ಹುಳು ಹಿಡಿದ ಅಕ್ಕಿ ಅಕ್ರಮ ಪ್ರಕರಣಗಳು!

| Published : Sep 11 2025, 01:00 AM IST

ಸಾರಾಂಶ

Cases of illegal rice with worms!

-ಗುರುಮಠಕಲ್‌ನ ರೈಸ್‌ಮಿಲ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ಪಡಿತರ ಅಕ್ಕಿ ಅಕ್ರಮ ದಂಧೆ । ಸ್ಥಳೀಯ ಅಧಿಕಾರಿಗಳ ಮೌನ ಅನುಮಾನ

-----

ಕನ್ನಡಪ್ರಭ ವಾರ್ತೆ ಯಾದಗಿರಿಜಿಲ್ಲೆಯ ಗುರುಮಠಕಲ್‌ನ ರೈಸ್‌ಮಿಲ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ಪಡಿತರ ಅಕ್ಕಿ ಅಕ್ರಮ ದಂಧೆ ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಬೆಳಕಿಗೆ ಬಂದಿದು, ಅಧಿಕಾರಿಗಳ ಕಾರ್ಯಾಚಾರಣೆ ನಡೆಯುತ್ತಿದೆ. ಅಕ್ರಮಗಳ ಕಾರಣದಿಂದ ಹಿಂದೊಮ್ಮೆ ರೈಸ್‌ಮಿಲ್‌ ಸೀಝ್‌ ಮಾಡಲಾಗಿತ್ತು. ಇಲಾಖೆಯ ಅಂದಿನ ಸಚಿವ ಯು.ಟಿ. ಖಾದರ್ ಹಾಗೂ ಆಯುಕ್ತರಾಗಿದ್ದ ಹರ್ಷ ಗುಪ್ತಾ ಅವರ ನೇತೃತ್ವದಲ್ಲಿ ಒಮ್ಮೆ ದಾಳಿಯೂ ನಡೆದಿತ್ತು. ಈಗ್ಯೂ ಕೂಡ ಅಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳಿದ್ದಾಗ್ಯೂ, ಸ್ಥಳೀಯ ಅಧಿಕಾರಿಗಳ ಮೌನ ಅನುಮಾನ ಮೂಡಿಸಿದೆ.

ಅಕ್ರಮಕ್ಕೆ ಕಾರಣವಾಗುವ ಇಂತಹ ರೈಸ್‌ಮಿಲ್‌ಗಳ ಬಗ್ಗೆ ಹದ್ದಿನ ಕಣ್ಣಿಡಬೇಕಾಗಿದ್ದ ಅಧಿಕಾರಿಗಳಿಗೆ, ಸಾವಿರಾರು ಕ್ವಿಂಟಾಲ್‌ ದಾಸ್ತಾನು ಸಂಗ್ರಹವಾಗಿದ್ದ ಬಗ್ಗೆ ಗೊತ್ತೇ ಇಲ್ಲದಿರುವುದು, ಇಲಾಖೆ ನಿಯಮಗಳಂತೆ ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲಿಸದಿರುವುದು ಶಂಕೆ ಮೂಡಿಸಿದೆ. ದಂಧೆಕೋರರ ಜೊತೆ ಅಧಿಕಾರಿಗಳೇ ಶಾಮೀಲಾಗಿರುವುದರಿಂದ ಜಿಲ್ಲೆಯಲ್ಲಿ ಈ ಹಿಂದೆ ನಡೆದ ಈ ಅಕ್ರಮಗಳ ಪ್ರಕರಣಗಳು ತನಿಖೆಯಾಗದೆ, ಹಳ್ಳ ಹಿಡಿದಿವೆ ಎಂಬ ಆರೋಪಗಳಿವೆ.

-

ಪ್ರಕರಣ-1: ಯಾದಗಿರಿ ಜಿಲ್ಲೆ ಶಹಾಪುರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಸರ್ಕಾರಿ ಗೋದಾಮಿನಿಂದ ಸುಮಾರು 6088.97 ಕ್ವಿಂಟಾಲ್, ಅಂದರೆ 50 ಕೆಜಿ ತೂಕದ 12,154 ಚೀಲಗಳು, 2 ಕೋಟಿ 66 ಲಕ್ಷ 33 ಸಾವಿರದ 900 ರುಪಾಯಿಗಳಷ್ಟು ಮೌಲ್ಯದ ಅನ್ನಭಾಗ್ಯ ಅಕ್ಕಿ ದಾಸ್ತಾನಿನ ಲೆಕ್ಕ ಸಿಗದೆ ನಾಪತ್ತೆಯಾಗಿರುವ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ನ.25, 2023 ರಂದು, ದೂರು ದಾಖಲಾಗಿತ್ತು.

ಈ ಪ್ರಕರಣದ ದೂರುದಾರ, ಯಾದಗಿರಿಯ ಉಪ ನಿರ್ದೇಶಕರಾಗಿದ್ದ ಭೀಮರಾಯ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು.

-

ಪ್ರಕರಣ -2: ಸುರಪುರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಗೋದಾಮಿನಿಂದ 2023, ಫೆ.25ರಂದು 2,363 ಕ್ವಿಂಟಾಲ್, 81ಲಕ್ಷ ರು. ಮೌಲ್ಯದ ಪಡಿತರ ಅಕ್ಕಿ ನಾಪತ್ತೆ ಪ್ರಕರಣ ಬಗ್ಗೆ ದೂರು ದಾಖಲಾಗಿತ್ತು. ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಇಲ್ಲೂ ಸಹ ಕೇವಲ ಆಳವಾದ ತನಿಖೆ ನಡೆಯದಿರುವುದು ಅನುಮಾನ ಮೂಡಿಸಿತ್ತು. (0025/2023 ಸುರಪುರ ಪೊಲೀಸ್ ಠಾಣೆ)

-

ಪ್ರಕರಣ-3: ಶಹಾಪುರದಲ್ಲಿ 6 ಸಾವಿರ ಕ್ವಿಂಟಾಲ್ ಅಕ್ಕಿ ದಾಸ್ತಾನು ನಾಪತ್ತೆಯಾಗಿರುವ ಪ್ರಕರಣಕ್ಕಿಂತಲೂ ಮುಂಚೆಯೇ, ಅಂದರೆ 29 ಮೇ 2023 ರಂದು ಇದೇ ಸರ್ಕಾರಿ ಗೋದಾಮಿನ ಎದುರು ನಿಲ್ಲಿಸಿದ್ದ ಲಾರಿ ಸಮೇತ ಅದರಲ್ಲಿದ್ದ 50 ಕೆಜಿ ತೂಕದ 450 ಚೀಲಗಳ ಪಡಿತರ ಅಕ್ಕಿ (ಅಂದಾಜು 7.50 ಲಕ್ಷ ರು.ಗಳ ಮೌಲ್ಯ) ಕಳುವಾಗಿತ್ತು. ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮರುದಿನ ಖಾಲಿ ಲಾರಿ ಸಿಕ್ಕರೆ, ಅಕ್ಕಿ ದಾಸ್ತಾನಿನ ಪತ್ತೆಯೇ ಆಗಲಿಲ್ಲ. (0114/2023)

-

ಪ್ರಕರಣ - 4 : ಸುರಪುರ ತಾಲೂಕು ಕೆಂಭಾವಿ ಸಮೀಪ 510 ಚೀಲಗಳ ಪಡಿತರ ಅಕ್ಕಿಯಿದ್ದ ಲಾರಿ ಪತ್ತೆಯಾಗಿತ್ತು. ದೂರು ದಾಖಲಾಗಿತ್ತು. (ಕ್ರೈಂ ನಂ. 0200/2023) ಮುಂದೇನಾಯ್ತು ಗೊತ್ತಿಲ್ಲ. ಶಹಾಪುರ ಸಮೀಪ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ಸಾಕ್ಷಿ ಸಮೇತ ಹಿಡಿದು ಕೊಟ್ಟರಾದರೂ, ಅದು ಅಕ್ಕಿಯಲ್ಲ, ಜೋಳ –ತೊಗರಿ ಹೀಗಾಗಿ ಬಿಟ್ಟಿದ್ದೇವೆ ಎಂದು ಮರುದಿನ ಅಧಿಕಾರಿಗಳ ಹೇಳಿಕೆ ಅನುಮಾನ ಮೂಡಿಸಿತ್ತು.

-

ಪ್ರಕರಣ -5: 2020 ಅಕ್ಟೋಬರ್ 30ರಂದು ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಗುರುಮಠಕಲ್ ಮೂಲಕ ಗುಜರಾತಿಗೆ ಸಾಗಿಸುತ್ತಿದ್ದ ವೇಳೆ, ಬೀದರ್ ಜಿಲ್ಲೆ ಬಸವಕಲ್ಯಾಣದ ಸಸ್ತಾಪುರ ಚಾಂಗ್ಲಾ ಬಳಿಯ ಹೈದರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿ -65ರಲ್ಲಿ 4ಲಾರಿಗಳ ತಡೆದಿದ್ದ ಪೊಲೀಸರು, 8 ಜನರನ್ನು ಬಂಧಿಸಿ, 36 ಲಕ್ಷ ರು. ಮೌಲ್ಯದ 120 ಟನ್ ಅಕ್ಕಿ ಜಪ್ತಿ ಮಾಡಿಕೊಂಡಿದ್ದರು.

-

ಪ್ರಕರಣ -6:2021 ಅಕ್ಟೋಬರ್ 13ರಂದು ಶಹಾಪುರ ತಾಲೂಕು ಗೋಗಿಯಿಂದ ಕಲಬುರಗಿ ಜಿಲ್ಲೆ ಜೇವರ್ಗಿಯ ಚಿಗರಳ್ಳಿ ಕ್ರಾಸ್ ಮಾರ್ಗವಾಗಿ ಮಹಾರಾಷ್ಟ್ರ ಕಡೆಗೆ ಸಾಗುತ್ತಿದ್ದ ಲಾರಿಯೊಂದನ್ನು ತಡೆದು, ಅದರಲ್ಲಿದ್ದ 260 ಕ್ವಿಂಟಾಲ್ ಅಕ್ಕಿ ಜಪ್ತಿ ಪಡಿಸಿಕೊಳ್ಳಲಾಗಿತ್ತು.

-

ಪ್ರಕರಣ-7: 2021 ನವೆಂಬರ್ 26 ರಂದು ಶಹಾಪುರ ತಾಲೂಕು ಭೀಮರಾಯನ ಗುಡಿ-ಶಖಾಪುರ ಕ್ರಾಸ್ ಮಧ್ಯೆ ಲಾರಿ ತಡೆದು 21.62 ಲಕ್ಷ ರು.ಗಳ ಮೌಲ್ಯದ 983 ಕ್ವಿಂಟಾಲ್ನಷ್ಟು 1966 ಚೀಲಗಳ ಪಡಿತರ ಅಕ್ಕಿ ಜಪ್ತಿ ಮಾಡಿಕೊಳ್ಳಲಾಗಿತ್ತು. ಉತ್ತರ ಪ್ರದೇಶ, ರಾಜಸ್ತಾನ ಹಾಗೂ ಹರಿಯಾಣಕ್ಕೆ ಕಡೆಗಳಲ್ಲಿ ಇವನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿತ್ತು.

-

ಪ್ರಕರಣ-8: 2022, ಫೆಬ್ರವರಿ 12 ರಂದು ಶಹಾಪುರ ತಾಲೂಕು ಗೋಗಿ ಬಳಿ 8.36 ಲಕ್ಷ ರು.ಗಳ ಮೌಲ್ಯದ 760 ಚೀಲಗಳಲ್ಲಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿ ದಾಸ್ತಾನನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಗೋಗಿಯಿಂದ ರಾಜಸ್ತಾನಕ್ಕೆ ಇದನ್ನು ಸಾಗಿಸಲಾಗುತ್ತಿತ್ತು ಎಂದು ದೂರಲಾಗಿತ್ತು.

-

ಪ್ರಕರಣ-9:2021 ಜುಲೈ 20ರಂದು ಶಹಾಪುರ ತಾಲೂಕು ಚಾಮನಾಳ್ ಕ್ರಾಸ್ ಹತ್ತಿರ 510 ಚೀಲಗಳಲ್ಲಿ ಸಾಗಿಸಲಾಗುತ್ತಿದ್ದ 50 ಕೆ.ಜಿ ತೂಕದ 3.82 ಲಕ್ಷ ರು. ಮೌಲ್ಯದ ಪಡಿತರ ಅಕ್ಕಿ ಜಪ್ತಿ ಮಾಡಲಾಗಿತ್ತು. ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

-

ಪ್ರಕರಣ-10: 2023 ಜೂನ್ 11ರಂದು ಶಹಾಪುರದ ದೋರನಹಳ್ಳಿ ಸಮೀಪ, 2.37 ಲಕ್ಷ ರು. ಮೌಲ್ಯದ 50 ಕೆಜಿ ತೂಕದ 216 ಚೀಲಗಳಲ್ಲಿ ಪಡಿತರ ಅಕ್ಕಿ ತುಂಬಿಕೊಂಡು ಹೊರಟಿದ್ದ ಲಾರಿ ಜಪ್ತಿ ಮಾಡಲಾಗಿತ್ತು.

-

10ವೈಡಿಆರ್‌10 : ಪಡಿತರ ಅಕ್ಕಿ ಅಕ್ರಮ ದಾಸ್ತಾನು.