ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಮಕ್ಕಳಿಂದ ಜೀವನಾಂಶ ಪಡೆಯಲು ಪೋಷಕರಿಗೆ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಜೀವನಾಂಶ ಕೇಳುವ ಕೇಸುಗಳು ಅಷ್ಟಾಗಿ ನ್ಯಾಯಾಲಯಕ್ಕೆ ಬಂದಿಲ್ಲ. ಆದರೆ ಮಕ್ಕಳು ಆಸ್ತಿಗಾಗಿ ತಂದೆ, ತಾಯಿ ಮೇಲೆ ಪ್ರಕರಣ ದಾಖಲು ಮಾಡುವುದು ದಿನೇ ದಿನೇ ಹೆಚ್ಚುತ್ತಿದೆ. ಇದು ಕಳವಳಕಾರಿ ಸಂಗತಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್ ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಸಬಲೀಕರಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ, ನಗರದ ಬಾಲಭವನದ ಸಭಾಂಗಣದಲ್ಲಿ ಶುಕ್ರವಾರ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗಾಗಿ ಏರ್ಪಡಿಸಲಾದ ಕಾನೂನು ನೆರವು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಹಿರಿಯ ನಾಗರಿಕರ ಪಾಲನೆ ಪೋಷಣೆ ಮತ್ತು ಸಂರಕ್ಷಣಾ ಕಾಯ್ದೆ -2007 ಜಾರಿ ಮಾಡುವ ಮೂಲಕ ಹಿರಿಯ ನಾಗರಿಕರ ರಕ್ಷಣೆಗೆ ಕಾನೂನಿನ ಬಲ ನೀಡಲಾಗಿದೆ. ಹಿರಿಯ ನಾಗರಿಕರ ರಕ್ಷಣೆಯ ಹೊಣೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೇಲಿದೆ. ಹಿರಿಯ ನಾಗರಿಕ ರಕ್ಷಣೆ ಕಾಯ್ದೆಯಡಿ ಉಪ ವಿಭಾಗಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನಿಡಲಾಗಿದೆ. ಆಸ್ತಿ ರಕ್ಷಣೆ ಜತೆಗೆ ಮಕ್ಕಳಿಂದ ಜೀವನಾಂಶ ಪಡಯಲು ಕಾಯ್ದೆಯಲ್ಲಿ ಹಿರಿಯ ನಾಗರಿಕರಿಗೆ ಅವಕಾಶ ನೀಡಲಾಗಿದೆ ಎಂದರು.ವಿಕಲಚೇತನರು ತಮ್ಮ ನ್ಯೂನತೆಗಳ ಬಗ್ಗೆ ಚಿಂತೆ ಮಾಡಬಾರದು. ಯಾರನ್ನು ದೂಷಣೆ ಮಾಡುವುದರಿಂದ ಪ್ರಯೋಜನವಾಗುವುದಿಲ್ಲ. ವಿಕಲಚೇತನರು ತಮ್ಮ ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಬೇರೆ ಬೇರೆ ರಂಗಗಳಲ್ಲಿ ಸಾಧನೆ ಮಾಡಬೇಕು ಎಂದು ನ್ಯಾಯಾಧೀಶ ಎಂ. ವಿಜಯ್ ಹೇಳಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಮಾತನಾಡಿ, ಹಿರಿಯ ನಾಗರಿಕರ ಹಿತರಕ್ಷಣೆಗಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಹಿರಿಯ ನಾಗರಿಕರಿಗೆ ಪ್ರೀತಿ, ವಿಶ್ವಾಸ, ಗೌರವದಿಂದ ನಡೆಸಿಕೊಳ್ಳುವ ಮನಸ್ಥಿತಿ ಪ್ರತಿಯೊಬ್ಬರಲ್ಲಿಯೂ ಇರಬೇಕು. ಸರ್ಕಾರಿ ಕಚೇರಿಗೆ ಆಗಮಿಸುವ ಹಿರಿಯ ನಾಗರಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಅವರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಕೆಲಸ ಆಗಬೇಕು. ಒತ್ತಡದ ಜೀವನ ನಡೆಸುತ್ತಿರುವ ಅವರನ್ನು ಉದಾಸೀನ ಮಾಡುವುದು ತರವಲ್ಲವೆಂದರು.ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರ ಸುರಕ್ಷತೆ, ಪಾಲನೆ-ಪೋಷಣೆಗಾಗಿ ಪ್ರತ್ಯೇಕ ಇಲಾಖೆ ಹಾಗೂ ಕಾಯ್ದೆ ರೂಪಿಸಲಾಗಿದೆ. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್ ಮಾತನಾಡಿ, ವೃದ್ಧಾಪ್ಯ ಎಂಬುವುದು ಮಾನವನ ಅವಿಭಾಜ್ಯ ಅಂಗವಾಗಿದೆ. 60 ವರ್ಷ ಮೇಲ್ಪಟ್ಟವರನ್ನು ನಾವು ಹಿರಿಯ ನಾಗರಿಕರು ಎಂದು ಕರೆಯುತ್ತೇವೆ. ಹಿರಿಯ ನಾಗರಿಕರು ಮಾನಸಿಕವಾಗಿ ಮೊದಲೇ ಸಿದ್ದರಾಗಿದ್ದರೆ ವೃದ್ಧಾಪ್ಯ ಜೀವನ ಅಷ್ಟೊಂದು ಕಷ್ಟಕರವಾಗಿರುವುದಿಲ್ಲ ಎಂದು ಸಲಹೆ ನೀಡಿದರು.ವಯಸ್ಸಾದಂತೆ ಅನಾರೋಗ್ಯದ ಸಮಸ್ಯೆ ಜತೆಗೆ ದೈಹಿಕ ಹಾಗೂ ಮಾನಸಿಕ ಅನಾರೋಗ್ಯ ಹೆಚ್ಚಾಗಿರುತ್ತದೆ. ಇದರಿಂದ ಹಿರಿಯ ನಾಗರಿಕರು ಕುಗ್ಗುವುದು ಸಹಜ. ಇದನ್ನು ಧೈರ್ಯವಾಗಿ ಎದುರಿಸಲು ಮುಂಚಿತವಾಗಿ ಯೋಜನೆ ರೂಪಿಸಿದರೆ ಜೀವನವನ್ನು ಸುಖಮಯವಾಗಿ ನಡೆಸಲು ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಕ್ಕಳಿಗಾಗಿ ನಾವು ಆಸ್ತಿ ಮಾಡುತ್ತೇವೆ. ಆದರೆ ವೃದ್ಧಾಪ್ಯದ ಅವಧಿಯಲ್ಲಿ ನ್ಯಾಯಾಲಯದ ಮೊರೆ ಹೋಗಿ ಜೀವನಾಂಶ ಪಡೆಯುವ ಕುಟುಂಬ ವ್ಯವಸ್ಥೆ ಈಗ ಬಂದಿದೆ. ಇದು ಹಿರಿಯ ನಾಗರಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಸುರಕ್ಷಿತ ವಾತಾವರಣದ ಜತೆಗೆ ಕುಟುಂಬಕ್ಕೆ ಹಿರಿಯ ನಾಗರಿಕರ ಅನುಭವವನ್ನು ಸದುಪಯೋಗ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಹಿರಿಯ ನಾಗರಿಕರನ್ನು ತಾತ್ಸಾರ ಮನೋಭಾವದಿಂದ ಕಾಣಬಾರದು ಎಂದು ಸಲಹೆ ನೀಡಿದರು.ಕಾನೂನು ನೆರವು ಅಭೀರಕ್ಷಕ ಎಂ. ಮೂರ್ತಿ ಹಾಗೂ ಫೋರ್ಥ ವೇವ್ ಪೌಂಡೇಶನ್ ರಿಯಾಜ್ ಅಹ್ಮದ್, ಹಿರಿಯ ನಾಗರಿಕರು ಮತ್ತು ವಿಕಲಚೇತನರ ರಕ್ಷಣೆಯ ಕಾನೂನುಗಳ ಕುರಿತು ಉಪನ್ಯಾಸ ನೀಡಿದರು. ಹಿರಿಯ ನಾಗರಿಕರ ಕಲ್ಯಾಣ ಸಂಘದ ಅಧ್ಯಕ್ಷ ರಂಗಪ್ಪ ರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಸಿ, ವಕೀಲ ಬಸವರಾಜು, ಜಿಲ್ಲಾ ಅಂಗವಿಲರ ಕಲ್ಯಾಣಾಧಿಕಾರಿ ಸೇಮಶೇಖರ್ ಇದ್ದರು.