ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುವ್ಯಂಗ್ಯಚಿತ್ರಗಳಿಗೆ ಸಮಾಜದ ಪರವಾಗಿ ಎಚ್ಚರಿಸುವ ಗುಣ ಇರುತ್ತದೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅಭಿಪ್ರಾಯಪಟ್ಟರು.ಬ್ಯಾಂಟರ್ ಬಾಬು ಪಬ್ಲಿಕೇಷನ್ಸ್ ವಿಶ್ವ ವ್ಯಂಗ್ಯಚಿತ್ರಕಾರರ ದಿನಾಚರಣೆ ಅಂಗವಾಗಿ ವಿಜಯನಗರದ ಶ್ರೀ ಕಲಾನಿಕೇತನ ಕಲಾ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಎಂ.ವಿ. ನಾಗೇಂದ್ರ ಬಾಬು ಅವರ ವ್ಯಂಗ್ಯಚಿತ್ರ ಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಮುಖ್ಯಮಂತ್ರಿಗಳಾಗಿದ್ದ ಆರ್. ಗುಂಡೂರಾವ್, ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್ ಪತ್ರಿಕೆಗಳಲ್ಲಿ ವ್ಯಂಗ್ಯ ಚಿತ್ರಗಳನ್ನು ಗಮನಿಸುತ್ತಿದ್ದರು. ಎಚ್ಚೆತ್ತುಕೊಳ್ಳುತ್ತಿದ್ದರು ಎಂದರು. ಹಿಂದೆ ರಾಜಕಾರಣಿಗಳು ಸೂಕ್ಷ್ಮ ಸಂವೇದನವುಳ್ಳರಾಗಿ ತಮ್ಮ ಬಗ್ಗೆ ವ್ಯಂಗ್ಯಚಿತ್ರಗಳು ಪ್ರಕಟವಾದರೆ ಅವು ಸಮಾಜದ ಧ್ವನಿಯಾಗಿವೆ ಎಂದು ತಿಳಿದು ಎಚ್ಚೆತ್ತುಕೊಳ್ಳುತ್ತಿದ್ದರು. ಆದರೆ ಈಗ ವ್ಯಂಗ್ಯಚಿತ್ರ ಬರೆದರೆ ಕೇಸು ದಾಖಲಿಸುವ ಹಂತ ತಲುಪಿದ್ದೇವೆ ಎಂದು ಅವರು ವಿಷಾದಿಸಿದರು.ಮುಖ್ಯಅತಿಥಿಗಳಾಗಿದ್ದ ಸಮಾಜ ಸೇವಕ ಕೆ. ರಘುರಾಂ ಮಾತನಾಡಿ, ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನಲ್ಲಿ ಈಜುಕೊಳವನ್ನು ಈಜುವ ಮೂಲಕ ಉದ್ಘಾಟಿಸಿದ್ದರು. ಆ ಸಂದರ್ಭದಲ್ಲಿ ನಮ್ಮೂರಿನಲ್ಲಿ ಚಿತಾಗಾರ ಉದ್ಘಾಟನೆಯಿಂದ ಬನ್ನಿ? ಎಂಬ ಕಾರ್ಟೂನ್ ಪ್ರಕಟವಾಗಿತ್ತು. ಇದನ್ನು ಗಮನಿಸಿದಾಗ, ಅಲ್ಲಿರುವ ಗೂಡಾರ್ಥ ಗೊತ್ತಾಗುತ್ತದೆ ಎಂದರು.
ಮೈಸೂರಿನವರೇ ಆದ ಆರ್.ಕೆ. ಲಕ್ಷ್ಮಣ್ ಅವರು ಮುಂಬೈನಲ್ಲಿ ನೆಲೆನಿಂತು ಪ್ರಸಿದ್ಧ ವ್ಯಂಗ್ಯಚಿತ್ರಕಾರರಾಗಿ ಬೆಳೆದರು. ಆ ರೀತಿಯಲ್ಲಿ ಅವರ ಶಿಷ್ಯರಾದ ನಾಗೇಂದ್ರ ಬಾಬು ಅವರ ಕೂಡ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ಪ್ರಜಾವಾಣಿಯಲ್ಲಿ ರಾಮಮೂರ್ತಿ ಅವರು ಕೂಡ ವ್ಯಂಗ್ಯಚಿತ್ರಕಾರರಾಗಿ ಸಾಕಷ್ಟು ಹೆಸರು ಮಾಡಿದ್ದರು ಎಂದರು.ವ್ಯಂಗ್ಯಚಿತ್ರಕಾರ ಎಂ.ವಿ. ನಾಗೇಂದ್ರ ಬಾಬು ಮಾತನಾಡಿ, ಮುಂದಿನ ವರ್ಷದ ಮಾರ್ಚ್ ವೇಳೆಗೆ ಆ್ಯಂಪಿ ಮ್ಯಾನ್ ಕಾರ್ಟೂನ್ ಸೂಪರ್ ಹಿರೋ ಚಿತ್ರ ಅನಾವರಣಗೊಳ್ಳಲಿದೆ. ನನ್ನ ಮೂವತ್ತೈದು ವರ್ಷಗಳ ವೃತ್ತಿ ಬದುಕಿನ ಬಗ್ಗೆ ಎರಡು ಪುಸ್ತಕಗಳು ಕೂಡ ಪ್ರಕಟವಾಗುತ್ತವೆ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಯಾವುದೇ ಪತ್ರಿಕೆಗಳು, ಮ್ಯಾಗಝೀನ್‌ಗಳು ಪೋಟೋ, ರೇಖಾ ಚಿತ್ರ, ವ್ಯಂಗ್ಯಚಿತ್ರಗಳಿಲ್ಲದೇ ಪ್ರಕಟವಾಗುವುದಿಲ್ಲ ಎಂದರು.ಅಧ್ಯಕ್ಷತೆ ವಹಿಸಿದ್ದ ಭರಣಿ ಆರ್ಟ್ ಗ್ಯಾಲರಿ ಸಂಸ್ಥಾಪಕ ಎನ್.ಬಿ. ಕಾವೇರಪ್ಪ ಮಾತನಾಡಿ. ವ್ಯಂಗ್ಯಚಿತ್ರ ರಚನೆಗೆ ಸಾಕಷ್ಟು ಪರಿಶ್ರಮ, ಬುದ್ಧಿವಂತಿಕೆ ಬೇಕು. ಇವರೆಡು ಇದ್ದಲ್ಲಿ ಒಳ್ಳೆಯ ಹೆಸರು ಮಾಡಬಹುದು ಎಂದರು.
ಶ್ರೀ ಕಲಾನಿಕೇತನ ಕಲಾ ಶಾಲೆಯ ಪ್ರಾಂಶುಪಾಲ ಕೆ.ಸಿ. ಮಹದೇವ ಶೆಟ್ಟಿ ಮಾತನಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಬ್ಯಾಂಟರ್ ಬಾಬು ಪಬ್ಲಿಕೇಷನ್ಸ್ ಸಂಚಾಲಕ ಚಕ್ರಪಾಣಿ ವಂದಿಸಿದರು.ಬಹಳಷ್ಟು ಮಂದಿಗೆ ಗೊತ್ತಿಲ್ಲ!:
ಆರ್,ಎಸ್. ನಾಯ್ಡು ನಗರ ಇದೆ. ಆದರೆ ಅವ್ರು ವ್ಯಂಗ್ಯಚಿತ್ರಕಾರರು ಎಂಬುದೇ ಗೊತ್ತಿಲ್ಲ! ಮೈಸೂರಿನಲ್ಲಿ ಆರ್.ಎಸ್. ನಾಯ್ಡು ನಗರ ಎಂಬ ಬೃಹತ್ ಬಡಾವಣೆ ಇದೆ. ಆದರೆ ಅವರು ಪ್ರಸಿದ್ಧ ವ್ಯಂಗ್ಯಚಿತ್ರಕಾರರು ಎಂಬುದೇ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಇಂದಿರಾಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದರೂ ಅವರ ವಿರುದ್ಧವೇ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದರು ಎಂದು ಶ್ರೀ ಕಲಾನಿಕೇತನ ಕಲಾ ಶಾಲೆಯ ಪ್ರಾಂಶುಪಾಲ ಕೆ.ಸಿ. ಮಹದೇವಶೆಟ್ಟಿ ಹೇಳಿದರು. ಇವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಸಂಪೂರ್ಣ ಮಾಹಿತಿ ದೊರೆತ ನಂತರ ವಿಚಾರ ಸಂಕಿರಣ ಮಾಡುವ ಉದ್ದೇಶವಿದೆ ಎಂದರು.