ಕ್ಯಾಂಪ್ಕೋ ವಹಿವಾಟು 2020-21ನೇ ಸಾಲಿನ 2,134.15 ಕೋಟಿ ರು.ಗಳಿಂದ 2024-2025ನೇ ಸಾಲಿನಲ್ಲಿ 3,631,00 ಕೋಟಿ ರು.ಗೆ ಏರಿಕೆಯಾಗಿದೆ. ಇದು ಐದು ವರ್ಷಗಳಲ್ಲಿ ಶೇ.70ರಷ್ಟು ವಹಿವಾಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕ್ಯಾಂಪ್ಕೋ ನಿರ್ಗಮನ ಅಧ್ಯಕ್ಷ ಕಿಶೋರ್ ಕುಮಾರ್‌ ಕೊಡ್ಗಿ ಹೇಳಿದ್ದಾರೆ.

ಮಂಗಳೂರು: ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ವಹಿವಾಟು 2020-21ನೇ ಸಾಲಿನ 2,134.15 ಕೋಟಿ ರು.ಗಳಿಂದ 2024-2025ನೇ ಸಾಲಿನಲ್ಲಿ 3,631,00 ಕೋಟಿ ರು.ಗೆ ಏರಿಕೆಯಾಗಿದೆ. ಇದು ಐದು ವರ್ಷಗಳಲ್ಲಿ ಶೇ.70ರಷ್ಟು ವಹಿವಾಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕ್ಯಾಂಪ್ಕೋ ನಿರ್ಗಮನ ಅಧ್ಯಕ್ಷ ಕಿಶೋರ್ ಕುಮಾರ್‌ ಕೊಡ್ಗಿ ಹೇಳಿದ್ದಾರೆ.

ಮಂಗಳೂರಿನ ಕ್ಯಾಂಪ್ಕೋ ಪ್ರಧಾನ ಕಚೇರಿಯಲ್ಲಿ ಶನಿವಾರ ಅವರು ಸುದ್ದಿಗೋಷ್ಠಿಯಲ್ಲಿ ಐದು ವರ್ಷಗಳ ಆಡಳಿತಾವಧಿಯ ಸಾಧನೆ ಬಗ್ಗೆ ಮಾತನಾಡಿದರು.

ಐದು ವರ್ಷದ ಹಿಂದೆ 2,134.15 ಕೋಟಿ ರು. ಇದ್ದ ವಹಿವಾಟು ಈಗ 3,631.91 ಕೋಟಿ ರು. ತಲುಪಿದೆ. ಅಂದು 10,002.33 ಕೋಟಿ ರು. ಇದ್ದ ಲಾಭ ಈಗ 4,665.04 ಕೋಟಿ ರು.ಗೆ ಏರಿಕೆಯಾಗಿದೆ. ಐದು ವರ್ಷಗಳ ಅವಧಿಯಲ್ಲಿ ಎರಡು ವರ್ಷ ಹೊರತುಪಡಿಸಿದರೆ ಮೂರು ವರ್ಷ ಲಾಭಾಂಶ ನೀಡಲಾಗಿದೆ ಎಂದರು.

ಐದು ವರ್ಷ ಹಿಂದೆ ಹೊಸ ಅಡಕೆ ಕೇಜಿಗೆ 240- 320 ರು. ಇತ್ತು, ಈಗ 360-485 ರು. ಇದೆ. ಚಾಲಿ ಅಡಕೆಗೆ 320-380 ರು. ಇತ್ತು. ಪ್ರಸಕ್ತ 360-525 ರು. ತಲುಪಿದೆ. ಕೆಂಪು ಅಡಕೆಗೆ 350-398 ರು.ನಿಂದ ಈಗ 545-585 ರು.ಗೆ ಏರಿಕೆಯಾಗಿದೆ. ಕೊರೋನಾ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಅಡಕೆ ಧಾರಣೆ ಕುಸಿತ ಕಂಡಾಗ ಬೆಳೆಗಾರರ ಹಿತರಕ್ಷಕನಾಗಿ ಕ್ಯಾಂಪ್ಕೋ ಧಾರಣೆ ಸ್ಥಿರತೆಗೆ ಕ್ರಮ ಕೈಗೊಂಡಿದೆ ಎಂದರು.

ಕೇಂದ್ರ ಕೃಷಿ ಸಚಿವ ಶೀಘ್ರ ಕರಾವಳಿಗೆ:

ಕರಾವಳಿ ಹಾಗೂ ಮಲೆನಾಡು ಅಡಕೆ ತೋಟಗಳಲ್ಲಿ ಕಂಡುಬಂದಿರುವ ಹಳದಿ ಎಲೆ ರೋಗಕ್ಕೆ ಪರಿಹಾರೋಪಾಯ ಹಾಗೂ ಸಂತ್ರಸ್ತ ಬೆಳೆಗಾರರಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ಬೆಳೆ ಬೆಳೆಸಲು ಪ್ರೋತ್ಸಾಹ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿಕೊಳ್ಳಲಾಗಿದೆ. ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರು ಈ ವಿಚಾರವನ್ನು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದಾರೆ. ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಶೀಘ್ರವೇ ಕರಾವಳಿ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವ ನಿರೀಕ್ಷೆ ಇದೆ ಎಂದರು. ಅಡಕೆಯನ್ನು ಕ್ಯಾನ್ಸರ್‌ಕಾರಕ ಎಂದು ವರ್ಗೀಕರಿಸಿರುವುದನ್ನು ತೆಗೆದು ಹಾಕುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಐಎಆರ್‌ಸಿಗೆ ಮನವಿ ಸಲ್ಲಿಸಲಾಗಿದೆ. ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎಂಬುದನ್ನು ಸಾಬೀತುಪಡಿಸುವ ಸಲುವಾಗಿ ಕೇಂದ್ರ ಸ್ವಾಮ್ಯದ ಐಸಿಎಆರ್‌-ಸಿಪಿಸಿಆರ್‌ಐ ನೇತೃತ್ವದಲ್ಲಿ ವೈದ್ಯಕೀಯ ಸಂಶೋಧನೆಗಳು ನಡೆಯುತ್ತಿವೆ. ಆದಷ್ಟು ಶೀಘ್ರ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಕೂಡ ಸೂಚನೆ ನೀಡಿದೆ ಎಂದರು. ಕ್ಯಾಂಪ್ಕೋದಿಂದ ಮಾಲ್ಡೀವ್ಸ್‌ಗೆ ಅಡಕೆ ರಫ್ತುಗೊಳ್ಳುತ್ತಿದೆ. ಅಲ್ಲದೆ ಮೋರಾ ಅಡಕೆ ಅಮೆರಿಕ ಮತ್ತು ಇಂಗ್ಲೆಂಡ್‌ಗಳಿಗೆ ರಫ್ತಾಗುತ್ತಿದೆ. ಸೌಗಂಧ್‌ ಹೆಸರಿನ ಕಾಜು ಸುಪಾರಿಯನ್ನು ಮಾರುಕಟ್ಟೆಗೆ ಮರು ಬಿಡುಗಡೆ ಮಾಡಲಾಗಿದೆ. ಕಾಲಾ ಸೋನಾ ಹೆಸರಿನಲ್ಲಿ ಪೆಪ್ಪರ್‌ ಸ್ಯಾಚೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ ಎಂದರು.

ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ.ಖಂಡಿಗೆ, ನಿರ್ದೇಶಕರಾದ ಎಸ್‌.ಆರ್‌.ಸತೀಶ್ಟಂದ್ರ, ದಯಾನಂದ ಹೆಗ್ಡೆ, ಸುರೇಶ್‌ ಶೆಟ್ಟಿ, ಕೃಷ್ಣ ಪ್ರಸಾದ್‌ ಮಡ್ತಿಲ, ಬಾಲಕೃಷ್ಣ ರೈ, ದಯಾನಂದ ಹೆಗ್ಡೆ, ರಾಧಾಕೃಷ್ಣ, ಸತ್ಯನಾರಾಯಣ ಪ್ರಸಾದ್‌, ರಾಘವೇಂದ್ರ, ಡಾ.ಜಯಪ್ರಕಾಶ್‌, ರಾಘವೇಂದ್ರ ಭಟ್‌ ಪುತ್ತೂರು, ಎಂಡಿ ಡಾ.ಸತ್ಯನಾರಾಯಣ, ಜನರಲ್‌ ಮೆನೇಜರ್‌ ರೇಷ್ಮಾ ಮಲ್ಯ, ಅಡಕೆ ಸಂಶೋಧನಾ ಪ್ರತಿಷ್ಠಾನ ಅಧಿಕಾರಿ ಡಾ.ಕೇಶವ ಭಟ್‌ ಮತ್ತಿತರರಿದ್ದರು.

ಕ್ಯಾಂಪ್ಕೋ ಪ್ರಧಾನ ಕಚೇರಿ ಖರೀದಿಸಿದ ಜಾಗಮಂಗಳೂರಿನಲ್ಲಿರುವ ಕ್ಯಾಂಪ್ಕೋ ಪ್ರಧಾನ ಕಚೇರಿ ಜಾಗವನ್ನು 1974-75ರ ಅವಧಿಯಲ್ಲಿ ಸ್ಥಾಪಕ ವಾರಣಾಸಿ ಸುಬ್ರಾಯ ಭಟ್ಟರು 2 ಲಕ್ಷ ರು.ಗೆ ಖರೀದಿಸಿದ್ದೇ ವಿನಃ ಯಾರೂ ದಾನ ನೀಡಿದ್ದಲ್ಲ. ಈ ಬಗ್ಗೆ ವಿಧಾನ ಪರಿಷತ್‌ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಅವರು ತಪ್ಪು ಹೇಳಿಕೆ ನೀಡಿದ್ದು, ಇದನ್ನು ಖಂಡಿಸುವುದಾಗಿ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿದರು.

ಅಡಕೆಗೆ ಮಾರುಕಟ್ಟೆಯಲ್ಲಿ ಸ್ಥಿರ ಧಾರಣೆ ಎಂದಿಗೂ ಸಾಧ್ಯವಿಲ್ಲ ಎಂಬುದನ್ನು ಮಾಜಿ ಅಧ್ಯಕ್ಷ ಕೆ.ರಾಮ ಭಟ್ಟರೇ ಹೇಳಿದ್ದರು. ಅದಾಗ್ಯೂ ಕ್ಯಾಂಪ್ಕೋ ಧಾರಣೆ ಕುಸಿತಗೊಂಡ ವೇಳೆಯಲ್ಲಿ ಧಾರಣೆ ಮೇಲೆತ್ತಲು ಪ್ರಯತ್ನಿಸಿದೆ. ಈ ಬಗೆಗಿನ ವಿನಯಚಂದ್ರರ ಆರೋಪದಲ್ಲಿ ಹುರುಳಿಲ್ಲ ಎಂದರು. ಕ್ಯಾಂಪ್ಕೋ ಬೇರೆ ಚಾಕಲೇಟ್ ಕಂಪನಿಗಳ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಕ್ಯಾಂಪ್ಕೋದ ಒಂದೂವರೆ ಲಕ್ಷ ಮಂದಿ ಸದಸ್ಯರು ಸುಲಭವಾಗಿ ಸಭೆಗಳಿಗೆ ಹಾಜರಾಗಲು ಅನುಕೂಲವಾಗುವಂತೆ ಆನ್‌ಲೈನ್‌ ಸಭೆ ಆಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಸಹಕಾರ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದವರು ಸ್ಪಷ್ಟಪಡಿಸಿದರು.