ಸಾರಾಂಶ
ಅರಬ್ಬಿ ಸಮುದ್ರದಲ್ಲಿ ಕಾರ್ಗೋ ಹಡಗಿಗೆ ಬೆಂಕಿ ಹೊತ್ತಿಕೊಂಡಿದ್ದು, ಮಾಹಿತಿ ಪಡೆದ ಇಂಡಿಯನ್ ಕೋಸ್ಟ್ ಗಾರ್ಡ್ ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸಿದೆ.
ಕನ್ನಡಪ್ರಭ ವಾರ್ತೆ ಕಾರವಾರ
ಅರಬ್ಬಿ ಸಮುದ್ರದಲ್ಲಿ ಕಾರ್ಗೋ ಹಡಗಿಗೆ ಬೆಂಕಿ ಹೊತ್ತಿಕೊಂಡಿದ್ದು, ಮಾಹಿತಿ ಪಡೆದ ಇಂಡಿಯನ್ ಕೋಸ್ಟ್ ಗಾರ್ಡ್ ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸಿದೆ.ಗೋವಾದಿಂದ 150 ನಾಟಿಕಲ್ ಮೈಲು ದೂರ, ಕಾರವಾರದಿಂದ 50 ನಾಟಿಕಲ್ ಮೈಲು ದೂರದಲ್ಲಿ ಎಂ.ವಿ. ಮೆರ್ಸೆಕ್ ಫ್ರಾಂಕಫರ್ಟ್ ಎಂಬ ಹೆಸರಿನ ಕಂಟೇನರ್ ಹಡಗು ಬೆಂಕಿ ಆಕಸ್ಮಿಕಕ್ಕೆ ತುತ್ತಾಯಿತು. ಕೂಡಲೇ ಮುಂಬೈನ ಮೆರಿಟೈಮ್ ರೆಸ್ಕ್ಯೂ ಕೋಆರ್ಡಿನೇಶನ್ ಸೆಂಟರ್‌ಗೆ ಮಾಹಿತಿ ರವಾನೆಯಾಗಿತ್ತು. ಈ ಕೇಂದ್ರದಿಂದ ಮಾಹಿತಿ ಲಭಿಸುತ್ತಿದ್ದಂತೆ ಇಲ್ಲಿನ ಕೋಸ್ಟ್ ಗಾರ್ಡ್ ಬೆಂಕಿ ಆರಿಸುವ ಕಾರ್ಯಾಚರಣೆಗೆ ಧಾವಿಸಿತು.
ಕೋಸ್ಟ್ ಗಾರ್ಡನ ಡಾರ್ನಿಯರ್ ಏರ್‌ಕ್ರಾಫ್ಟ್, ಸಚೇತ್, ಸುಜೀತ್, ಸಾಮ್ರಾಟ್ ಹೆಸರಿನ ಶಿಫ್‌ಗಳು ಹಾಗೂ ಒಂದು ಲೈಟ್ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಕೋಸ್ಟ್ ಗಾರ್ಡ್ ಸಫಲವಾಗಿದೆ.ಈ ನಡುವೆ ಕೋಸ್ಟ್ ಗಾರ್ಡ್ ಸಮುದ್ರದಲ್ಲಿ ಮಾಲಿನ್ಯ ಉಂಟಾಗದಂತೆ ನೋಡಿಕೊಳ್ಳಲು ಸಮುದ್ರ ಪ್ರಹರಿ ಎಂಬ ಹಡಗನ್ನೂ ಸ್ಥಳಕ್ಕೆ ಕರೆಸಿಕೊಂಡಿದೆ. ಸದ್ಯಕ್ಕೆ ಹಡಗಿನಲ್ಲಿರುವ ಯಾವುದೇ ಸಿಬ್ಬಂದಿಯನ್ನು ಸ್ಥಳಾಂತರಿಸುವ ಅವಶ್ಯಕತೆ ಇಲ್ಲ. ಬೆಂಕಿ ಹತೋಟಿಗೆ ಬಂದಿದ್ದು, ದಟ್ಟವಾದ ಹೊಗೆ ಮಾತ್ರ ಇದೆ ಎಂದು ಕೋಸ್ಟ್ ಗಾರ್ಡ ತಿಳಿಸಿದೆ
ಜು. 2ಕ್ಕೆ ಗುಜರಾತಿನ ಮುಂದ್ರಾ ಬಂದರಿನಿಂದ ಶ್ರೀಲಂಕಾಕ್ಕೆ ಹೊರಟಿದ್ದ ಎಂವಿ ಮೆರ್ಸಕ್ ಫ್ರಾಂಕ್‌ಫರ್ಟ್ ಕಂಟೇನರ್ ಶಿಪ್ ಇದಾಗಿದೆ.