ಸಾರಾಂಶ
ಚಿತ್ರದುರ್ಗ: ಪ್ರಬಲ ಜಾತಿಗಳ ವಿರೋಧ ಲೆಕ್ಕಿಸದೆ ಜಾತಿ ಜನಗಣತಿ ಜಾರಿಗೆ ತರುವಂತೆ ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಉಪಾಧ್ಯಕ್ಷ ಜೆ.ಯಾದವರೆಡ್ಡಿ ಒತ್ತಾಯಿಸಿದರು.ಇಲ್ಲಿನ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಸಮೀಕ್ಷೆ ವೈಜ್ಞಾನಿಕವಾಗಿದ್ದರೂ, ಕೆಲವು ಪ್ರಭಾವಿ ಜಾತಿಗಳ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಒತ್ತಡಗಳಿಗೆ ಮಣಿಯದೆ ವರದಿಯನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು. ಕಾಂತರಾಜ್ ಆಯೋಗದ ನೇತೃತ್ವದಲ್ಲಿ ಜಾತಿ ಜನಗಣತಿ ತಯಾರಾಗಿ ಬಿಡುಗಡೆಗೂ ಮುನ್ನ ಕೆಲವು ಪಟ್ಟಭದ್ರರು ವಿರೋಧಿಸುತ್ತಿದ್ದಾರೆ. ಹಾವನೂರು, ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ ಆಯೋಗದದ ಸಮೀಕ್ಷೆಗೂ ವಿರೋಧವಿತ್ತು. ಮಂಡಲ್ ಆಯೋಗದ ವರದಿಯನ್ನು ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗ ಬಿಡುಗಡೆಗೊಳಿಸಿದರು. ಅಮೇರಿಕಾ, ಜರ್ಮನಿ, ಜಪಾನ್‌ನಲ್ಲಿಯೂ ಜಾತಿ ಜನಗಣತಿಯಾಗುತ್ತದೆ ಎಂದು ತಿಳಿಸಿದರು. ಜಾತಿ ಜನಗಣತಿಯಲ್ಲಿ ಯಾವುದೇ ಗೊಂದಲವಿಲ್ಲ. ಕೆಲವು ಪೂರ್ವಾಗ್ರಹ ಪೀಡಿತರು ನಿಜವಾದ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೋಲ್‌ಕಾಲ್ ರಾಜಕಾರಣವನ್ನು ಮೆಟ್ಟಿ ನಿಂತು ಒಳ ಸುಳಿಗೆ ಬಲಿಯಾಗದೆ ಕರಾರುವಕ್ಕಾಗಿರುವ ಜಾತಿ ಜನಗಣತಿ ಸಮೀಕ್ಷೆ ವರದಿಯನ್ನು ಬಿಡುಗಡೆಗೊಳಿಸಬೇಕು. ಸಂಭವನೀಯ ಅಂಕಿ ಅಂಶಗಳ ಬಗ್ಗೆ ಪ್ರಬಲ ಜಾತಿಗಳಿಗೆ ಹೆದರಿಕೆಯಿರುವುದರಿಂದ ಜಾತಿ ಜನಗಣತಿಯನ್ನು ವಿರೋಧಿಸುತ್ತಿದ್ದಾರೆ. ರಾಜ್ಯದಲ್ಲಿ ಏಳುಕೋಟಿ ಜನರ ಸಮೀಕ್ಷೆಯಾಗಿದೆ. ಕಾಂತರಾಜ್ ವರದಿಯಲ್ಲಿ ಏನಾದರೂ ತಪ್ಪಾಗಿದ್ದರೆ ಪರಿಶೀಲನೆ ಮಾಡಬಹುದು. ಜನರನ್ನು ದಿಕ್ಕುತಪ್ಪಿಸುವ, ಕೆಲವರ ಹುನ್ನಾರಕ್ಕೆ, ಕಿಮ್ಮತ್ತು ನೀಡದೆ ಸಿದ್ದರಾಮಯ್ಯನವರು ಮುಕ್ತ ಮನಸ್ಸಿನಿಂದ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು. ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ ಮಾತನಾಡಿ, ಸಾಚಾರ್ ವರದಿ ಪ್ರಕಾರ ಮುಸಲ್ಮಾನರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದಾರೆನ್ನುವುದು ಬಹಿರಂಗವಾಗಿದೆ. ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಜಾತಿ ಜನಗಣತಿ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಸಾಲೋಮನ್ ರಾಜ್‌ಕುಮಾರ್, ಎ.ಜಾಕೀರ್‌ಹುಸೇನ್, ಮಹಮದ್ ಸಿರಾಜ್ ಹಾಜರಿದ್ದರು.