ಪ್ರಮೋದ್‌ ಮುತಾಲಿಕ್‌ ಮೇಲೆ ಪ್ರಕರಣ ದಾಖಲು

| Published : Jan 14 2025, 01:04 AM IST

ಸಾರಾಂಶ

ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಶ್ರೀರಾಮಸೇನೆ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್‌ ಹಾಗೂ ಇತರರ ಮೇಲೆ ಸಕಲೇಶಪುರ ನಗರ ಪೊಲೀಸ್‌ ಠಾಣೆಯಲ್ಲಿ ಕೋಮು ಪ್ರಚೋದನೆ ಆರೋಪದ ಪ್ರಕರಣ ದಾಖಲಾಗಿದೆ. ಸಕಲೇಶಪುದರಲ್ಲಿ ನಡೆದ "ವಿರಾಟ್ ಹಿಂದೂ ಸಮಾಜೋತ್ಸವ " ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಪ್ರಮೋದ್ ‌ಮುತಾಲಿಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಶ್ರೀರಾಮಸೇನೆ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್‌ ಹಾಗೂ ಇತರರ ಮೇಲೆ ಸಕಲೇಶಪುರ ನಗರ ಪೊಲೀಸ್‌ ಠಾಣೆಯಲ್ಲಿ ಕೋಮು ಪ್ರಚೋದನೆ ಆರೋಪದ ಪ್ರಕರಣ ದಾಖಲಾಗಿದೆ.

ಜ.9ರಂದು ಸಕಲೇಶಪುದರಲ್ಲಿ ನಡೆದ "ವಿರಾಟ್ ಹಿಂದೂ ಸಮಾಜೋತ್ಸವ " ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಪ್ರಮೋದ್ ‌ಮುತಾಲಿಕ್, ಹಿಂದೂಗಳು ಮುಸ್ಲಿಂರಿಗೆ ಕುರಿ ಮಾಂಸ ಕೊಟ್ಟರೂ ಅವರು ಹಲಾಲ್ ಆಗಿಲ್ಲ ಎಂದು ತಿನ್ನುವುದಿಲ್ಲ. ಆದರೆ ಹಿಂದೂಗಳು ಮುಸ್ಲಿಂ ಹೋಟೆಲ್‌ಗಳಿಗೆ ಹೋಗಿ ಹಲಾಲ್ ಮಾಡಿರುವ ಮಾಂಸವನ್ನು ಚಪ್ಪರಿಸಿಕೊಂಡು ತಿಂತಾರೆ. ಅದು ಸಗಣಿ ತಿಂದಂಗೆ, ಇದು ಸರಿನಾ? 2003ರಲ್ಲಿ ಸಕಲೇಶಪುರದಲ್ಲಿ ಹಿಂದುಗಳ ಏರಿಯಾದಲ್ಲಿ ಮುಸ್ಲಿಂ ಸಮುದಾಯದವರು ಒಂದು ಗೋಮಾಂಸದ ಅಂಗಡಿಯನ್ನು ತೆರೆದಿದ್ದರು. ಆಗ ಹಿಂದೂಗಳು ಸುಮ್ಮನೆ ಇರಲಿಲ್ಲ. ಅದೇ ಅಂಗಡಿಯ ಎದುರು ಒಂದು ಹಂದಿ ಮಾಂಸದ ಅಂಗಡಿಯನ್ನು ತೆರೆದರು. ಮುಸ್ಲಿಂರು ಏನಾದರೂ ದನದ ಮಾಂಸದ ಅಂಗಡಿಯನ್ನು ತೆರೆದರೆ ನಿಮ್ಮ ಮನೆಯ ಮುಂದೆ ಹಂದಿ ಕಡಿದು ತಿಂತೀವಿ. ಸಹನೆಗೆ ಒಂದು ಮಿತಿ ಬೇಡವಾ ಆಕಳ ರಕ್ತ, ನಮ್ಮ ರಕ್ತ. ಮುಂದಿನ ದಿನಗಳಲ್ಲಿ ನಾವು ಗೋಮಾತೆ ರಕ್ಷಣೆ ಮಾಡುತ್ತೇವೆ. ನಾವುಗಳು ಇವತ್ತಿನ ದಿನ ಪ್ರತಿಜ್ಞೆ ಮಾಡಬೇಕು. ಬೆಳಿಗ್ಗೆ ತರಕಾರಿ ಅಂಗಡಿಗೆ ಹೋದಾಗ ಹಿಂದೂಗಳ ಅಂಗಡಿಗಳಲ್ಲಿ ಮಾತ್ರ ತೆಗೆದುಕೊಳ್ಳಬೇಕು. ದೇವಸ್ಥಾನಕ್ಕೆ ಹೋದಾಗ ಹಿಂದೂಗಳ ಹತ್ತಿರ ಮಾತ್ರ ಹಣ್ಣು ಕಾಯಿ ಖರೀದಿಸಬೇಕು.

ಆಗ ಗೋಮಾತೆ ರಕ್ಷಣೆ ಮಾಡಿದಂತೆ ಆಗುತ್ತದೆ. ಆದರೆ ನಾವು ಮುಸ್ಲಿಂರ ಬಳಿ ತೆಗೆದುಕೊಂಡು ನಮ್ಮ ಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳುತ್ತಿದ್ದೇವೆ. ಮುಸ್ಲಿಂರ ಹೋಟೆಲ್‌ಗೆ ಹೋಗುವಾಗ ಒಂದು ಸಾರಿ ಮೂತ್ರ ವಿಸರ್ಜನೆ ಮಾಡಿರುವುದನ್ನು ನೆನಪಿಸಿಕೊಳ್ಳಿ. ಮೂತ್ರ ವಿಸರ್ಜನೆ ಮಾಡಿರುವವರನ್ನು ಪೊಲೀಸರು, ಸರ್ಕಾರ ಜಿಲ್ಲೆಯಿಂದ ಗಡಿಪಾರು ಮಾಡದಿದ್ದರೆ ನಾವೇ ಆತನ ಬಾಯಿಗೆ ಮೂತ್ರ ವಿಸರ್ಜನೆ ಮಾಡುತ್ತೇವೆ. ಸಕಲೇಶಪುರ ಕಾಫಿ ಎಸ್ಟೇಟ್‌ಗಳಲ್ಲಿರುವ ಬಾಂಗ್ಲಾ ದೇಶದವರನ್ನು ಹೊರಹಾಕಬೇಕು. ಇಲ್ಲದ್ದಿದ್ದಲಿ ಮುಂದಿನ ದಿನಗಳಲ್ಲಿ ಗಂಡಾಂತರ ತಪ್ಪಿದ್ದಲ್ಲ. ಕಾಫಿ ತೋಟಕ್ಕೆ ಜನರು ಬೇಕಾದಲ್ಲಿ ನಾನು ಉತ್ತರ ಕರ್ನಾಟಕದಿಂದ ಕಳುಹಿಸಿ ಕೊಡುತ್ತೇನೆ. ಇಲ್ಲವಾದಲ್ಲಿ ನಾವೇ ಬಂದು ಬಾಂಗ್ಲಾ ಮುಸ್ಲಿಂರನ್ನು ಹೊರಹಾಕುತ್ತೇವೆ. ಹಿಂದೂಗಳ ರಕ್ಷಣೆಗಾಗಿ ಬರ್ಜಿ, ಕತ್ತಿ, ತಲ್ವಾರ್‌, ಬಂದೂಕುಗಳನ್ನು ಮನೆಗಳಲ್ಲಿ ಕಾಣುವ ರೀತಿಯಲ್ಲಿ ಇಟ್ಟುಕೊಳ್ಳಬೇಕು. ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ ಆಗುತ್ತಿದೆ. ಇದನ್ನು ಕ್ರೂರವಾಗಿ ನಾವು ಖಂಡಿಸುತ್ತೇವೆ ಎಂದು ಭಾಷಣದಲ್ಲಿ ಹೇಳಿದ್ದರು. ಈ ಅಂಶವನ್ನು ಗುರ್ತಿಸಿದ ಗುಪ್ತ ಮಾಹಿತಿ ಸಿಬ್ಬಂದಿ ಶ್ರೀಧರ್‌ ಎಂ.ಕೆ ಅವರಿಂದ ದೂರು ಆಧರಿಸಿ ಬಿಎನ್‌ಎಸ್ 2023, U/S-196 (1), 353 (2), 3 (5) ಅಡಿ ಪ್ರಕರಣ ದಾಖಲಿಸಲಾಗಿದೆ.