ಸಾರಾಂಶ
ಕೊಪ್ಪಳ: ಗರ್ಭಕೊರಳಿನ ಕ್ಯಾನ್ಸರ್‌ನಿಂದಲೇ ಅತಿ ಹೆಚ್ಚು ಸಾವು ಸಂಭವಿಸುತ್ತೇವೆ. ಆದರೆ, ಇದು ಸೇರಿದಂತೆ ಯಾವುದೇ ಕ್ಯಾನ್ಸರ್‌ನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದರೆ ಖಂಡಿತವಾಗಿಯೂ ಗುಣಪಡಿಸಬಹುದು ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ರಮೇಶ ಮೂಲಿಮನಿ ಹೇಳಿದರು.
ವಿಶ್ವ ಕ್ಯಾನ್ಸರ್ ಅರಿವು ಮೂಡಿಸುವ ದಿನ ಮತ್ತು ಸಪ್ತಾಹದ ಅಂಗವಾಗಿ ಹಿರೇಸಿಂದೋಗಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಕಲಬುರಗಿಯ ಶ್ರೀ ಸ್ವಾಮಿ ರಾಮಾನಂದ ತೀರ್ಥ ಸಾಮಾಜಿಕ ಆರ್ಥಿಕ ರಾಷ್ಟ್ರ್ರೀಯ ಭಾವೈಕ್ಯತೆ ಮತ್ತು ಸಂಶೋಧನಾ ಸಂಸ್ಥೆ ಮತ್ತು ಕೊಪ್ಪಳದ ಶ್ರೀ ರೇಣುಕಾ ಡೈಗನೋಸ್ಟಿಕ್ಸ್ ಆ್ಯಂಡ್ ಆರ್‌ಸಿ, ಕೊಪ್ಪಳದ ಜನನಿ ಆಸ್ಪತ್ರೆ ಮತ್ತು ಅಥರ್ವ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಸತತವಾಗಿ ನಾಲ್ಕನೇ ವರ್ಷ ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ಸಪ್ತಾಹದ ನಿಮಿತ್ತ ಕಾನ್ಸರ್ ಬಗ್ಗೆ ಅರಿವು ಮತ್ತು ಸ್ಕ್ರೀನ್ನಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕ್ಯಾನ್ಸರ್‌ನಿಂದ ಉಂಟಾಗುವ ಸಾವುಗಳಲ್ಲಿ ಗರ್ಭಕೊರಳಿನ ಕ್ಯಾನ್ಸರ್‌ನಿಂದ ಹೆಚ್ಚಿನ ಸಾವು ಸಂಭವಿಸುತ್ತಿವೆ. ವಾಸನೆಯಿಂದ ಕೂಡಿದ ಬಿಳಿಮುಟ್ಟು, ರಕ್ತಸ್ರಾವ ಆಗುವುದು, ತೂಕ ಕಡಿಮೆ ಆಗುವುದು, ಹಸಿವು ಆಗದೆ ಇರುವುದು ಮತ್ತು ಹೊಟ್ಟೆನೋವು ಇಂತಹ ಲಕ್ಷಣಗಳಿದ್ದವರು ತಪಾಸಣೆ ಮಾಡಿಸಿ, ಒಳಗಾಗುವ ಮೂಲಕ ಪ್ರಾರಂಭಿಕ ಹಂತದಲ್ಲೆ ಚಿಕಿತ್ಸೆ ಪಡೆದರೆ ಸಾವಿನ ಸಂಖ್ಯೆ ತಡೆಯಬಹುದಾಗಿದೆ. ಹೆಣ್ಣು ಮಕ್ಕಳಲ್ಲಿ ಎದೆಯಲ್ಲಿ ಗಂಟುಗಳಿದ್ದಲ್ಲಿ ಸೂಜಿ ಪರೀಕ್ಷೆ (ಎಫ್‌ಎನ್‌ಎಸಿ), ಮಮ್ಮೊಗ್ರಾಫಿ ಸ್ವಪರೀಕ್ಷೆ, ಯುಎಸ್‌ಜಿ ಅಥವಾ ಬಯಾಪ್ಸಿ ಇತ್ಯಾದಿ ಪರೀಕ್ಷೆ ಮಾಡುವ ಮೂಲಕ ಹಾಗೂ ಗರ್ಭಕೋಶದ ಕ್ಯಾನ್ಸರ್‌ನ್ನು ಪ್ಯಾಪಸ್ಮಿಯರ್ ಅಥವಾ ಅಸಿಟಿಕ್ ಆಸಿಡ್ ಟೆಸ್ಟ್ ಅಥವಾ ಎಚ್‌ಪಿವಿ ಟೆಸ್ಟ್ ಅಥವಾ ಬಯಾಪ್ಸಿ ಮೂಲಕ ತಪಾಸಣೆ ಮಾಡಲಾಗುವುದು ಎಂದರು.
ಮಕ್ಕಳಿಗೆ ಎಚ್‌ಪಿವಿ ವೈರಸ್ ಬಾರದಂತೆ ಲಸಿಕೆ ಕೊಡಿಸಿದಲ್ಲಿ ಮಕ್ಕಳಲ್ಲಿ ಮುಂದೆ ಬರಬಹುದಾದಂತಹ ಗರ್ಭಕೋಶದ ಕ್ಯಾನ್ಸರ್ ತಡೆಯಬಹುದಾಗಿದೆ ಎಂದು ತಿಳಿಸಿದರು. ಮಕ್ಕಳ ಹುಟ್ಟುಹಬ್ಬಕ್ಕೆ ಈ ಲಸಿಕೆಯನ್ನು ಗಿಫ್ಟ್ ಆಗಿ ಕೊಡಿಸಬಹುದು ಎಂದು ಹೇಳಿದರು.ಕಿಮ್ಸ್‌ನ ಪ್ಯಾಥಾಲಜಿ ವಿಭಾಗದ ಮುಖ್ಯಸ್ಥ ಡಾ. ಅನಿರುದ್ಧ ವಸಂತ ಕುಷ್ಟಗಿ ಮಾತನಾಡಿ, ತಂಬಾಕು ಸೇವನೆ ಮಾಡುವವರಲ್ಲಿ ತುಟಿ, ಬಾಯಿ, ಪುಪ್ಪುಸ, ಗಂಟಲು, ಅನ್ನನಾಳಲ್ಲಿ, ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಆದ್ದರಿಂದ ತಂಬಾಕನ್ನು ತ್ಯಜಿಸಿ, ಕ್ಯಾನ್ಸರ್ ತಡೆಯಿರಿ ಎಂದು ಹೇಳಿದರು. ಕಿಮ್ಸ್ ಕೊಪ್ಪಳದ ಸಹಾಯಕ ಪ್ರಾಧ್ಯಾಪಕ ಹಾಗೂ ಸ್ತ್ರೀರೋಗ ತಜ್ಞರಾದ ಡಾ. ಸುಮನ್ ಪಾಟೀಲ್, ಮಕ್ಕಳ ವೈದ್ಯರಾದ ಡಾ. ಪ್ರಮೋದ ಪಡಸಾಲಿ, ದಂತ ವೈದ್ಯರಾದ ಡಾ. ಸವಿತಾ ಮಾತನಾಡಿದರು.