ಜಾಗ ಒತ್ತುವರಿ ತಡೆಗೆ ಲ್ಯಾಂಡ್ ಬೀಟ್ ವ್ಯವಸ್ಥೆ ಕೈಗೊಳ್ಳಿ

| Published : Sep 03 2024, 01:35 AM IST

ಸಾರಾಂಶ

ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಜ್ವಲಕುಮಾರ ಘೋಷ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸರ್ಕಾರಿ ಜಾಗ ಒತ್ತುವರಿ ತಡೆಗೆ ಪೊಲೀಸ್ ಬೀಟ್ ಮಾದರಿಯಲ್ಲಿ ಲ್ಯಾಂಡ್ ಬೀಟ್ ವ್ಯವಸ್ಥೆ ಕೈಗೊಂಡು ಒತ್ತುವರಿ, ಅತಿಕ್ರಮಣ ತಡೆಗಟ್ಟಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲಕುಮಾರ ಘೋಷ್ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಸರ್ಕಾರಿ ಜಾಗವನ್ನು ಗುರುತಿಸಿಕೊಳ್ಳಬೇಕು. ಒತ್ತುವರಿಯಾಗಬಹುದಾದ ಜಾಗಗಳನ್ನು ಆದ್ಯತೆ ಮೇಲೆ ಪರಿಶೀಲಿಸಿ ಒತ್ತುವರಿಯಾಗದಂತೆ ನಿಗಾ ವಹಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಜಾಗದ ಕುರಿತು ಇರುವ ಅನುದಾನವನ್ನು ಬಳಕೆ ಮಾಡಿಕೊಂಡು ಸುತ್ತಲೂ ತಂತಿ ಬೇಲಿ ವ್ಯವಸ್ಥೆ ಸೇರಿದಂತೆ ಸರ್ಕಾರಿ ಜಾಗ ಇರುವ ಕುರಿತು ಫಲಕಗಳನ್ನು ಅಳವಡಿಸುವ ಮೂಲಕ ಒತ್ತುವರಿ ತಡೆಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಸರ್ಕಾರಿ ಜಾಗ ಸೇರಿದಂತೆ ಇತರೆ ಸರ್ವೇ ಕಾರ್ಯಕ್ಕಾಗಿ ಈಗಿರುವ ಸಾಧನ ಹಳೆಯದಾಗಿರುವುದರಿಂದ ಪ್ರಸ್ತುತ ಕಾಲೋಚಿತ ಡಿಜಿಪಿಎಸ್ ಯಂತ್ರ ಬಳಸಿ ಸರ್ವೇ ಕಾರ್ಯ ಕೈಗೊಳ್ಳುವುದರಿಂದ ಸಮಯಕ್ಕೆ ತಕ್ಕಂತೆ ಕಾರ್ಯದಲ್ಲಿ ವೇಗ ದೊರೆಯಲಿರುವುದರಿಂದ ಡಿಜಿಪಿಎಸ್ ಯಂತ್ರಗಳನ್ನು ಒದಗಿಸುವ ಕುರಿತಂತೆ ಕ್ರಮ ವಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಜನವರಿ ಮಾಹೆಯಿಂದ ಈವರೆಗೆ ೪೩೧ ಮಿ.ಮೀ ಮಳೆಯಾಗಿದ್ದು, ವಾಡಿಕೆ ಮಳೆಯ ಪ್ರಮಾಣಕ್ಕಿಂತ ಶೇ.೪೪ರಷ್ಟು ಹೆಚ್ಚಿನ ಮಳೆಯಾಗಿದೆ. ೭೧೧೩೭೦ ಹೆಕ್ಟೇರ್ ಮುಂಗಾರು ಬಿತ್ತನೆ ಕ್ಷೇತ್ರದಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಸಜ್ಜೆ, ಮುಸುಕಿನ ಜೋಳ ಹತ್ತಿ, ಸೂರ್ಯಕಾಂತಿ ಹಾಗೂ ಕಬ್ಬು ಬೆಳೆಯಲಾಗಿದ್ದು, ಇಲ್ಲಿಯವರೆಗೆ ೬೭೬೪೩೩ ಹೆಕ್ಟೇರ್‌ಗಳಲ್ಲಿ ಶೇ.೯೫.೧೦ ರಷ್ಟು ಬಿತ್ತನೆಯಾಗಿದೆ. ಬಿತ್ತನೆ ಬೀಜ ೧೪೬೨.೪೫ ಕ್ವಿಂಟಾಲ್ ಹಾಗೂ ೮೦೮೮೨ ಮೇ.ಟನ್ ರಸಗೊಬ್ಬರ ದಾಸ್ತಾನಿದ್ದು, ಸಧ್ಯಕೆ ಯಾವುದೇ ಕೊರತೆ ಇಲ್ಲ. ಆದ್ಯಾಗ್ಯೂ ಮುಂದಿನ ದಿನಗಳಲ್ಲಿ ಯಾವುದೇ ಕೊರತೆಯಾಗದಂತೆ ಅಗತ್ಯ ದಾಸ್ತಾನು ಮಾಡಿಕೊಳ್ಳುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೇ ಈ ವರ್ಷ ಎಲ್ಲ ಡ್ಯಾಂಗಳು ಭರ್ತಿಯಾಗಿವೆ. ಜಿಲ್ಲೆಯ ಡ್ಯಾಂಗಳಲ್ಲಿ ಶೇ.೯೩.೫ ರಷ್ಟು ನೀರು ಸಂಗ್ರಹವಿದೆ. ವಿಪತ್ತು ನಿರ್ವಹಣೆಗಾಗಿ ಗ್ರಾಮ ಪಂಚಾಯತ್ ಟಾಸ್ಕ್ ಪೋರ್ಸ್ ಸಮಿತಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪ್ರವಾಹ ಪರಿಸ್ಥಿತಿ ಹತೋಟಿಗೆ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ಅಗತ್ಯವಾದ ಎಲ್ಲ ರಕ್ಷಣಾ ಸಾಮಗ್ರಿಗಳಾದ ಬೋಟ್, ರೋಪ್ಸ್, ಲೈಫ್ ಜಾಕೆಟ್, ಈಜುಗಾರ, ಟಾರ್ಚ್ ಹಾಗೂ ಚೈನ್ ಸಾ ಇತ್ಯಾದಿ ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ವ್ಯವಸ್ಥಿತವಾಗಿಟ್ಟುಕೊಳ್ಳಲಾಗಿದೆ. ಪ್ರವಾಹ ಪರಿಸ್ಥಿತಿ ಕುರಿತು ಪ್ರತಿ ತಾಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮತ್ತು ನದಿ ಪಾತ್ರದ ಗ್ರಾಮ ಪಂಚಾಯತಿಗಳಿಗೆ ಒಬ್ಬರಂತೆ ತಾಲೂಕಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿ ೭ ಜನರ ಪ್ರಾಣ ಹಾನಿಗೆ ಸಂಬಂಧಿಸಿದಂತೆ ೯೫ ಜಾನುವಾರುಗಳಿಗೆ ಹಾಗೂ ಹಾನಿಯಾದ ೨೭೬ ಮನೆಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವ ನಿಧಿ ಹಾಗೂ ಶಕ್ತಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣೆ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.