ಎಕ್ಸ್‌ಪ್ರೆಸ್ ಕೆನಾಲ್ ನಿಂದ ನೀರು ಕೊಡಲು ಸಾಧ್ಯವಿಲ್ಲ: ಎಂ.ಟಿ.ಕೃಷ್ಣಪ್ಪ

| Published : May 27 2024, 01:02 AM IST

ಎಕ್ಸ್‌ಪ್ರೆಸ್ ಕೆನಾಲ್ ನಿಂದ ನೀರು ಕೊಡಲು ಸಾಧ್ಯವಿಲ್ಲ: ಎಂ.ಟಿ.ಕೃಷ್ಣಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ರೈತರ ಜೀವನ್ಮರಣದ ಪ್ರಶ್ನೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮೌನವಹಿಸಿದ್ದಾರೆ. ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಕೂಡಲೇ ಎಕ್ಸ್ ಪ್ರೆಸ್ ಕೆನಾಲ್ ನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಮೇ ೩೦ ರಂದು ಬೆಳಗ್ಗೆಯಿಂದಲೇ ಜಿಲ್ಲಾ ಉಸ್ತುವಾರಿ ಸಚಿವರೂ, ಗೃಹಸಚಿವರೂ ಅಗಿರುವ ಡಾ.ಜಿ.ಪರಮೇಶ್ವರ್ ರವರ ತುಮಕೂರಿನ ನಿವಾಸದ ಮುಂದೆ ಸಾವಿರಾರು ರೈತರೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತುಮಕೂರು ಜಿಲ್ಲೆಯ ರೈತರ ಹಿತವನ್ನು ಕಡೆಗಣಿಸಿ ಕನಕಪುರ, ರಾಮನಗರಕ್ಕೆ ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋಗಲು ಹವಣಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹೋರಾಡುತ್ತಿರುವ ನಾವು, ಜೈಲಿಗೆ ಹೋಗಲೂ ಸೈ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ತಮ್ಮ ಸ್ವಗೃಹದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ರೈತರ ಜೀವನ್ಮರಣದ ಪ್ರಶ್ನೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮೌನವಹಿಸಿದ್ದಾರೆ. ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಕೂಡಲೇ ಎಕ್ಸ್ ಪ್ರೆಸ್ ಕೆನಾಲ್ ನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಮೇ ೩೦ ರಂದು ಬೆಳಗ್ಗೆಯಿಂದಲೇ ಜಿಲ್ಲಾ ಉಸ್ತುವಾರಿ ಸಚಿವರೂ, ಗೃಹಸಚಿವರೂ ಅಗಿರುವ ಡಾ.ಜಿ.ಪರಮೇಶ್ವರ್ ರವರ ತುಮಕೂರಿನ ನಿವಾಸದ ಮುಂದೆ ಸಾವಿರಾರು ರೈತರೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷ್ಣಪ್ಪ ಹೇಳಿದರು.

ನಮ್ಮ ಜಿಲ್ಲೆಯ ರೈತರಿಗೆ ದ್ರೋಹ ಬಗೆದು ರಾಮನಗರ, ಕನಕಪುರಕ್ಕೆ ನೀರು ತೆಗೆದುಕೊಂಡು ಹೋಗುವ ಅವಶ್ಯಕತೆ ಏನಿದೆ? ಇದೊಂದು ಅವೈಜ್ಞಾನಿಕ ಹಾಗೂ ಕಾನೂನು ಬಾಹಿರಕೃತ್ಯ ಎಂದು ಕಿಡಿಕಾರಿದರು.

ತುಮಕೂರು ಶಾಖಾ ನಾಲೆಯಿಂದ ನೀರು ತೆಗೆದುಕೊಂಡು ಹೋಗುವ ಬದಲು ಸತ್ಯಗಾಲದಿಂದ ನೀರನ್ನು ತೆಗೆದುಕೊಂಡು ಹೋಗಬಹುದು. ನಮ್ಮ ಜಿಲ್ಲೆಯಿಂದ ನೀರನ್ನು ತೆಗೆದುಕೊಂಡು ಹೋದಲ್ಲಿ ಜಿಲ್ಲೆಯ ರೈತಾಪಿಗಳಿಗೆ ಒಂದು ಹನಿ ನೀರೂ ಸಿಗದು. ಮುಂದಾಗುವ ಅನಾಹುತವನ್ನು ತಪ್ಪಿಸುವ ಸಲುವಾಗಿ ಈಗಾಗಲೇ ಹೋರಾಟಕ್ಕಿಳಿದು ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ನ್ನು ಮುಚ್ಚಲಾಗಿದೆ. ಆದರೂ ಸಹ ಕಾಮಗಾರಿಯನ್ನು ರಾಜ್ಯ ಸರ್ಕಾರ ಮುಂದುವರೆಸುವ ಸಾಧ್ಯತೆ ಇರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲೆಯ ರೈತರ ಹಾಗೂ ಜನರ ಅಳಿವು ಉಳಿವಿನ ಪ್ರಶ್ನೆ. ರಾಮನಗರ, ಮಾಗಡಿ, ಕನಕಪುರ ಎಂದೆಲ್ಲಾ ನೀರನ್ನು ತೆಗೆದುಕೊಂಡು ಹೋದರೆ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕುಡಿಯುವ ನೀರೂ ಸಹ ಸಿಗುವುದಿಲ್ಲ. ಜಿಲ್ಲೆಯ ರೈತರು ಮೈ ಮರೆತರೆ ಮರಣ ಶಾಸನ ಕಟ್ಟಿಟ್ಟ ಬುತ್ತಿ. ಪಕ್ಷಾತೀತವಾಗಿ ಹೋರಾಟಕ್ಕೆ ಧುಮುಕಬೇಕು. ಇದರಲ್ಲಿ ರಾಜಕೀಯ ಮಾಡಬಾರದು. ಜಿಲ್ಲೆಯ ಹಿತವನ್ನು ಕಾಪಾಡುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕುಣಿಗಲ್ ಮತ್ತು ಮಾಗಡಿಗೆ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ. ಹೇಮಾವತಿ ನಾಲೆ ಮೂಲಕ ತೆಗೆದುಕೊಂಡು ಹೋಗಿ. ಆದರೆ ಸುಮಾರು ೧೨.೫ ಅಡಿ ವ್ಯಾಸದ ಕೊಳವೆ ಪೈಪ್ ಗಳ ಮೂಲಕ ನೀರನ್ನು ತೆಗೆದುಕೊಂಡು ಹೋಗಲು ನಮ್ಮ ಆಕ್ಷೇಪವಿದೆ ಎಂದರು. ------------

ನಾನು ಜೈಲಿಗೆ ಹೋಗಲೂ ಸಿದ್ಧ:

ಜಿಲ್ಲೆಯ ರೈತರ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ರೈತರ ಹಿತ ಕಾಯುವುದು ನಮ್ಮ ಜವಾಬ್ದಾರಿ. ಈ ಹೋರಾಟದಲ್ಲಿ ನನ್ನನ್ನು ಜೈಲಿಗೆ ಹಾಕಿದರೂ ನಾನು ಹೆದರುವುದಿಲ್ಲ. ಎಕ್ಸ್ ಪ್ರೆಸ್ ಕೆನಾಲ್ ನ ಕಾಮಗಾರಿ ನಿಲ್ಲುವ ತನಕ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಕೃಷ್ಣಪ್ಪ ಹೇಳಿದರು.

ಮೇ ೩೦ ರಂದು ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ನಡೆಯಲಿರುವ ಪ್ರತಿಭಟನೆಗೆ ಪಕ್ಷಾತೀತವಾಗಿ ಎಲ್ಲಾ ರೈತಾಪಿಗಳು, ಜನ ಸಾಮಾನ್ಯರು ಆಗಮಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಮನವಿ ಮಾಡಿಕೊಂಡರು.

ಜೆಡಿಎಸ್ ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಎಪಿಎಂಸಿ ಮಾಜಿ ನಿರ್ದೇಶಕ ವಿಜಯಕುಮಾರ್, ಮುಖಂಡರಾದ ವಿಠಲದೇವರಹಳ್ಳಿಯ ಹರೀಶ್, ಮಾದಿಹಳ್ಳಿ ಕಾಂತರಾಜ್ ಉಪಸ್ಥಿತರಿದ್ದರು.