ಸಾರಾಂಶ
ಕ್ಯಾಶ್ ಲೆಸ್ ಸಮಾಜ ನಮಗೆ ಬೇಕಿಲ್ಲ, ಕ್ಯಾಸ್ಟ್ ಲೆಸ್ ಸಮಾಜ ಕಟ್ಟುವ ಸಂಕಲ್ಪ ಮಾಡಿ। ಆಲ್ದೂರಿನಲ್ಲಿ ಸ್ವಾಭಿಮಾನಿ ಸಮ್ಮೇಳನ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಈ ದೇಶಕ್ಕೆ ಜಾತಿ ಎನ್ನುವುದೇ ದೊಡ್ಡ ಸಮಸ್ಯೆಯಾಗಿದೆ. ಕ್ಯಾಶ್ ಲೆಸ್ ಸಮಾಜ ನಮಗೆ ಬೇಕಿಲ್ಲ. ಕ್ಯಾಸ್ಟ್ ಲೆಸ್ ಸಮಾಜ ಕಟ್ಟುವ ಸಂಕಲ್ಪವನ್ನು ಎಲ್ಲರೂ ಮಾಡಬೇಕಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮರಿ ಮೊಮ್ಮಗ ರಾಜರತ್ನ ಅಂಬೇಡ್ಕರ್ ಹೇಳಿದರು.
ತಾಲೂಕಿನ ಆಲ್ದೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಏರ್ಪಡಿಸಿದ್ದ ಸ್ವಾಭಿಮಾನಿ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು. ಅಂಬೇಡ್ಕರ್ ಪುತ್ಥಳಿ ನಿರ್ಮಿಸಿದ ಮೇಲೆ ನಿಮ್ಮ ಜವಾಬ್ದಾರಿ ಬಹಳ ಜಾಸ್ತಿ ಇದೆ. ಕನಿಷ್ಠ 20 ಕಿ.ಮೀ. ರೇಡಿಯೇಶನ್ ದೂರದವರೆಗೆ ಒಬ್ಬ ದಲಿತ ಐಎಎಸ್, ಐಪಿಎಸ್, ಡಾಕ್ಟರ್, ಎಂಜಿನಿಯರ್ ಹುಟ್ಟಿ ಬರುವಂತಹ ಸ್ಥಿತಿ ನಿರ್ಮಾಣವಾಗಬೇಕು ಎಂದರು.ಸಂವಿಧಾನ ಜಾರಿಯಾದ ನಂತರ ಜಾತಿ ಪದ್ಧತಿ ಇರಕೂಡದು ಎಂದು ಅಂಬೇಡ್ಕರ್ ಬಯಸಿದ್ದರು. ಇಂದು ದೇಶದಲ್ಲಿ ಪ್ರಧಾನಿ ಕ್ಯಾಶ್ ಲೆಸ್ ಎಕಾನಮಿ ಕೊಟ್ಟಿದ್ದಾರೆ. ಆದರೆ, ಭ್ರಷ್ಟಾಚಾರ ತಡೆಯಲಾಗಿಲ್ಲ. ಒಂದು ದೇಶ ಒಂದು ಚುನಾವಣೆ ಎನ್ನುತ್ತಿದ್ದಾರೆ. ಬೇಕಿರುವುದು ಅದಲ್ಲ, ಒಂದು ದೇಶ, ಒಂದೇ ತರಹದ ಶಿಕ್ಷಣ ಪದ್ಧತಿ ಬೇಕು ಎಂದು ಹೇಳಿದರು.ಹೋದಲ್ಲೆಲ್ಲಾ ಅಂಬೇಡ್ಕರ್ ನಿಮಗೆ ಉಳಿಸಿರುವ ಆಸ್ತಿ ಎಷ್ಟು ಎಂದು ಜನ ನನ್ನನ್ನು ಕೇಳುತ್ತಾರೆ. ಈ ದೇಶದಲ್ಲಿ ಒಮ್ಮೆ ಮಂತ್ರಿ ಮಹೋದಯರಾದರೆ ತಮ್ಮ ಏಳು ಸಂತತಿಗೆ ಆಗುವಷ್ಟು ಸಂಪತ್ತು ಕೂಡಿಡುತ್ತಾರೆ. ಆದರೆ, ಸಂಸತ್ತಿನಲ್ಲಿ ನಾಲ್ಕು ಖಾತೆ ನಿಭಾಯಿಸಿದ್ದ ಅಂಬೇಡ್ಕರ್ ಮರಣ ಹೊಂದಿದ್ದಾಗ ಅವರ ಬಳಿ ಕೇವಲ ₹15,237 ಮಾತ್ರ ಇತ್ತು ಎಂದರು.ಮಾಜಿ ಸಭಾಪತಿ ರಮೇಶ್ ಕುಮಾರ್ ಮಾತನಾಡಿ, ಅಂಬೇಡ್ಕರ್ ಯಾವುದೋ ಒಂದು ಸಮುದಾಯಕ್ಕೆ ಸೇರಿದವರಲ್ಲ ಇಡೀ ಮನುಕುಲಕ್ಕೆ ಸೇರಿದವರು. ಅವರ ಬಗ್ಗೆ ಅಧ್ಯಯನ ಮಾಡದೆ, ಅವರ ವಿಚಾರಗಳನ್ನು ಅರ್ಥಮಾಡಿಕೊಳ್ಳದೆ ದಲಿತೇತರರು ಪೂರ್ವಾಗ್ರಹ ಪೀಡಿತರಾಗಿ ಅಂಬೇಡ್ಕರ್ ಅವರನ್ನು ಸಣ್ಣವರನ್ನಾಗಿ ಮಾಡುವುದು ಬೇಡ. ಅವರು ಎಲ್ಲರ ಪರವಾಗಿ ಮಾತಾಡಿದ್ದಾರೆ. ನಮಗೆ ತಿಳಿದುಕೊಳ್ಳಲು ಸಮಯ ಇಲ್ಲ ಎಂದರು.
ನಿವೃತ್ತ ಡಿಡಿಪಿಯು ಎಚ್.ಎಂ.ರುದ್ರಸ್ವಾಮಿ ಮಾತನಾಡಿ, ಅಂಬೇಡ್ಕರ್ ಪ್ರತಿಮೆ ನಮಗೆ ಹೋರಾಟದ ಸ್ಪೂರ್ತಿಯಾಗಿರ ಬೇಕೆ ವಿನಾ ಆರಾಧನೆಗಲ್ಲ. ಅಂಬೇಡ್ಕರ್ ಎಂದೂ ನನ್ನನ್ನು ಆರಾಧಿಸಿ ಎಂದು ಹೇಳಿರಲಿಲ್ಲ. ಇತ್ತೀಚೆಗೆ ದಲಿತರು ಒಗ್ಗಾಟ್ಟಾಗಿ ಜಾಗೃತಿ ಮೂಡುತ್ತಿರುವುದು ಸಾಮಾಜಿಕ ಚಲನೆಯ ಸಂಕೇತ ಎಂದು ಬಣ್ಣಿಸಿದರು.ಹೆಡದಾಳ್ ಕುಮಾರ್ ನಿರೂಪಿಸಿದರು. ಅಂಬೇಡ್ಕರ್ ವೃತ್ತ ನಿರ್ಮಾಣ ಸಂದರ್ಭ ಆದ ಸಂಘರ್ಷದಲ್ಲಿ ಸೆರೆಮನೆ ವಾಸ ಅನುಭವಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯರು ಸಂಘಟನೆ ಮುಖಂಡರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನಾ ರಾಜರತ್ನ ಅಂಬೇಡ್ಕರ್ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
ಸ್ವಾಭಿಮಾನಿ ಸಮ್ಮೇಳನದ ಹಿನ್ನೆಲೆಯಲ್ಲಿ ಆಲ್ದೂರಿನ ಬಿರಂಜಿ ಹಳ್ಳದಿಂದ ವೇದಿಕೆವರೆಗೂ ಡಿಜೆ ಧ್ವನಿವರ್ಧಕದ ಸಂಗೀತಕ್ಕೆ ಯುವ ಸಮೂಹ ಕುಣಿದು ಕುಪ್ಪಳಿಸಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.ಯಲಗುಡಿಗೆ ಹೊನ್ನಪ್ಪ ಮಾತನಾಡಿದರು. ಪುತ್ಥಳಿ ನಿರ್ಮಾಣ ಸಮಿತಿ ಮುಖಂಡ ನವರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಭೀಮ್ ಆರ್ಮಿ ಗಿರೀಶ್, ದಲಿತ ಸಂಘಟನೆ ಗಳ ಮುಖಂಡರು, ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.
-- ಕೋಟ್--ನಾನೂ ಹೋದಲೆಲ್ಲ ಹೂಮಳೆ ಸುರಿಸುತ್ತಾರೆ ಏಕೆ ಎಂದು ತನ್ನ ತಂದೆಯನ್ನು ಕೇಳಿದ್ದೆ. ನೀನೇನೋ ಮಾಡಿದ್ದೀಯ ಎಂದು ಹೂ ಹಾಕುವುದಿಲ್ಲ. ನೀನು ಅಂಬೇಡ್ಕರ್ ರಕ್ತ ಹಂಚಿಕೊಂಡು ಹುಟ್ಟಿದೀಯ ಎನ್ನುವ ಕಾರಣಕ್ಕೆ ಎಂದು ಹೇಳಿದ್ದರು.
- ರಾಜರತ್ನ ಅಂಬೇಡ್ಕರ್ 6 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಆಶ್ರಯದಲ್ಲಿ ಸ್ವಾಭಿಮಾನಿ ಸಮ್ಮೇಳನ ನಡೆಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಮರಿ ಮೊಮ್ಮಗ ರಾಜರತ್ನ ಅಂಬೇಡ್ಕರ್, ರಮೇಶ್‌ಕುಮಾರ್, ಸಿ.ಟಿ. ರವಿ, ಮೋಟಮ್ಮ, ಎಂ.ಪಿ. ಕುಮಾರಸ್ವಾಮಿ ಇದ್ದರು.