ಸರಿಯಾದ ಚಿಕಿತ್ಸೆಯಿಂದ ಕ್ಯಾನ್ಸರ್ ಗುಣಮುಖ

| Published : Oct 12 2025, 01:00 AM IST

ಸಾರಾಂಶ

ಈಗ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಚಿಕಿತ್ಸೆ ನೀಡಲು ಅತ್ಯಾಧುನಿಕ ವ್ಯವಸ್ಥೆ ಇದೆ

ಹುಬ್ಬಳ್ಳಿ: ಜಾಗತಿಕ ಮಟ್ಟದಲ್ಲಿ ಕ್ಯಾನ್ಸರ್‌ ರೋಗ ಅತ್ಯಂತ ವೇಗವಾಗಿ ಹರಡುತ್ತಿದೆ. ಅದಕ್ಕೆ ಜೀವನ ಶೈಲಿ, ಆಹಾರ ಪದ್ಧತಿ ಕಾರಣ. ಪ್ರಾಥಮಿಕ ಹಂತದಲ್ಲಿಯೇ ರೋಗ ಗುರುತಿಸಿ, ಸರಿಯಾದ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ಗುಣಪಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ನಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಅಳವಡಿಸುವುದು ಉತ್ತಮ ಕಾರ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದ ಗೋಕುಲ ರಸ್ತೆಯಲ್ಲಿ ಶನಿವಾರ ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ಉದ್ಘಾಟಿಸಿ ಮಾತನಾಡಿ, ಜನರ ಹವ್ಯಾಸದಲ್ಲಿ ಬದಲಾವಣೆ ಆಗಿದೆ. ಜಂಕ್‌ಫುಡ್ ಸೇವನೆ ಹೆಚ್ಚುತ್ತಿದೆ. ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವುದು ಒಂದೆಡೆಯಾದರೆ, ಅದು ಬಾರದೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂಬುದು ಮುಖ್ಯ ಎಂದರು.

ಈ ಹಿಂದೆ ಕ್ಯಾನ್ಸರ್‌ ರೋಗಿಗಳಿಗೆ ರೇಡಿಯೊಥೆರಪಿ, ಕಿಮೊಥೆರಪಿ ಸೇರಿ ಇನ್ನಿತರ ಚಿಕಿತ್ಸೆ ನೀಡುವಾಗ ದೇಹದ ಇತರ ಅಂಗಗಳಿಗೂ ಹಾನಿಯಾಗುತ್ತಿತ್ತು. ಈಗ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಚಿಕಿತ್ಸೆ ನೀಡಲು ಅತ್ಯಾಧುನಿಕ ವ್ಯವಸ್ಥೆ ಇದೆ. ಕ್ಯಾನ್ಸರ್‌ ರೋಗಿಗಳು ಭಯ ಪಡುವ ಅಗತ್ಯ ಇಲ್ಲ. ಬಡ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಅಥವಾ ಉಚಿತ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಯೂನಿವರ್ಸಲ್‌ ಹೆಲ್ತ್‌ ಕೇರ್ ಯೋಜನೆ ಜಾರಿ ಬಗ್ಗೆ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಸಂಸ್ಥಾಪಕ ಬಿ.ಎಸ್.ಅಜಯಕುಮಾರ್ ಮನವಿ ಮಾಡಿದ್ದು, ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸಲಾಗುವುದು ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕ್ಯಾನ್ಸರ್‌ ಸೇರಿದಂತೆ ಇನ್ನಿತರ ರೋಗಗಳಿಗೆ ಸಂಬಂಧಿಸಿಂದ ಔಷಧಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡಿರುವುದರಿಂದ ಹೆಚ್ಚು ಅನುಕೂಲವಾಗಿದೆ ಎಂದರು.

ಎಚ್‌ಸಿಸಿ ಆಸ್ಪತ್ರೆಯ ಸಂಸ್ಥಾಪಕ ಬಿ.ಎಸ್.ಅಜಯ್‌ಕುಮಾರ್‌ ಮಾತನಾಡಿ, ಪ್ರಸ್ತುತ ಚಿಕಿತ್ಸಾ ವೆಚ್ಚ, ಔಷಧಿಗಳ ದರ ಹೆಚ್ಚಾಗಿದೆ. ಯೂನಿವರ್ಸಲ್ ಹೆಲ್ತ್‌ಕೇರ್ ಯೋಜನೆ ಜಾರಿಗೆ ತಂದರೆ ಎಲ್ಲರಿಗೂ ಒಂದೇ ದರದಲ್ಲಿ ಚಿಕಿತ್ಸೆ ದೊರೆಯಲಿದೆ. ದೇಶದಲ್ಲಿ 25ಕ್ಕೂ ಹೆಚ್ಚು ಮತ್ತು ರಾಜ್ಯದಲ್ಲಿ 7 ಎಚ್‌ಸಿಜಿ ಸೆಂಟರ್‌ಗಳಿವೆ. ನಗರದಲ್ಲಿ ಕ್ಯಾನ್ಸರ್‌ ರೋಗಿಗಳಿಗೆ ಅಸ್ಥಿ ಮಜ್ಜೆ ಕಸಿ (ಬೋನ್ ಮ್ಯಾರೊ ಟ್ರಾನ್ಸ್‌ಪ್ಲಾಂಟ್) ಚಿಕಿತ್ಸೆ ಆರಂಭಿಸುವ ಚಿಂತನೆ ಇದೆ ಎಂದರು.

ಎಚ್‌ಸಿಜಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮನೀಶ್ ಮಟ್ಟೂ ಮಾತನಾಡಿದರು. ಈ ವೇಳೆ ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ನ ಸಿಇಒ ಮನಿಷಾ ಕುಮಾರ್, ಅಬ್ದುಲ್ ರಹೀಂ ಸೇರಿದಂತೆ ಹಲವರಿದ್ದರು.