ಅಂತರ್ಜಾತಿ ವಿವಾಹಗಳಿಂದ ಜಾತಿ ನಾಶ ಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

| Published : May 24 2024, 12:47 AM IST / Updated: May 24 2024, 12:48 AM IST

ಅಂತರ್ಜಾತಿ ವಿವಾಹಗಳಿಂದ ಜಾತಿ ನಾಶ ಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಅಂತರ್ಜಾತಿ ವಿವಾಹಗಳ ಜತೆಗೆ ಮಹಿಳೆಯರಿಗೆ ಹಾಗೂ ಎಲ್ಲಾ ವರ್ಗದ ದುರ್ಬಲರಿಗೆ ಆರ್ಥಿಕ ಶಕ್ತಿ ಸಿಕ್ಕಾಗ ಸಮಾಜದಲ್ಲಿ ಚಲನೆಯುಂಟಾಗುತ್ತದೆ. ಸಮ ಸಮಾಜದ ಆಶಯ ಈಡೇರಲು, ಜಾತಿ ನಾಶವಾಗಲು ಸಾಧ್ಯ. ಅಂಬೇಡ್ಕರ್ ಮತ್ತು ಕುವೆಂಪು ಅವರ ಆಶಯದಂತೆ ಸಮ ಸಮಾಜ ನಿರ್ಮಾಣ ಆಗಬೇಕಾದರೆ ಅಂತರ್ಜಾತಿ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಅಂತರ್ಜಾತಿ ವಿವಾಹಗಳಿಂದ ಜಾತಿ ನಾಶ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಜನ ಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೇದಿಕೆಯ ವೆಬ್ ಸೈಟ್ ಉದ್ಘಾಟಿಸಿ ಅವರು ಮಾತನಾಡಿದರು.

ಅಂತರ್ಜಾತಿ ವಿವಾಹಗಳ ಜತೆಗೆ ಮಹಿಳೆಯರಿಗೆ ಹಾಗೂ ಎಲ್ಲಾ ವರ್ಗದ ದುರ್ಬಲರಿಗೆ ಆರ್ಥಿಕ ಶಕ್ತಿ ಸಿಕ್ಕಾಗ ಸಮಾಜದಲ್ಲಿ ಚಲನೆಯುಂಟಾಗುತ್ತದೆ. ಸಮ ಸಮಾಜದ ಆಶಯ ಈಡೇರಲು, ಜಾತಿ ನಾಶವಾಗಲು ಸಾಧ್ಯ. ಅಂಬೇಡ್ಕರ್ ಮತ್ತು ಕುವೆಂಪು ಅವರ ಆಶಯದಂತೆ ಸಮ ಸಮಾಜ ನಿರ್ಮಾಣ ಆಗಬೇಕಾದರೆ ಅಂತರ್ಜಾತಿ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ನಮ್ಮ ಸರ್ಕಾರ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ ಎಂದರು.

ನನಗೂ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು:

ನನಗೂ ಅಂತರ್ಜಾತಿ ವಿವಾಹ ಆಗುವ ಆಸೆ ಇತ್ತು. ಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ, ಹುಡುಗಿಯೂ ಒಪ್ಪಲಿಲ್ಲ, ಅವರ ಮನೆಯವರೂ ಒಪ್ಪಲಿಲ್ಲ ಎಂದು ತಮ್ಮ ಕಾಲೇಜು ದಿನಗಳನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಕೆ. ವೆಂಕಟೇಶ್‌, ಡಾ.ಎಚ್‌.ಸಿ.ಮಹದೇವಪ್ಪ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ವಿಧಾನ ಪರಿಷತ್‌ಸದಸ್ಯ ಡಾ.ಡಿ. ತಿಮ್ಮಯ್ಯ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್‌, ವಕ್ತಾರ ಎಚ್‌.ಎ. ವೆಂಕಟೇಶ್‌, ಚಿಂತಕ ಪ್ರೊ. ಕಾಳೇಗೌಡ ನಾಗವಾರ, ಜಿ.ಪಿ. ಬಸವರಾಜು, ರಂಗಕರ್ಮಿ ಬಸವಲಿಂಗಯ್ಯ. ಕಮಲ್‌ ಗೋಪಿನಾಥ್, ಉಗ್ರನರಸಿಂಹೇಗೌಡ, ಆರ್. ಸ್ವಾಮಿ ಆನಂದ್‌, ಡಾ.ಸುರೇಶ್‌ ಅಮ್ಮಸಂದ್ರ ಮೊದಲಾದವರು ಇದ್ದರು.ಡಾ.ಪುಷ್ಪಾ ಅಮರನಾಥ್ ಗೆ ಪರಿಷತ್ ಸ್ಥಾನ ನೀಡಲು ಮನವಿಕನ್ನಡಪ್ರಭ ವಾರ್ತೆ ಮೈಸೂರು

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಅವರಿಗೆ ಮಹಿಳಾ ಕೋಟಾ, ದಲಿತ ಕೋಟಾದಲ್ಲಿ ವಿಧಾನ ಪರಿಷತ್ ಸ್ಥಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರಿಗೆ ಡಾ. ಪುಷ್ಪಾ ಅವರ ಬೆಂಬಲಿಗರು ಗುರುವಾರ ಮನವಿ ಸಲ್ಲಿಸಿದರು.

ಮೈಸೂರಿನ ವಿಜಯನಗರದಲ್ಲಿರುವ ಸಚಿವರ ಮನೆಗೆ ಹುಣಸೂರು, ಬನ್ನೂರು ಸೇರಿದಂತೆ ವಿವಿಧೆಡೆಯಿಂದ ಧಾವಿಸಿದ ಬೆಂಬಲಿಗರ ದಂಡು, ಡಾ. ಪುಷ್ಪಾ ಅವರಿಗೆ ಕಳೆದ ಬಾರಿ ಎಂಎಲ್ಎ, ಎಂಪಿ ಟಿಕೆಟ್ ಕೈ ತಪ್ಪಿದೆ. ಈ ಬಾರಿ ಎಂಎಲ್ಸಿ ಮಾಡಿದರೇ ಹಳೆ ಮೈಸೂರು ಭಾಗದಲ್ಲಿ ಮಹಿಳೆಯರಿಗೆ ಶಕ್ತಿ ಬರಲಿದೆ ಎಂದು ಕೋರಿದರು.