ಸಾರಾಂಶ
ಬೆಂಗಳೂರು : ನಗರದ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಪ್ರೆಸ್ ಕ್ಲಬ್ ಹಾಗೂ ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಸಹಯೋಗದಲ್ಲಿ ನೇತ್ರಧಾಮ ಸೂಪರ್ ಸ್ಪೆಷ್ಯಾಲಿಟಿ ಕಣ್ಣಿನ ಆಸ್ಪತ್ರೆಯು ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ನೂರಾರು ಪತ್ರಕರ್ತರು ಕಣ್ಣಿನ ಆರೋಗ್ಯ ಪರೀಕ್ಷೆ ಮಾಡಿಕೊಂಡರು.
ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ‘ಕನ್ನಡಪ್ರಭ’ದ ಪ್ರಧಾನ ಸಂಪಾದಕ ರವಿ ಹೆಗಡೆ, ನಮಗೆ ಅರಿವಿಲ್ಲದೇ ಹಲವು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ. ದಿನನಿತ್ಯದ ಬದುಕಿಗೆ ಎಲ್ಲಿಯವರೆಗೆ ತೊಂದರೆ ಆಗುವುದಿಲ್ಲವೋ ಅಲ್ಲಿಯವರೆಗೆ ಆ ಬಗ್ಗೆ ಆಲೋಚನೆಯನ್ನು ನಾವು ಮಾಡುವುದಿಲ್ಲ. ಈ ರೀತಿ ಆರೋಗ್ಯ ತಪಾಸಣಾ ಶಿಬಿರಗಳು ಆರೋಗ್ಯದ ಕಾಳಜಿ ಮತ್ತು ಮಹತ್ವವನ್ನು ನೆನಪಿಸುವ ಕಾರ್ಯ ಮಾಡಲಿವೆ ಎಂದರು.
ಕೊರೋನಾ ಬಳಿಕ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಅದರಲ್ಲೂ ಮಕ್ಕಳಲ್ಲಿ ಮಯೋಪಿಯಾ ಎಂಬ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕೊರೋನಾ ಪೂರ್ವದಲ್ಲಿ ಶೇ.5ರಷ್ಟು ಮಕ್ಕಳಲ್ಲಿ ಕಾಣಿಸಿತ್ತಿದ್ದ ಈ ಸಮಸ್ಯೆ ಇದೀಗ ಶೇ.20ಕ್ಕೆ ಏರಿಕೆಯಾಗಿದೆ. ಕೊರೋನಾ ನಂತರ ಮೊಬೈಲ್, ಟಿವಿ. ಕಂಪ್ಯೂಟರ್ ಹಾಗೂ ಲ್ಯಾಪ್ ಟಾಪ್‌ಗಳ ಪರದೆ ಹೆಚ್ಚಾಗಿ ನೋಡುವುದರಿಂದ ಸಮಸ್ಯೆಯಾಗುತ್ತಿದೆ ಎಂಬುದು ತಿಳಿದು ಬಂದಿದೆ ಎಂದರು.
ನೇತ್ರಧಾಮ ಸಂಸ್ಥೆಯ ಮುಖ್ಯ ವ್ಯಾಪಾರ ಅಧಿಕಾರಿ ಮೆಹಿರ್ ನಾಥ್ ಚೋಪ್ರಾ ಮಾತನಾಡಿ, ಭಾರತವು ಹೆಚ್ಚು ಹಾಗೂ ವಿಶ್ವದ ಮೂರನೇ ಒಂದರಷ್ಟು ಕಣ್ಣಿನ ಸಮಸ್ಯೆ ಇರುವ ರೋಗಳನ್ನು ಹೊಂದಿದೆ. ಶೇ.80 ರಷ್ಟು ಅಂಧತ್ವಕ್ಕೆ ಚಿಕಿತ್ಸೆ ನೀಡಬಹುದಾಗಿದೆ ಹಾಗೂ ಕಣ್ಣಿನ ದೃಷ್ಟಿಯನ್ನು ಮರುಕಳಿಸಬಹುದಾಗಿದೆ. ಆದರೆ, ಈ ಬಗ್ಗೆ ಜಾಗೃತಿ ಕೊರತೆ ಇದೆ. ಶೇ.99 ರಷ್ಟು ಭಾರತೀಯರು ಕಣ್ಣಿಗಳ ಪವರ್ ಪರೀಕ್ಷೆಯೇ ಕಣ್ಣಿನ ಆರೋಗ್ಯ ಪರೀಕ್ಷೆ ಎಂದು ಭಾವಿಸಿದ್ದಾರೆ. ಆರು ಮಂದಿಯಲ್ಲಿ ಒಬ್ಬರು ಕಣ್ಣಿನ ಪರೀಕ್ಷೆಗೆ ಒಳಗಾಗುತ್ತಿದ್ದಾರೆ ಎಂದರು.
ಈ ವೇಳೆ ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ವಿಜಯವಾಣಿ ಡಿಜಿಟಲ್ ಆವೃತ್ತಿಯ ಸಂಪಾದಕ ಸಿದ್ದು ಕಾಳೋಜಿ, ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಹನುಮೇಶ್ ಯಾವಗಲ್, ಪ್ರಧಾನ ಕಾರ್ಯದರ್ಶಿ ಅನಿಲ್ ಬದುರ್‌ಲುಲ್ಲಾ, ಪ್ರೆಸ್ ಕ್ಲಬ್‌ನ ಆರೋಗ್ಯ ಸಮಿತಿಯ ಸಂಚಾಲಕ ಯಾಸಿರ್ ಮುಷ್ತಾಕ್ ಮೊದಲಾದವರಿದ್ದರು.