ಮಣ್ಣಿನ ದೀಪ, ಮಡಿಕೆ ತಯಾರಿಸುವ ಘಟಕಕ್ಕೆ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಭೇಟಿ

| Published : Apr 20 2024, 01:00 AM IST

ಮಣ್ಣಿನ ದೀಪ, ಮಡಿಕೆ ತಯಾರಿಸುವ ಘಟಕಕ್ಕೆ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿರುವ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಾಂಪ್ರದಾಯಿಕ ಮಣ್ಣಿನ ವಸ್ತುಗಳ ಗುಡಿ ಕೈಗಾರಿಕೆ ಬಗ್ಗೆ ಸಿಗುವ ಪ್ರಯೋಜನಗಳ ಬಗ್ಗೆ ವಿಸ್ತೃತವಾಗಿ ಕ್ಯಾಪ್ಟನ್ ಚೌಟ ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಾಂಪ್ರದಾಯಿಕ ಕುಲಕಸುಬು ಆಧಾರಿತ ಮಣ್ಣಿನ ದೀಪ, ಮಡಿಕೆಗಳನ್ನು ತಯಾರಿಸುವ ಉದ್ಯಮ ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿವೆ. ಮಣ್ಣಿನ ಮಡಿಕೆ, ಇನ್ನಿತರ ವಸ್ತುಗಳನ್ನು ತಯಾರಿಕೆಯನ್ನೇ ಕುಲಕಸುಬು ಮಾಡಿಕೊಂಡ ಕುಲಾಲ ಸಮುದಾಯ ಈ ಜಿಲ್ಲೆಯ ಮೂರನೇ ಅತಿದೊಡ್ಡ ಜನಾಂಗ. ಇವರ ಬದುಕು, ಕುಲವೃತ್ತಿಯ ಸಂಕಷ್ಟ, ಸವಾಲು ಅರಿಯಲು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಕುಳಾಯಿ ಮನೋಜ್ ಕುಲಾಲ್ ಅವರ ಕುಂಬಾರಿಕೆ ಘಟಕಕ್ಕೆ ಭೇಟಿ ನೀಡಿದರು.

ಗುಡಿ ಕೈಗಾರಿಕೆಯಲ್ಲಿ ಒಂದಾಗಿರುವ ಇಂತಹ ಈ ನಾಡಿನ ಮಣ್ಣಿನ ಸ್ಪರ್ಶದ ಘಟಕಗಳು ಈಗಿನ ಕಾಲದಲ್ಲಿ ಮರೆಯಾಗುತ್ತಿದ್ದು, ಆ ಜಾಗವನ್ನು ಪ್ಲಾಸ್ಟಿಕ್, ಅಲ್ಯುಮಿನಿಯಂ ಪಾತ್ರೆಗಳು ಜನರ ಮನೆ ತುಂಬುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಕುಲಕಸುಬು ಆಧಾರಿತ ವೃತ್ತಿಗಳಿಗೆ ಬೆಂಬಲ ಹಾಗೂ ಸಹಾಯಹಸ್ತ ನೀಡುತ್ತಿರುವ ಬಗ್ಗೆಯೂ ಬ್ರಿಜೇಶ್ ಚೌಟ ಘಟಕದ ಮಾಲೀಕರ ಗಮನ ಸೆಳೆದರು.

ದೀಪಾವಳಿ ಅಥವಾ ಹಬ್ಬ ಹರಿದಿನಗಳಲ್ಲಿ ಉಪಯೋಗಿಸುವ ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲೂ ಇವರದು ಎತ್ತಿದ ಕೈ. ಮಣ್ಣಿನ ಪಾತ್ರೆ ತಯಾರಿ ಘಟಕದ ಸವಾಲುಗಳು, ಕಷ್ಟಗಳ ಹಾಗೂ ಕುಲಾಲ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಬ್ರಿಜೇಶ್ ಚೌಟರು, ಸ್ವತಃ ಮಡಿಕೆ ಮಾಡುವ ಅನುಭವವನ್ನೂ ಪಡೆದುಕೊಂಡರು.‌

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿರುವ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಾಂಪ್ರದಾಯಿಕ ಮಣ್ಣಿನ ವಸ್ತುಗಳ ಗುಡಿ ಕೈಗಾರಿಕೆ ಬಗ್ಗೆ ಸಿಗುವ ಪ್ರಯೋಜನಗಳ ಬಗ್ಗೆ ವಿಸ್ತೃತವಾಗಿ ಕ್ಯಾಪ್ಟನ್ ಚೌಟ ಚರ್ಚಿಸಿದರು.