ಸಾರಾಂಶ
ಶಿವಶರಣ ಶಿವನಾಗಮಯ್ಯ ಜಯಂತಿ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಸಂವಿಧಾನದ ಆಶಯಗಳಿಗೆ ತಕ್ಕಂತೆ ಬದುಕಲು ಅವಕಾಶವಿದ್ದಾಗ್ಯೂ ಇನ್ನೂ ನಮ್ಮಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿದೆ ಎಂದು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ಬೃಹನ್ಮಠದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾವಿಶ್ರಾಂತಿ ತಾಣದಲ್ಲಿ ಸೋಮವಾರ ನಡೆದ ಶಿವಶರಣ ಶಿವನಾಗಮಯ್ಯನವರ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂವಿಧಾನದ ಈ ಕಾಲದಲ್ಲಿ ಈ ಪರಿಸ್ಥಿತಿ ಇದ್ದು 900 ವರ್ಷಗಳ ಹಿಂದೆ ಬಸವಣ್ಣನವರು ಸಮಾನತೆಯ ಸಮಾಜ ಕಟ್ಟಬೇಕೆಂಬ ಹಂಬಲಕ್ಕೆ ಅಂದು ಎಂತಹ ತೊಡಕುಗಳು ಎದುರಾಗಿದ್ದವೆಂಬುದ ಊಹಿಸಿಕೊಳ್ಳಲು ಕಷ್ಟವಾಗುತ್ತದೆ ಎಂದರು.ದಲಿತ ವರ್ಗದ ಶಿವನಾಗಮಯ್ಯನವರು ತಮ್ಮ ಕುಲಕಸುಬಿನೊಂದಿಗೆ ಜೀವನ ನಡೆಸುತ್ತಿದ್ದರು. ಅಂತಹವರ ಮನೆಗೆ ಹೋಗಿ ಅವರಿಗೆ ಇಷ್ಟಲಿಂಗ ಧಾರಣೆ ಮಾಡಿದ ಬಸವಣ್ಣನವರು ನಾಗಮಯ್ಯ ಆಗಿದ್ದವರನ್ನು ಶಿವನಾಗಮಯ್ಯ ಎಂದು ಕರೆಯುವ ಮೂಲಕ ಶರಣಸಂಕುಲಕ್ಕೆ ಬರಮಾಡಿಕೊಳ್ಳುತ್ತಾರೆ. ಇದರಿಂದ ಕುಪಿತಗೊಂಡ ಮೇಲ್ವರ್ಗದ ಜನರು ಬಸವಣ್ಣ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆಂದು ರಾಜ ಬಿಜ್ಜಳನಿಗೆ ದೂರುತ್ತಾರೆ. ರಾಜನಾದರೂ ಎಲ್ಲವನ್ನು ಕೂಲಂಕಷವಾಗಿ ಚರ್ಚಿಸಿ ಬಸವಣ್ಣನವರ ನಡೆ ಸರಿ ಇದೆ ಎಂದರೂ ಮತೀಯ ವಾದಿಗಳು ಪದೇ ಪದೇ ತೊಂದರೆ ಕೊಟ್ಟರು. ಇದ್ಯಾವುದನ್ನು ಲೆಕ್ಕಿಸದ ಬಸವಣ್ಣನವರು ಸಮಾನತೆಗಾಗಿ ತಮ್ಮ ಬದುಕನ್ನೇ ಪಣಕ್ಕಿಟ್ಟು ಶಿವನಾಗಮಯ್ಯನಂತಹ ಅನೇಕ ಶರಣರನ್ನು ಅನುಭವ ಮಂಟಪಕ್ಕೆ ಬರಮಾಡಿಕೊಂಡು ಮಾದರಿ ಸಂಸತ್ ಆಗಿಸುತ್ತಾರೆ ಎಂದರು.
ಶಿವನಾಗಮಯ್ಯನವರು ಶರಣಜೀವಿಯಾಗಿ ಬದುಕಿ ಅನೇಕ ವಚನ ರಚಿಸಿದರೂ ಲಭ್ಯವಿರುವ ವಚನಗಳು 3 ಮಾತ್ರ. ತನ್ನದೇ ಆದ ವ್ಯಕ್ತಿತ್ವ ರೂಪಿಸಿಕೊಂಡು ಬಸವಾದಿ ಶರಣರ ಜತೆಗೆ ಗುರುತಿಸಿಕೊಂಡವರಲ್ಲಿ ಒಬ್ಬರಾಗಿದ್ದಾರೆ ಎಂದು ಸ್ಮರಿಸಿದರು.ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಶಿವನಾಗಿಮಯ್ಯ ಶರಣರು ಮುಂಜಾನೆ ಸ್ವಚ್ಛತೆ ಕಾರ್ಯ ಮುಗಿಸಿ ದಿನದಲ್ಲಿ ಕಂಬಳಿ ನೇಯುತ್ತಿದ್ದರು. ನಾಗಿಮಯ್ಯ ದೀಕ್ಷೆ ಪಡೆದು ಶಿವಯೋಗದಲ್ಲಿ ಶರಣನಾಗುತ್ತಾರೆ. ಇಂದಿಗೂ ಶುಭ ಕಾರ್ಯಗಳಲ್ಲಿ ಕಂಬಳಿಗಳನ್ನು ಬಳಸುವುದನ್ನು ಕಾಣಬಹುದು. ವಚನ ಸಾಹಿತ್ಯವನ್ನು ರಚಿಸಿದ್ದ ಶಿವಶರಣ ಶಿವನಾಗಿಮಯ್ಯ ಅವರ ಜಯಂತೋತ್ಸವದಲ್ಲಿ ಪಾಲ್ಗೊಳ್ಳುವುದೇ ವಿಶೇಷ ಎಂದು ನುಡಿದರು.
ಮೋಕ್ಷಪತಿ ಸ್ವಾಮೀಜಿ, ಬಸವಚೇತನ ಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ ಇದ್ದರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ಮಾಡಿದರು. ಎಸ್ ಜೆಎಂ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್ ನಾಗರಾಜ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಪವಿತ್ರ ಹೆಗಡೆ, ಡಾ.ಬಸವರಾಜ್ ಹರ್ತಿ ನಿರೂಪಿಸಿದರು.