ಸಾರಾಂಶ
ದೊಡ್ಡಬಳ್ಳಾಪುರ: ಭಾರತದಲ್ಲಿ 4 ನಿಮಿಷಕ್ಕೆ ಒಂದು ಕ್ಯಾನ್ಸರ್ ರೋಗ ಪತ್ತೆಯಾಗುತ್ತಿದ್ದು, 8 ನಿಮಿಷಕ್ಕೊಬ್ಬರು ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿರುವುದು ಕಂಡು ಬಂದಿದೆ. ಕ್ಯಾನ್ಸರ್ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಆರಂಭದಲ್ಲಿಯೇ ತಪಾಸಣೆ ಮಾಡಿಸಿಕೊಂಡರೆ ಗುಣಪಡಿಸಲು ಸಾಧ್ಯವಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಿದೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ವೈದ್ಯ ಡಾ.ಕೆ.ಎನ್.ಲೋಕೇಶ್ ತಿಳಿಸಿದರು.
ನಗರದ ಕೋಟೆ ರಸ್ತೆಯ ಶ್ರೀ ರಾಮ ಆಸ್ಪತ್ರೆ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ನಡೆದ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಕ್ಯಾನ್ಸರ್ ಕುರಿತ ಜಾಗೃತಿ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.ಸಾಮಾನ್ಯವಾಗಿ ಪುರುಷರಿಗೆ ಹೆಚ್ಚಿನದಾಗಿ ಶ್ವಾಸಕೋಶದ ಕ್ಯಾನ್ಸರ್ ಹಾಗೂ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ಗಳು ಬರುವ ಸಾಧ್ಯತೆಗಳಿವೆ. ಬಹಳಷ್ಟು ಮಂದಿ ಕ್ಯಾನ್ಸರ್ ರೋಗವನ್ನು ಆರಂಭದಲ್ಲಿ ನಿರ್ಲಕ್ಷ್ಯ ಮಾಡುವ ಪರಿಣಾಮ, ಅದು ಉಲ್ಬಣಗೊಳ್ಳುತ್ತದೆ. ಅಂತಿಮ ಹಂತ ತಲುಪಿದಾಗ ವೈದ್ಯರು ಸಹ ಏನೂ ಮಾಡಲಾಗುವುದಿಲ್ಲ ಎಂದರು.
ಕಾನ್ಸರ್ ಗುಣಪಡಿಸಬಹುದು:ಬದಲಾಗುತ್ತಿರುವ ಜೀವನ ಶೈಲಿಯಿಂದ ಉಂಟಾಗುವ ಹಾರ್ಮೋನ್‌ಗಳ ವ್ಯತ್ಯಾಸವೂ ಕ್ಯಾನ್ಸರ್‌ಗೆ ಕಾರಣವಾಗಬಹುದು. ಪೌಷ್ಟಿಕ ಆಹಾರ, ವ್ಯಾಯಾಮದ ಜೀವನ ಶೈಲಿಯನ್ನು ನಾವು ಅಳವಡಿಸಿಕೊಳ್ಳಬೇಕಾಗುತ್ತೆ. ಕ್ಯಾನ್ಸರ್‌ಗೆ ಈಗ ಆಧುನಿಕ ಚಿಕಿತ್ಸೆಗಳಿದ್ದು, ಕಿಮೋಥರಫಿ ಎಲ್ಲರಿಗೂ ತಿಳಿದ ಚಿಕಿತ್ಸೆಯಾಗಿದೆ. ಈಗ ಬಂದಿರುವ ಇಮ್ಯುನೋ ಥರಫಿ ಕ್ಯಾನ್ಸರ್‌ಕಾರಕ ಕಣಗಳನ್ನು ನಾಶ
ಪಡಿಸುತ್ತದೆ. 40 ವರ್ಷ ದಾಟಿದ ಮಹಿಳೆಯರು 2 ವರ್ಷಗಳಿಗೊಮ್ಮೆ ಮ್ಯಾಮೋಗ್ರಾಮ್ ಮಾಡಿಸಿಕೊಳ್ಳಬೇಕಿದೆ. ಸ್ವಯಂ ಸ್ಕ್ಯಾನ್ ಮಾಡಿಕೊಳ್ಳಬಹುದು. ಸಾಮಾನ್ಯ ಪತ್ತೆಗೆ ಎರಡು ವಾರಗಳ ತಪಾಸಣೆ ಇರುತ್ತದೆ. ಇನ್ನು ಉಲ್ಪಣವಾದರೆ ತಿಂಗಳುಗಳೇ ಹಿಡಿಯುತ್ತವೆ. ಶೀಘ್ರ ಪತ್ತೆ ಕ್ಯಾನ್ಸರ್ ನಾಪತ್ತೆ ಎನ್ನುವುದು ಸದಾ ನೆನಪಿನಲ್ಲಿರಬೇಕು ಎಂದು ಕ್ಯಾನ್ಸರ್ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು.ಭಾರತೀಯ ವೈದ್ಯಕೀಯ ಸಂಘದ ದೊಡ್ಡಬಳ್ಳಾಪುರ ಘಟಕದ ಅಧ್ಯಕ್ಷ ಡಾ.ವಿನಯ್ ಬಾಬು ಮಾತನಾಡಿ, ಕ್ಯಾನ್ಸರ್ ಕುರಿತಂತೆ ಹಲವಾರು ತಪ್ಪು ತಿಳುವಳಿಕೆಗಳಿವೆ. ನಾನು ಕ್ಯಾನ್ಸರ್
ಬರುವಂತಹ ಯಾವುದೇ ದುಶ್ಚಟ ಹೊಂದಿಲ್ಲ, ನನಗೇಕೆ ಬರಬೇಕು ಎಂದು ಪ್ರಶ್ನೆ ಮಾಡುವ ಹಲವಾರು ಮಂದಿಯಿದ್ದಾರೆ. ಕ್ಯಾನ್ಸರ್ ಲಕ್ಷಣಗಳನ್ನು ಹೇಳಿಕೊಳ್ಳಲು ವಿಶೇಷವಾಗಿ ಸ್ತ್ರೀಯರು ಹಿಂಜರಿಯುವುದಿಂದ ರೋಗ ಹಂತಗಳನ್ನು ದಾಟಿರುತ್ತದೆ. ಕ್ಯಾನ್ಸರ್ ಯಾರಿಗಾದರೂ ಬರಬಹುದು. ಆರಂಭದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.ಶ್ರೀ ರಾಮ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಜಿ.ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಬಿರದಲ್ಲಿ ತಜ್ಞ ವೈದ್ಯರಿಂದ ತಪಾಸಣೆ ನಡೆಸಲಾಯಿತು. ಕಾರ್‍ಯಕ್ರಮದಲ್ಲಿ ಶ್ರೀ ರಾಮ ಆಸ್ಪತ್ರೆಯ ವೈದ್ಯೆ ಡಾ.ಮಾಲಾ ವಿಜಯಕುಮಾರ್, ಭಾರತೀಯ ವೈದ್ಯಕೀಯ ಸಂಘದ ತಾಲೂಕು ಕಾರ್ಯದರ್ಶಿಡಾ.ಕೆ.ವಿ.ರಾಘವೇಂದ್ರ, ಸುಜ್ಞಾನ ದೀಪಿಕಾ ಸಂಸ್ಥೆಯ ಎಂ.ಎಸ್.ಮಂಜುನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷೆ ಡಿ.ಮಂಗಳಗೌರಿ, ಕಾರ್‍ಯದರ್ಶಿ ಕೆ.ಪಿ.ಲಕ್ಷೀನಾರಾಯಣ್, ಉಪಾಧ್ಯಕ್ಷ ನಂಜುಂಡ ಸ್ವಾಮಿ, ಜಂಟಿ ಕಾರ್‍ಯದರ್ಶಿ ಭಾರತಿ ಮಂಜುನಾಥ್ ಭಾಗವಹಿಸಿದ್ದರು.
3ಕೆಡಿಬಿಪಿ1-ದೊಡ್ಡಬಳ್ಳಾಪುರದ ಶ್ರೀ ರಾಮ ಆಸ್ಪತ್ರೆ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಕ್ಯಾನ್ಸರ್ ಕುರಿತ ಜಾಗೃತಿ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿತ್ತು.