ಸದ್ಯ ನಿರಾತಂಕ, ಮುಂದೆ ಕಾದಿದೆ ಆತಂಕ !

| Published : Apr 15 2025, 12:58 AM IST

ಸಾರಾಂಶ

ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಜನ-ಜೀವನದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳು ಸದ್ಯಕ್ಕೇನೂ ಅಂತಹ ಪರಿಣಾಮ ಬೀರಲಿಕ್ಕಿಲ್ಲವಾದರೂ, ಮುಂಬರುದ ದಿನಗಳ ಭಾರಿ ಆಪತ್ತು ಎದುರಾಗಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಜನ-ಜೀವನದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳು ಸದ್ಯಕ್ಕೇನೂ ಅಂತಹ ಪರಿಣಾಮ ಬೀರಲಿಕ್ಕಿಲ್ಲವಾದರೂ, ಮುಂಬರುದ ದಿನಗಳ ಭಾರಿ ಆಪತ್ತು ಎದುರಾಗಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೆಮಿಕಲ್‌ ಕೈಗಾರಿಕೆಗಳಿಂದ ಹೊರಹೊಮ್ಮುವ ಗಾಳಿ, ತ್ಯಾಜ್ಯದಿಂದಾಗಿ ಈ ಭಾಗದ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಹಳ್ಳಿಗರ ಆರೋಗ್ಯದ ಮೇಲೆ ಸದ್ದಿಲ್ಲದೆ ಆವರಿಸಿಕೊಳ್ಳುತ್ತಿರುವ ವಿವಿಧ ರೀತಿಯ ಮಾರಣಾಂತಿಕ ಕಾಯಿಲೆಗಳು ಆರಂಭದ ಮುನ್ನೂಚನೆಗಳನ್ನು ನೀಡುತ್ತಿವೆ. ಈ ಕೈಗಾರಿಕಾ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಕಂಡುಬರುತ್ತಿರುವ ಹವಾಮಾನ "ಅನಾರೋಗ್ಯಕರ " ಹಾಗೂ "ಕಳಪೆ "ಯಿಂದ ಕೂಡಿದೆ ಎಂಬ ವಾಯು ಸೂಚ್ಯಂಕ ಭವಿಷ್ಯದ ದಿನಗಳು ಆತಂಕಕಾರಿ ಎಂಬ ಮುನ್ಸೂಚನೆ ನೀಡುತ್ತಿರುವ ಬೆನ್ನಲ್ಲೇ ವೈದ್ಯರ ಇಂತಹ ಅಭಿಪ್ರಾಯ ಗಮನಿಸಿದರೆ ಇದರ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಗಂಭೀರ ಚಿಂತನೆಗೆ ನೂಕಿದಂತಿದೆ.

ಕಡೇಚೂರಿನ ಭೀಮಣ್ಣ ಮಾತನಾಡಿ, ಮಂದ ದೃಷ್ಟಿ, ಚರ್ಮರೋಗಗಳು, ಹೃದಯ-ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು, ಕ್ಷಯ-ಅಸ್ತಮಾ, ಕಿಡ್ನಿ ವೈಫಲ್ಯದಂತ ಕಾಯಲೆಗಳು ಒಂದೊಂದಾಗಿ ಜನರ ಮೇಲೆ ಪ್ರಭಾವ ಬೀರುತ್ತಿವೆ. ಆರಂಭದಲ್ಲಿ ಕೆಲವರದ್ದು "ಸಹಜ ಸಾವು " ಎಂದಂದುಕೊಂಡರೂ ರೋಗ ಲಕ್ಷಣ ಚಿಕಿತ್ಸೆಗೆ ಪರದಾಟ, ಕೆಮ್ಮು ಉಬ್ಬಸದಿಂದ ದಿಢೀರ್ ಮರಣ ಮುಂತಾದವು ಕೈಗಾರಿಕಾ ಪ್ರದೇಶದ ವಿಷಗಾಳಿಯಿಂದಾಗಿ ಸದ್ದಿಲ್ಲದೆ ಸಾಯುತ್ತಿರುವವರ ಪಟ್ಟಿಯ ಉದಾಹರಣೆಯಂತಿದೆ ಎಂದರು.

ಕೈಗಾರಿಕಾ ಪ್ರದೇಶದಿಂದ ಕೇವಲ ಅರ್ಧ ಕಿ.ಮೀ. ವ್ಯಾಪ್ತಿಯಿಂದ ಹಿಡಿದು ಗ್ರಾಮೀಣ ಭಾಗದ ಜನರನ್ನು ಒಂದಿಲ್ಲೊಂದು ರೋಗಗಳು ಬಾಧಿಸುತ್ತಿವೆ. ಎಳೆಯ ಮಕ್ಕಳ ಆರೋಗ್ಯದ ಮೇಲೆಯೂ ಇದು ಪರಿಣಾಮ ಬೀರುತ್ತಿದೆ. ಅಲ್ಲಿನ ಅನೇಕ ಮಕ್ಕಳಿಗೆ ದೃಷ್ಟಿದೋಷ, ಚರ್ಮರೋಗಗಳು, ಬೆಳವಣಿಗೆ ಕುಂಠಿತ, ಕೆಮ್ಮು-ಕಫ ಸಾಮಾನ್ಯವೇನೋ ಎಂದೆನಿಸಿಬಿಟ್ಟಿದೆ. ಗರ್ಭಿಣಿ-ಬಾಣಂತಿಯರು, ಮಹಿಳೆಯರು, ವಯೋವೃದ್ಧರ ಜೊತೆಗೆ, ಕೂಲಿ ಮಾಡಿ ದುಡಿದು ತಂದು ಹಾಕುವ, ಕುಟುಂಬದ ಜವಾಬ್ದಾರಿ ಹೊತ್ತ ಯುವಕರು, ಮಧ್ಯವಯಸ್ಕರಿಗೂ ಕಾಯಿಲೆಗಳು ಆವರಿಸಿಕೊಂಡು, ಎದ್ದೇಳಲಾಗದ ಸ್ಥಿತಿಗೆ ತಲುಪಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಬಿರಾದರ್ ಪ್ರತಿಕ್ರಿಯಿಸಿ, "ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಅನಾರೋಗ್ಯಕರ ವಾತಾವರಣದ ದೂರು ಬಂದಾಗ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದೇವೆ. ಸಾಮಾನ್ಯ ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿದೆ. ಸದ್ಯಕ್ಕೆ ಅಂತಹುದ್ದೇನೂ ಗಂಭೀರ ಅನ್ನಿಸಿಲ್ಲ, ಚಿಕಿತ್ಸೆ ನೀಡಲಾಗಿದೆ ". ವಾತಾವರಣ ವ್ಯತಿರಿಕ್ತವಾದರೆ ಮುಂದಿನ ದಿನಗಳಲ್ಲಿ ಆತಂಕ ಎದುರಾಗಬಹುದು ಎಂದರು.

ಜಿಲ್ಲಾ ವೈದ್ಯಾಧಿಕಾರಿ ಡಾ. ಸಾಜೀದ್‌, ತಾಲೂಕು ಆರೋಗ್ಯಾಧಿಕಾರಿ ಡಾ. ಹನುಮಂತರೆಡ್ಡಿ ಪ್ರತಿಕ್ರಿಯಿಸಿ, "ಕಳೆದ ಕೆಲವು ದಿನಗಳ ಹಿಂದೆ ವೈದ್ಯಾಧಿಕಾರಿಗಳ ತಂಡ ಕ್ಯಾಂಪ್‌ ಮಾಡಿಸಿದ್ದೆವು. ಗಂಭೀರ ಕಾಯಿಲೆಗಳ್ಯಾವೂ ಕಂಡು ಬಂದಿಲ್ಲ, ಇವೆಲ್ಲ ಸಾಮಾನ್ಯ ರೋಗಗಳು ಒಂದು ವೇಳೆ ಅಲ್ಲಿನ ವಾತಾವರಣ ಹದಗೆಡುತ್ತಾ ಸಾಗಿದರೆ ಮುಂದೆ ಆತಂಕ ಎದುರಾಗಬಹುದು ಎಂದು ಮಾಹಿತಿ ನೀಡಿದರು.

ಕಳೆದ ಕೆಲವು ದಿನಗಳ ಹಿಂದೆ ವೈದ್ಯಾಧಿಕಾರಿಗಳ ತಂಡ ಕ್ಯಾಂಪ್‌ ಮಾಡಿಸಿದ್ದೆವು. ಗಂಭೀರ ಕಾಯಿಲೆಗಳ್ಯಾವೂ ಕಂಡು ಬಂದಿಲ್ಲ, ಇವೆಲ್ಲ ಸಾಮಾನ್ಯ ರೋಗಗಳು. ಒಂದು ವೇಳೆ, ಅಲ್ಲಿನ ವಾತಾವರಣ ಹದಗೆಡುತ್ತ ಸಾಗಿದರೆ ಮುಂದೆ ಆತಂಕ ಎದುರಾಗಬಹುದು.

ಡಾ. ಮಹೇಶ ಬಿರಾದರ್, ಜಿಲ್ಲಾ ಆರೋಗ್ಯಾಧಿಕಾರಿ ಯಾದಗಿರಿ

ಸೂಕ್ತ ಹಾಗೂ ಅವಶ್ಯಕ ವೈದ್ಯಕೀಯ ತಪಾಸಣೆ ಪರೀಕ್ಷೆ ನಡೆಸಿಯೇ ಇಲ್ಲ. ಸಾಮಾನ್ಯ ಕಾಯಿಲೆಗಳು ಎಂದು ಸಮಜಾಯಿಷಿ ನೀಡುವ ಆರೋಗ್ಯ ಇಲಾಖೆ ಅಧಿಕಾರಿಗಳ್ಯಾರೂ ಬಾಧಿತ ಭಾಗದಲ್ಲಿ ಬಂದು ಸೂಕ್ತ ತಪಾಸಣೆಯೇ ನಡೆಸಿಲ್ಲ. ಕೈಗಾರಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಿ ಕೊಡುತ್ತಿರುವ ಸರ್ಕಾರಕ್ಕೆ ಇವರು (ಆರೋಗ್ಯ) ಇಲಾಖೆ ಸಹಜವಾಗಿ ಪೂರಕ ವರದಿ ನೀಡುತ್ತಿದ್ದಾರೇನೋ ಹೀಗಾಗಿ, ವಾಸ್ತವವಾಂಶ ಮರೆ ಮಾಚಲಾಗಿದೆ.

ಭೀಮಣ್ಣ ವಡವಟ್‌, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಸೈದಾಪುರ