ಬೆಳೆ ಕಟಾವು ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯ ಕ್ರಮ

| Published : Jun 18 2024, 12:56 AM IST

ಬೆಳೆ ಕಟಾವು ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೃಷಿ ಗಣತಿ ಹಾಗೂ ಕೃಷಿ ಅಂಕಿ-ಅಂಶ ಸಮನ್ವಯ ಸಮಿತಿ ಸಭೆಯಲ್ಲಿ ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಬೆಳೆ ಕಟಾವು ಪ್ರಯೋಗ ಆಧರಿಸಿ, ಬೆಳೆ ವಿಮೆ ಕಂಪನಿಗಳು ವಿಮೆ ಮೊತ್ತ ನಿರ್ಧರಿಸುತ್ತವೆ. ಸರಿಯಾದ ಸಮಯಕ್ಕೆ ಕಟಾವು ಪ್ರಯೋಗ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದರ ಪರಿಣಾಮ ಜಿಲ್ಲೆಯ ರೈತರು ಸಮಸ್ಯೆ ಅನುಭವಿಸುವಂತಾಗಿದೆ. ಈ ವಿಚಾರದಲ್ಲಿ ನಿರ್ಲಕ್ಷ್ಯತೋರಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ 11ನೇ ಕೃಷಿ ಗಣತಿ ಹಾಗೂ 2024-25ನೇ ಸಾಲಿನ ಜಿಲ್ಲಾ ಮಟ್ಟದ ಕೃಷಿ ಅಂಕಿ-ಅಂಶಗಳ ಮೊದಲನೇ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಂದಾಯ, ಗ್ರಾಮೀಣಾಭಿವೃದ್ಧಿ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ಕಟಾವು ಯೋಜನೆ ಪಟ್ಟಿ ಬಿಡುಗಡೆಗೊಂಡ ಕೂಡಲೇ ನಮೂನೆ-1ನ್ನು ಕೈಗೊಳ್ಳಲು ಇಲಾಖಾ ಮುಖ್ಯಸ್ಥರು ಅನುವು ಮಾಡಿಕೊಡಬೇಕು. ಕಟಾವು ಪ್ರಯೋಗದ ಸಿಸಿ ಇ ಮೊಬೈಲ್ ಅಪ್ಲಿಕೇಷನ್ ಡೌನ್‍ಲೋಡ್ ಮಾಡಿಕೊಂಡು ನಮೂನೆ-1 ಕೈಗೊಳ್ಳಲು ಸೂಕ್ತ ಕ್ರಮ ವಹಿಸಬೇಕು. ಬೆಳೆ ಕಟಾವು ಪ್ರಯೋಗದಲ್ಲಿ ಯಾವುದೇ ರೀತಿಯ ತಪ್ಪು ಉಂಟಾಗಬಾರದು. ಮೊಬೈಲ್ ತಂತ್ರಾಂಶದಲ್ಲಿ ಅಂಕಿ ಅಂಶಗಳು ತಪ್ಪಾಗದಂತೆ ಪ್ರಯೋಗದ ವಿವರಗಳನ್ನು ತುಂಬಬೇಕು. ಬೆಳೆ ಕಟಾವು ಪ್ರಯೋಗ ಮಾಡಲು ನಿಯೋಜಿಸಿದ ಅಧಿಕಾರಿ ಹಾಗೂ ನೌಕರರೇ ಖುದ್ದಾಗಿ ರೈತರ ಜಮೀನಿಗೆ ತೆರಳಿ ಪ್ರಯೋಗ ಕೈಗೊಳ್ಳಬೇಕು ಎಂದು ಸೂಚಿಸಿದರು.ಬೆಳೆ ಕಟಾವು ಪ್ರಯೋಗ ಮಾಡದೇ ಇದ್ದಲ್ಲಿ ಅಥವಾ ನಿರ್ಲಕ್ಷ್ಯದಿಂದ ತಪ್ಪಾಗಿ ಮಾಹಿತಿ ತುಂಬಿದರೆ ಕಟಾವು ಪ್ರಯೋಗ ಮಾಡಿದ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಛಾಯಾಚಿತ್ರ ಸೆರೆ ಹಿಡಿಯುವಾಗ ತೂಕದ ಯಂತ್ರವು ಹಾಗೂ ಉತ್ಪನ್ನ ಕಾಣುವ ರೀತಿಯಲ್ಲಿ ಇರಬೇಕು. ಇಲ್ಲವಾದರೆ ಕಟಾವು ಪ್ರಯೋಗ ಅನೂರ್ಜಿತವಾಗಲಿದೆ. ಉತ್ಪನ್ನ ಹಾಗೂ ಉಪ ಉತ್ಪನ್ನಗಳನ್ನು ನಿರ್ದಿಷ್ಟ ಕಾಲಂಗಳಲ್ಲಿಯೇ ತುಂಬಬೇಕು. ತೂಕದ ಯಂತ್ರದಲ್ಲಿರುವ ಹೋಲ್ಡ್ ಬಟನ್ ಪ್ರೆಸ್ ಮಾಡಿ ತೂಕವು ಸ್ಥಿರವಾದ ನಂತರವೇ ಪೋಟೋ ತೆಗೆಯಬೇಕು. ಬೆಳೆ ಕಟಾವು ನಿಯಮಾನುಸಾರ ಮಾಡದೇ, ರೈತರಿಗೆ ಬೆಳೆ ವಿಮೆಯ ಮೊತ್ತ ದೊರಕದೇ ಹೋದಲ್ಲಿ ಅಥವಾ ಕಡಿಮೆ ಮೊತ್ತ ದೊರೆತರೆ, ಕಟಾವು ಪ್ರಯೋಗ ಕೈಗೊಂಡ ಅಧಿಕಾರಿ ವೇತನದಲ್ಲಿ ಮೊತ್ತ ಕಟಾವುಗೊಳಿಸಿ, ರೈತರಿಗೆ ನಷ್ಟ ಪರಿಹಾರ ತುಂಬಿಕೊಡಲಾಗುವುದು ಎಂದು ಅಧಿಕಾರಿಗಳಿಗೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು. ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಹಂಚಿಕೆ ಮಾಡಿದ ಬೆಳೆ ಕಟಾವುಗಳನ್ನು ಸರಿಯಾದ ಸಮಯಕ್ಕೆ ನಡೆಸಬೇಕು. ಯಾವುದೇ ಸಬೂಬು ಸಲ್ಲದು. ಬೆಳೆ ಕಟಾವು ಪ್ರಯೋಗ ಪಾರದರ್ಶಕವಾಗಿ ನಡೆಯಲು ರೈತರು, ವಿಮಾ ಕಂಪನಿಯ ಅಧಿಕಾರಿಗಳು, ಮೇಲ್ವಿಚಾರಕರಿದ್ದಲ್ಲಿ ಅವರನ್ನು ಬೆಳೆ ಕಟಾವು ಪ್ರಯೋಗದ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಾಗಿರುವಂತೆ ಕ್ರಮವಹಿಸಬೇಕು. ಬೆಳೆ ಸಮೀಕ್ಷೆ ದತ್ತಾಂಶದ ಶೇ.1ರಷ್ಟು ಪರಿಶೀಲನೆಯನ್ನು ಆಪ್ ಬಿಡುಗಡೆಯಾದ ತಕ್ಷಣವೇ ನಿಯೋಜಿಸಿದ ಅಧಿಕಾರಿಗಳು ನಿಯೋಜಿಸಿದ ಪ್ಲಾಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪೋಟೋ ತೆಗೆದು ಮೊಬೈಲ್ ಆಪ್ ನಲ್ಲಿ ಅಪ್ ಲೋಡ್ ಮಾಡಬೇಕೆಂದರು. ಕಾರಣಕ್ಕೂ ನಿಯೋಜಿಸಿದ ಪ್ಲಾಟ್ ಗಳನ್ನು ಪರಿಶೀಲನೆ ಕೈಗೊಳ್ಳದೇ ಬಾಕಿ ಉಳಿಸುವಂತಿಲ್ಲ ಎಂದರು.

ಈ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೆಶಕ ಮಂಜುನಾಥ, ಉಪನಿರ್ದೇಶಕರಾದ ಪ್ರಭಾಕರ್, ಶಿವಕುಮಾರ್, ಸಹಾಯಕ ಅಂಕೆ ಸಂಖ್ಯೆ ಸಂಗ್ರಹಣಾಧಿಕಾರಿಗಳಾದ ಅಶ್ವತ್ಥಾಮ, ವೀಣಾ, ಚಂದ್ರಪ್ಪ, ಸಹಾಯಕ ನಿರ್ದೇಶಕರಾದ ಶಶಿರೇಖಾ, ಯಾಸಿನ್ ಸೇರಿದಂತೆ ಇತರೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.