಷ್ಟ್ರೀಯ ರಕ್ಷಣಾ ನಿಧಿಗೆ (ಎನ್‌ಡಿಎಫ್) 5 ಕೋಟಿ ರು.ದೇಣಿಗೆ ಪ್ರಕಟಿಸಿದೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಈ ಬಗ್ಗೆ ಮಾಹಿತಿ ನೀಡಿದರು. ‘ಆಪರೇಷನ್ ಸಿಂದೂರ’ ವನ್ನು ಸಂಸ್ಥೆ ಸಂಪೂರ್ಣವಾಗಿ ಬೆಂಬಲಿಸಲಿದೆ. ಪ್ರಸ್ತುತ ಸಂದಿಗ್ಥ ಪರಿಸ್ಥಿತಿಯಲ್ಲಿ ದೇಶದ ಗಡಿ ರಕ್ಷಣೆಗಾಗಿ ಹೋರಾಡುತ್ತಿರುವ ಯೋಧರಿಗೆ ನೆರವಾಗಲು ಕ್ಯಾಂಪ್ಕೋ ರಾಷ್ಟ್ರೀಯ ರಕ್ಷಣಾ ನಿಧಿಗೆ (ಎನ್‌ಡಿಎಫ್) 5 ಕೋಟಿ ರು.ನೀಡಲಿದೆ.
ಕ್ಯಾಂಪ್ಕೋ ಈ ದೇಣಿಗೆಯನ್ನು ಚೆಕ್ ಮೂಲಕ ರಾಷ್ಟ್ರೀಯ ರಕ್ಷಣಾ ನಿಧಿಗೆ ನೀಡಿದೆ. ಆ ಮೂಲಕ ರಾಷ್ಟ್ರದ ಹಿತ ಕಾಪಾಡುವಲ್ಲಿ ಕ್ಯಾಂಪ್ಕೋ ತನ್ನ ಬದ್ಧತೆಯನ್ನು ತೋರಿಸಿದೆ ಎಂದರು.ಈ ಹಿಂದೆಯೂ, ನೈಸರ್ಗಿಕ ವಿಕೋಪಗಳು ಮತ್ತು ರಾಷ್ಟ್ರೀಯ ತುರ್ತು ಪರಿಸ್ಥಿತಿಗಳ ಸಮಯದಲ್ಲಿ ನಾವು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಆರ್ಥಿಕ ಬೆಂಬಲವನ್ನು ನೀಡಿದ್ದೇವೆ.
ಈಗ ಕ್ಯಾಂಪ್ಕೋ ಮತ್ತು ನಾವು ಪ್ರತಿನಿಧಿಸುವ ಇಡೀ ರೈತ ಸಮುದಾಯದ ಪರವಾಗಿ ರಾಷ್ಟ್ರೀಯ ರಕ್ಷಣಾ ನಿಧಿಗೆ ಈ ಮೊತ್ತ ನೀಡಲು ನಾವು ಹೆಮ್ಮೆಪಡುತ್ತೇವೆ. ಇಂತಹ ಕಠಿಣ ಸನ್ನಿವೇಶದಲ್ಲಿ ದೇಶದ ಸಮಸ್ತ ರೈತರು ಒಗ್ಗಟ್ಟನ್ನು ಪ್ರದರ್ಶಿಸಿ, ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಅವರು ರೈತರಲ್ಲಿ ಮನವಿ ಮಾಡಿದ್ದಾರೆ.