ಸಾರಾಂಶ
ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ೨೦೨೪-೨೫ರ ವಾರ್ಷಿಕ ಸಂಚಿಕೆ ‘ಪ್ರಾಂಜಲ’ ವನ್ನು ಎಂದು ತೆಂಕನಿಡಿಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಅನಾವರಣಗೊಳಿಸಿದರು.
ಉಡುಪಿ: ವಿದ್ಯಾರ್ಥಿಗಳ ಬದುಕು ನಾಲ್ಕು ಗೋಡೆಯೊಳಗೆ ಸೀಮಿತವಾಗಬಾರದು. ಗೋಡೆಯನ್ನು ಮೀರಿ ಬೆಳೆಯಬೇಕು. ನಮ್ಮ ಕಲಿಕೆ ವೃತ್ತಿಗೆ; ವೃತ್ತಿ ಜೀವನೋಪಾಯಕ್ಕೆ, ಪ್ರವೃತ್ತಿ ಜೀವನದ ಆನಂದಕ್ಕೆ. ವ್ಯಕ್ತಿ ಚಿನ್ನವಾದರೆ ವ್ಯಕ್ತಿತ್ವ ಆಭರಣ. ಆದ್ದರಿಂದ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡು ವ್ಯಕ್ತಿತ್ವವನ್ನೇ ಆಭರಣವನ್ನಾಗಿಸಿಕೊಳ್ಳಬೇಕು ಎಂದು ತೆಂಕನಿಡಿಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಹೇಳಿದ್ದಾರೆ.
ನಗರದ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ೨೦೨೪-೨೫ರ ವಾರ್ಷಿಕ ಸಂಚಿಕೆ ‘ಪ್ರಾಂಜಲ’ ವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.‘ಪ್ರೀತಿ ಇಲ್ಲದವನು ಕವಿಯಾಗಲಾರ. ಕಲಾವಿದನೂ ಆಗಲಾರ. ಬದುಕಿನ ಬಗ್ಗೆ ಪ್ರೀತಿ ಇದ್ದಾಗ ಮಾತ್ರ ಸುಂದರ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯ. ವಾರ್ಷಿಕ ಸಂಚಿಕೆ ಎನ್ನುವುದು ಸಮಗ್ರ ಸತ್ವದ ಹೂರಣ. ವಿದ್ಯಾರ್ಥಿಗಳ ರುಚಿ ಅಭಿರುಚಿಯ ಕೈಗನ್ನಡಿ. ವಿದ್ಯಾರ್ಥಿಗಳ ಭವಿಷ್ಯದ ದಿಕ್ಸೂಚಿ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಶ್ರೀರಮಣ ಐತಾಳ್ ಮಾತನಾಡಿ, ‘ಕಾಲೇಜು ವಾರ್ಷಿಕ ಸಂಚಿಕೆ ಎನ್ನುವುದು ಶೈಕ್ಷಣಿಕ ಶಿಸ್ತಿನ ದಾಖಲೆ. ವಿದ್ಯಾರ್ಥಿಗಳ ಆರಂಭದ ಸೃಜನಶೀಲ ಬರವಣಿಗೆಗೆ ಅವಕಾಶ’ ಎಂದು ಹೇಳಿದರು.ಕಾಲೇಜಿನ ಪ್ರಾಚಾರ್ಯ ಸಂತೋಷ್ ಕುಮಾರ್ ಸಂಪಾದಕ ಮಂಡಳಿಯನ್ನು ಅಭಿನಂದಿಸಿದರು. ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಚಾರ್ಯ ಡಾ.ಚಂದ್ರಕಾಂತ್ ಭಟ್ ಉಪಸ್ಥಿತರಿದ್ದರು. ಸಂಪಾದಕ ಮಂಡಳಿಯ ಪ್ರಧಾನ ಸಂಪಾದಕಿ ಪ್ರತಿಮಾ ಬಾಳಿಗ ಸ್ವಾಗತಿಸಿದರು. ಸಂಚಿಕೆಯ ಕಾರ್ಯನಿರ್ವಾಹಕ ಸಂಪಾದಕ ರಮಾನಂದ ರಾವ್ ನಿರೂಪಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಸಂಪಾದಕ ಮುರಳೀಕೃಷ್ಣ ವಂದಿಸಿದರು. ವಿದ್ಯಾರ್ಥಿಗಳಾದ ಶ್ರಾವಣಿ ಮತ್ತು ಪ್ರಾಂಜಲಿ ಪ್ರಾರ್ಥಿಸಿದರು.