ಹುಬ್ಬಳ್ಳಿ:
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 2019ರ ನೇಮಕಾತಿ ಆದೇಶ ಪ್ರಕಾರ ಬಾಕಿ ಉಳಿದ ಹುದ್ದೆಗಳ ಭರ್ತಿಗೆ ಆಗ್ರಹಿಸಿ ನಗರದಲ್ಲಿ ಮೂರನೇ ದಿನವೂ ಪ್ರತಿಭಟನೆ ನಡೆಯಿತು.ಗುರುವಾರ ಇಲ್ಲಿಯ ಸ್ಟೇಷನ್ ರಸ್ತೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಉಪವಾಸ ಸತ್ಯಾಗ್ರಹಕ್ಕೆ ಪೊಲೀಸರು ಅನುಮತಿ ನೀಡದ ಕಾರಣ ಒಂದು ಗಂಟೆ ಮಾತ್ರ ಪ್ರತಿಭಟನೆ ನಡೆಸಿದರು.ಈ ವೇಳೆ ಹೋರಾಟ ನೇತೃತ್ವ ವಹಿಸಿದ್ದ ಸುಭಾಸಸಿಂಗ್ ಜಮಾದಾರ ಮಾತನಾಡಿ, ಬಾಕಿ ಉಳಿದ 814 ಜನ ಚಾಲಕ/ನಿರ್ವಾಹಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಹೋರಾಟ ಮಾಡಲು ಎಲ್ಲಿಯೂ ಅನುಮತಿ ನೀಡುತ್ತಿಲ್ಲ. ರಾಜ್ಯ ಸರ್ಕಾರದ ಕುತಂತ್ರದಿಂದ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ನಡೆ ನಿಜಕ್ಕೂ ಖಂಡನೀಯ ಎಂದರು.
ಹೋರಾಟ ಮಾಡಲು ಜಾಗ ಸಿಗದ ಪರಿಸ್ಥಿತಿ ಬಂದಿರುವುದು ದುರಾದೃಷ್ಟ ಸಂಗತಿ. ಸಂವಿಧಾನದಲ್ಲಿ ಹೋರಾಟ ಮಾಡಲು ಅವಕಾಶವಿದ್ದರೂ ಅವಕಾಶ ದೊರೆಯುತ್ತಿಲ್ಲ. ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಆ. 4ರಂದು ಚರ್ಚೆ ನಡೆಯಲಿದೆ. ನಾವು ಸಹ ನ್ಯಾಯಾಲಯದಲ್ಲಿ ಹೋರಾಟ ಮಾಡಿ, ಪ್ರತಿಭಟನೆ ಮಾಡಲು ಅವಕಾಶ ಪಡೆದು, ಸಾರಿಗೆ ಇಲಾಖೆ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಮಂತ್ರಿಮಂಡಳ ವಿಸ್ತರಣೆ ಬಳಿಕ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ನಿಯೋಗದ ಮೂಲಕ ಭೇಟಿ ಮಾಡಿ ನಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು. ಅಭ್ಯರ್ಥಿ ರಫೀಕ್ ಇಂಚಲ ಮಾತನಾಡಿ, ನಾವು ನ್ಯಾಯುತವಾದ ಹೋರಾಟ ಮಾಡಲು ಸರ್ಕಾರ ಹಾಗೂ ಸಾರಿಗೆ ಇಲಾಖೆ ಬಿಡುತ್ತಿಲ್ಲ. ಎರಡು ದಿನದಿಂದ ಹೋರಾಟ ಮಾಡಿದ್ದೇವೆ. ನಮಗೆ ನ್ಯಾಯ ದೊರೆಯುವ ವರೆಗೂ ಹೋರಾಟ ನಿರಂತರವಾಗಿರುತ್ತದೆ. ರಾಜ್ಯ ಸರ್ಕಾರ ತಕ್ಷಣ ನೇಮಕ ಮಾಡಿಕೊಳ್ಳಬೇಕು ಇಲ್ಲವಾದರೆ ನೂರಾರು ಜನರು ಸೇರಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ದೇವರಾಜ ಗಿರೀಶ ಅಂಗಡಿ, ಬಸಯ್ಯಾ ಚಿಕ್ಜಮಠ, ವಿವೇಕಾನಂದ ಸ್ವಾಮಿ, ಸುನೀಲ್ ನಾಗೊಂಡ, ನಾಗರಾಜ ಜಗಳೂರ, ಬಾಹುಬಲಿ ಟೀಕನ್ನವರ, ರಾಜು ನಾಯ್ಕ, ಸುರೇಶ ಕಬ್ಬೂರ, ಶಿವು ತಳವಾರ ಪ್ರತಿಭಟನೆಯಲ್ಲಿ ಇದ್ದರು.