ಗದಗ ನಗರಸಭೆ ಬಿಜೆಪಿ ಸದಸ್ಯರ ಸದಸ್ಯತ್ವ ಅಮಾನತು ಆದೇಶ ರದ್ದು

| Published : Feb 26 2025, 01:03 AM IST

ಸಾರಾಂಶ

ಗದುಗಿನ ಖಾಲಿ ವಕಾರಗಳ ಲೀಜ್‌ ಅವಧಿ ವಿಸ್ತರಣೆಗೆ ನಕಲಿ ಠರಾಪು ಸೃಷ್ಟಿಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಸ್ಥಳೀಯ ನಗರಸಭೆ ಬಿಜೆಪಿಯ ಮೂವರು ಸದಸ್ಯರ ಸದಸ್ಯತ್ವ ಅಮಾನತುಗೊಳಿಸಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶವನ್ನು ಧಾರವಾಡ ಹೈಕೋರ್ಟ್‌ ಪೀಠ ರದ್ದುಪಡಿಸಿದೆ.

ಗದಗ: ಗದುಗಿನ ಖಾಲಿ ವಕಾರಗಳ ಲೀಜ್‌ ಅವಧಿ ವಿಸ್ತರಣೆಗೆ ನಕಲಿ ಠರಾಪು ಸೃಷ್ಟಿಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಸ್ಥಳೀಯ ನಗರಸಭೆ ಬಿಜೆಪಿಯ ಮೂವರು ಸದಸ್ಯರ ಸದಸ್ಯತ್ವ ಅಮಾನತುಗೊಳಿಸಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶವನ್ನು ಧಾರವಾಡ ಹೈಕೋರ್ಟ್‌ ಪೀಠ ರದ್ದುಪಡಿಸಿದೆ.

ಫೆ. 27ರಂದು ಮಧ್ಯಾಹ್ನ 3 ಗಂಟೆ ಒಳಗಾಗಿ ಸೂಕ್ತ, ಸಮರ್ಥನೀಯ ದಾಖಲೆಗಳೊಂದಿಗೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸೂಕ್ತ, ಸಮರ್ಥನೀಯ ದಾಖಲೆಗಳನ್ನು ವಿಚಾರಣೆ ವೇಳೆ ಸಲ್ಲಿಸಲು ಸದಸ್ಯರು ವಿಫಲರಾದರೆ ಮುಂದಿನ ಕ್ರಮವನ್ನು ಪ್ರಾದೇಶಿಕ ಆಯುಕ್ತರು ಕೈಗೊಳ್ಳಲಿದ್ದಾರೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಗಿರುವ ಖಾಲಿ ವಕಾರಗಳ ಲೀಜ್ ಅವಧಿ ವಿಸ್ತರಣೆಯಲ್ಲಿ ನಕಲಿ ಠರಾವು ಸೃಷ್ಟಿಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಗದಗ-ಬೆಟಗೇರಿ ನಗರಸಭೆಯ ಮೂವರು ಬಿಜೆಪಿ ಸದಸ್ಯರನ್ನು ಸದಸ್ಯತ್ವದಿಂದ ಅಮಾನತು ಮಾಡಿದ್ದರು.

28ಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ: ಇಷ್ಟೆಲ್ಲಾ ಕಾನೂನು ತೊಡಕುಗಳ ಮಧ್ಯೆಯೇ ಖಾಲಿ ಉಳಿದಿರುವ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ದಿನಾಂಕ ನಿಗದಿಪಡಿಸಿ ಉಪವಿಭಾಗಾಧಿಕಾರಿ ಎಂ. ಗಂಗಪ್ಪ ಫೆ. 28ರಂದು ಮಧ್ಯಾಹ್ನ 2ಕ್ಕೆ ಚುನಾವಣೆ ನಡೆಸುವುದಾಗಿ ನಗರಸಭೆಯ ಸದಸ್ಯರಿಗೆ ನೋಟಿಸ್ ಮೂಲಕ ತಿಳಿಸಿದ್ದು, ತೀವ್ರ ಗೊಂದಲಕ್ಕೆ ಕಾರಣವಾಗಿದೆ. ಈಗಾಗಲೇ ಬಿಜೆಪಿ ಸದಸ್ಯರು ಹಲವಾರು ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ಎಂದು ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿಗಳು ಮೂರು ಜನ ಬಿಜೆಪಿ ಸದಸ್ಯರ ಸದಸ್ಯತ್ವ ಅಮಾನತು ಆದೇಶವಾಗುತ್ತಿದ್ದಂತೆ ಚುನಾವಣೆ ಘೋಷಣೆ ಮಾಡಿರುವುದು ದೊಡ್ಡ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಸಿ.ಸಿ. ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ: ಈ ಎಲ್ಲಾ ಬೆಳವಣಿಗೆ ಮಧ್ಯೆ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಮಂಗಳವಾರ ಸಂಜೆ ಗದಗ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಫೆ. 28ರಂದು ಚುನಾವಣೆ ನಡೆಸುತ್ತಿರುವ ಕುರಿತು ಬಿಜೆಪಿ ಸದಸ್ಯರಿಗೆ ನೋಟಿಸ್ ನೀಡದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವರ ಸದಸ್ಯತ್ವ ಅಮಾನತು ಮಾಡಿರುವ ಪ್ರಕರಣವನ್ನೇ ಧಾರವಾಡ ಹೈಕೋರ್ಟ್‌ ವಜಾಗೊಳಿಸಿದೆ. ಆದರೂ ಎಸಿ ನ್ಯಾಯಾಲಯಕ್ಕಿಂತಲೂ ದೊಡ್ಡವರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಎಲ್ಲಾ 18 ಜನ ಸದಸ್ಯರೊಂದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ಜಿಲ್ಲಾಧಿಕಾರಿಗಳ ಕಚೇರಿಗೂ ತೆರಳಿ ಅವರೊಂದಿಗೆ ಚರ್ಚಿಸಿದ್ದು ಹಿರಿಯ ಅಧಿಕಾರಿಗಳಿಂದ ಸಕಾರಾತ್ಮಕ ಮತ್ತು ಕಾನೂನಾತ್ಮಕ ನಡೆಗಳು ಕಂಡು ಬರುತ್ತಿಲ್ಲ ಎಂದು ನಗರಸಭೆಯ ಸದಸ್ಯರು ಸಭೆಯ ನಂತರ ಆಕ್ರೋಶ ವ್ಯಕ್ತ ಪಡಿಸಿದರು.