ಕಂಬಳಿ ನೇಕಾರರಿಗೆ ಬೇಕಿದೆ ಸರ್ಕಾರದ ಆಸರೆ

| Published : Mar 06 2024, 02:17 AM IST

ಸಾರಾಂಶ

ರಬಕವಿ-ಬನಹಟ್ಟಿ ನಗರದಲ್ಲಿ ಕುರುಬ ಸಮುದಾಯದ ಮೂಲ ಕಸುಬಾಗಿದ್ದ ಕಂಬಳಿ ತಯಾರಿಕೆ ಸರ್ಕಾರದ ಪೂರಕ ಬೆಂಬಲವಿಲ್ಲದೆ ಇದೀಗ ಕೇವಲ ಒಂದೇ ಒಂದು ಕುಟುಂಬ ಈ ಕಾಯಕದಲ್ಲಿ ತೊಡಗಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಕನ್ನಡಿಯಾಗಿದೆ. ಬೇಡಿಕೆಯಿಲ್ಲದೆ ಕಂಬಳಿ ತಯಾರಿಕೆ ಅವನತಿಯತ್ತ ಸಾಗಿದ್ದು, ಸರ್ಕಾರ ಗುಡಿಕೈಗಾರಿಕೆ ಉಳಿಸಲು ಸಹಾಯಹಸ್ತ ನೀಡಬೇಕಿದೆ.

ಶಿವಾನಂದ ಪಿ. ಮಹಾಬಲೇಟ್ಟಿ ರಬಕವಿ-ಬನಹಟ್ಟಿ

ಕಂಬಳಿ ತಯಾರಿಸುವ ಕಾಯಕ ಕುರುಬ ಸಮುದಾಯಕ್ಕೆ ಅವರ ಹಿರಿಯರಿಂದ ಬಂದ ಬಳುವಳಿ. ಮೊದಲು ಕರಿಗಾಯಿಗಳ ಹತ್ತಿರ ಹೋಗಿ ಹಿಂಡಿನ ಜವಾರಿ ಕುರಿಗಳ ತುಪ್ಪಳ ಕತ್ತರಿಸಿ ಸಂಗ್ರಹಿಸಿ ಅದರ ಹಂಜಿಯನ್ನು ಮಾಡಲಾಗುತ್ತದೆ. ನಂತರ ಗಾಂಧಿ ಚರಕದಲ್ಲಿ ನೂಲುವುದು ಮಹಿಳೆಯರ ಕಾಯಕ. ಬಳಿಕ ಕಂಬಳಿ ನೂಲುಗಳನ್ನು ಎಳೆಎಳೆಗಳಾಗಿ ಜೋಡಿಸಿ ನೇಯ್ಗೆ ಮಾಡಿ ಗಂಜಿ ಸವರಿ ಬಿಸಿಲಿನಲ್ಲಿ ಒಣಗಿಸಿದಾಗ ಒಂದು ಕಂಬಳಿ ಸಿದ್ಧವಾಗುತ್ತದೆ. ಒಂದು ಕಂಬಳಿ ನೇಯ್ಗೆಗೆ ಕನಿಷ್ಠ ಎರಡು ದಿನ ಬೇಕೇ ಬೇಕು.

ಇಡೀ ರಬಕವಿ-ಬನಹಟ್ಟಿಯಾದ್ಯಂತ ನೂರಾರು ಕುರುಬ ಸಮುದಾಯದ ಮೂಲ ಕಸುಬಾಗಿದ್ದ ಕಂಬಳಿ ತಯಾರಿಕೆ ಸರ್ಕಾರದ ಪೂರಕ ಬೆಂಬಲವಿಲ್ಲದೆ ಇದೀಗ ಕೇವಲ ಒಂದೇ ಒಂದು ಕುಟುಂಬ ಈ ಕಾಯಕದಲ್ಲಿ ತೊಡಗಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಇಡೀ ಕುರುಬ ಜನಾಂಗವೇ ಕಂಬಳಿ ತಯಾರಿಕೆಯಿಂದ ದೂರವಾಗಿರುವುದು ಯಾವುದೇ ಧಾರ್ಮಿಕ ಮತ್ತು ಕೆಡುಕಿನ ಸಮಯದಲ್ಲೂ ಸಾಂಪ್ರದಾಯಕವಾಗಿ ಬಳಕೆಯಾಗುವ ಕಂಬಳಿ ತಯಾರಿಕೆ ಅವನತಿಯತ್ತ ಸಾಗಿರುವುದು ಬೇಸರದ ಸಂಗತಿಯಾಗಿದೆ.

ಬನಹಟ್ಟಿಯ ಸೋಮವಾರ ಪೇಟೆಯಲ್ಲಿನ ಮಲ್ಲಪ್ಪ ತುಂಗಳ ಎಂಬ ನೇಕಾರ ಮಾತ್ರ ಸದ್ಯ ಕಂಬಳಿ ನೇಯ್ಗೆ ಮಾಡುವ ಕಾಯಕದಲ್ಲಿದ್ದಾರೆ. ಸರ್ಕಾರದ ಯಾವುದೇ ನೆರವಿಲ್ಲದ ಕಾರಣ ಉಳಿದೆಲ್ಲ ಕುಟುಂಬಗಳು ಕಂಬಳಿ ತಯಾರಿಕೆ ಕಾಯಕದಿಂದ ದೂರ ಸರಿಯುವಂತಾಗಿದೆ.

ಅಂಬಲಿಗಿಂತ ಉಂಬಳಿಯಿಲ್ಲ ಕಂಬಳಿಗಿಂತ ಹಾಸಿಗೆಯಿಲ್ಲ’ ಎಂಬ ಹಿರಿಯರ ನಾಣ್ಣುಡಿ ಎಷ್ಟು ಸತ್ಯವೆಂಬುದು ಕಂಬಳಿ ಉಪಯೋಗಿಸಿದವರಿಗೆ ಮಾತ್ರ ತಿಳಿಯುವುದು. ಮದುವೆ, ಕೆಲವು ಸಮುದಾಯಗಳ ಪೂಜೆ, ಮತ್ತಿತರ ಧಾರ್ಮಿಕ ಕಾರ್ಯಗಳಲ್ಲಿ ಮತ್ತು ಸ್ತ್ರೀಯರು ಋತುಮತಿಗಳಾದಾಗ, ಅಲ್ಲದೇ ಕೆಲ ಸಮುದಾಯಗಳಲ್ಲಿ ಕೆಡುಕಿನ ಸಮಯದಲ್ಲೂ ಕಂಬಳಿ ಬಳಕೆ ಸಂಪ್ರದಾಯವಾಗಿದೆ. ಈ ಕಂಬಳಿ ತಯಾರಿಸುವ ಕಲೆ ಅದ್ಭುತ ಮತ್ತು ಕಷ್ಟದಾಕರವಾದ ಕರಕುಶಲ ಕಲೆ. ಕುರುಬ ಸಮುದಾಯದ ಯಾವೊಂದು ಕುಟುಂಬವೂ ಇದೀಗ ತಯಾರಿಕೆಯತ್ತ ಚಿತ್ತ ಹರಿಸದ ಕಾರಣ ಇದೀಗ ನೇಪಥ್ಯಕ್ಕೆ ಸರಿದಿದೆ.

ರಗ್ಗುಗಳ ಭರಾಟೆ ಕಾರಣ: ಕಂಬಳಿ ಮಾರುಕಟ್ಟೆಯನ್ನು ರಗ್ಗುಗಳು ಆಕ್ರಮಿಸುತ್ತಿವೆ. ನಕಲಿ ಅಥವಾ ಕೊಂಚ ಪ್ರಮಾಣದಲ್ಲೂ ಉಣ್ಣೆ ನೂಲು ಉಪಯೋಗಿಸದೆ ಕಂಬಳಿ ಮಾರುಕಟ್ಟೆಯಲ್ಲಿ ರಗ್ಗುಗಳ ರೂಪಾಂತರದಲ್ಲಿ ಬಂದ ಕಾರಣ ಮತ್ತು ಉಣ್ಣೆಗೆ ಗಂಜಿ ಹಾಕುವುದರಿಂದ ಅದು ಚುಚ್ಚುವ ಗುಣದಿಂದಾಗಿ ಕಂಬಳಿ ಖರೀದಿಸುವವರು ಕಡಿಮೆಯಾಗಿದ್ದಾರೆ. ರಗ್ಗುಗಳು ನುಣುಪಾಗಿ, ಅಂದಾಗಿರುವುದರಿಂದ ಪ್ರತಿ ಹಳ್ಳಿಗೂ ಜನ ಮಾರಾಟಕ್ಕೆ ಬರುತ್ತಿರುವುದರಿಂದ ಸಾಂಪ್ರದಾಯಕ ಉಣ್ಣೆ ಕಂಬಳಿಗಳು ಮೂಲೆ ಸೇರುವಂತಾಗಿವೆ.

ನಿರ್ವಹಣೆ ಕಷ್ಟ: ಒಂದು ಕಂಬಳಿ ನೇಯ್ಗೆಗೆ ೩ ರಿಂದ ೫ ಕೆಜಿ ಕುರಿ ಉಣ್ಣೆ ಬೇಕು. ಉಣ್ಣೆ ಹದಗೊಳಿಸಿದ ನಂತರ ನೂಲು ಮಾಡುವುದು. ನಂತರ ಮಗ್ಗದಲ್ಲಿ ಕಂಬಳಿ ನೇಯಲು ಮರ‍್ನಾಲ್ಕು ದಿನ ಶ್ರಮಬೇಕು. ಮನೆ ಮಂದಿಯೆಲ್ಲ ಕೆಲಸ ಮಾಡಿದರೆ ವಾರಕ್ಕೆ ಎರಡು ಕಂಬಳಿ ನೇಯ್ಗೆ ಸಾಧ್ಯ. ಮಾರುಕಟ್ಟೆಯಲ್ಲಿ ಮರಾಟದಿಂದ ₹ ೧೫೦೦ ರಿಂದ ₹ ೨೦೦೦ ಸಿಗಬಹುದು. ಇದರಿಂದ ಕುಟುಂಬ ನಿರ್ವಹಣೆ ಕಷ್ಟವೆ ಎನ್ನುತ್ತಾರೆ ಮಲ್ಲಪ್ಪ ತುಂಗಳ.`ಕಂಬಳಿ ನೇಯ್ಗೆಯಿಂದ ಉತ್ತಮ ಲಾಭವೆನೂ ಇಲ್ಲ. ಹಿರಿಯರ ಪರಂಪರೆ ಉಳಿಸಬೇಕೆಂಬುದಾಗಿದೆ. ಅದೂ ಸಾಧ್ಯವಾಗುತ್ತಿಲ್ಲ. ಸರ್ಕಾರ ಗಮನಹರಿಸಿದ್ದಲ್ಲಿ ಈ ಕಸಬು ಮುಂದುವರೆಯುವುದು ಅಸಾಧ್ಯ. ಈಗಿನ ಯುವಕರು ಕಷ್ಟದ ಮತ್ತು ಕಡಿಮೆ ಆದಾಯದ ಕಂಬಳಿ ತಯಾರಿಕೆಯತ್ತ ಮುಂದಾಗುತ್ತಿಲ್ಲವಾದ್ದರಿಂದ ಕಂಬಳಿ ತಯಾರಿಕೆ ತನ್ನ ವೈಭವ ಕಳೆದುಕೊಂಡಿದೆ.

-ಮಲ್ಲಪ್ಪ ತುಂಗಳ, ಬನಹಟ್ಟಿ ಕಂಬಳಿ ತಯಾರಕ