ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧದ ಪ್ರಕರಣ ರದ್ದು

| Published : Mar 07 2024, 01:45 AM IST

ಸಾರಾಂಶ

ಕಾಂಗ್ರೆಸ್ ನಾಯಕರ ವಿರುದ್ಧ ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡಿ ಅವರನ್ನು ಬೆದರಿಸುವುದು ನಡೆಯುವುದಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಅರ್ಥ ಮಾಡಿಕೊಂಡು ಸರಿದಾರಿಯಲ್ಲಿ ಮುನ್ನಡೆಯಬೇಕು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಂಚು ರೂಪಿಸಿ ಸುಳ್ಳು ಪ್ರಕರಣ ದಾಖಲಿಸಿರುವುದು ಸ್ಪಷ್ಟವಾಗಿದ್ದು, ದೇಶದ ಸರ್ವೋಚ್ಛ ನ್ಯಾಯಾಲಯ ಅವರ ವಿರುದ್ಧ ಪ್ರಕರಣ ರದ್ದುಗೊಳಿಸಿರುವುದು ಸತ್ಯಕ್ಕೆ ಲಭಿಸಿದ ಜಯ ಎಂದು ನಗರಸಭೆ ಸದಸ್ಯ, ಹಿರಿಯ ಕಾಂಗ್ರೆಸ್ ಮುಖಂಡ ಬಿ. ಕೆ ಮೋಹನ್ ಹೇಳಿದರು.

ಬುಧವಾರ ರಂಗಪ್ಪ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಜಯೋತ್ಸವದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ನಾಯಕರ ವಿರುದ್ಧ ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡಿ ಅವರನ್ನು ಬೆದರಿಸುವುದು ನಡೆಯುವುದಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಅರ್ಥ ಮಾಡಿಕೊಂಡು ಸರಿದಾರಿಯಲ್ಲಿ ಮುನ್ನಡೆಯಬೇಕು. ಇಲ್ಲವಾದಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.

ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಸದಸ್ಯರಾದ ಕೆ.ಸುದೀಪ್ ಕುಮಾರ್, ಬಿ.ಎಂ. ಮಂಜುನಾಥ, ಜಾರ್ಜ್, ಸೈಯದ್ ರಿಯಾಜ್, ಬಷೀರ್ ಅಹ್ಮದ್, ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಕುಮಾರ್, ಮುಖಂಡರಾದ ಬಿ.ಎಸ್ ಗಣೇಶ್, ಮೋಹನ್ ಪಳನಿ, ಬದರಿನಾರಾಯಣ, ರಂಗನಾಥ್, ಕೂಡ್ಲಿಗೆರೆ ಮಹದೇವ್, ಗಂಗಾಧರ್, ಸಿ. ಜಯಪ್ಪ, ಅಮೀರ್ ಜಾನ್, ರುಕ್ಮಿಣಿ, ಅನುಸೂಯ ಸೇರಿ ಮುಖಂಡರು, ಕಾರ್ಯಕರ್ತರು ಸಿಹಿ ಹಂಚುವ ಮೂಲಕ ಪಾಲ್ಗೊಂಡು ಸಂಭ್ರಮಿಸಿದರು.