ಜಾತೀಯತೆ ನಿಮೂರ್ಲನೆ ಮಾಡಿ ಎಲ್ಲರಿಗೂ ಸಮಾನತೆ ತಂದುಕೊಡುವ ನಿಟ್ಟಿನಲ್ಲಿ ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ನಿಜಕ್ಕೂ ಬಹಳ ಗೌರವಯುತವಾಗಿದೆ. 11ನೇ ಶತಮಾನದಲ್ಲಿ ರಾಮಾನುಜರು, ಭಕ್ತಿ ಮಾರ್ಗದ ಮೂಲಕ ಆಧ್ಯಾತ್ಮಿಕ ಸಮಾನತೆ ಪ್ರತಿಪಾದಿಸಿದರೆ, 20ನೇ ಶತಮಾನದಲ್ಲಿ ಡಾ.ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಾತ್ಮಕ ಮತ್ತು ಸಾಮಾಜಿಕ ಸಮಾನತೆ ತಂದುಕೊಟ್ಟರು ಎಂದು ಬಣ್ಣಿಸಿದರು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಸಮಾಜದಲ್ಲಿ ಜಾತೀಯತೆ, ಅಸ್ಪೃಶ್ಯತೆ ಸಂಪೂರ್ಣ ನಿರ್ಮೂಲನೆಯಾಗಬೇಕು ಎಂಬುದು ಶ್ರೀ ರಾಮಾನುಜಾಚಾರ್ಯರು, ಡಾ.ಬಿ.ಆರ್. ಅಂಬೇಡ್ಕರ್ ಆಶಯವಾಗಿತ್ತು ಎಂದು ಪರಮ ಪೂಜ್ಯ ಪ್ರೊ.ನಾಡೋಜ ಡಾ.ಭಾಷ್ಯಂ ಸ್ವಾಮೀಜಿ ಅಭಿಪ್ರಾಯಪಟ್ಟರು.ಇಲ್ಲಿನ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್ ಸಭಾಂಗಣದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು, (ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ), ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್ ಆಶ್ರಯದಲ್ಲಿ ನಡೆದ ಶ್ರೀ ರಾಮಾನುಜಾಚಾರ್ಯರು ಮತ್ತು ಡಾ. ಬಿ.ಆರ್. ಅಂಬೇಡ್ಕರ್‌ರವರ ಸಾಮಾಜಿಕ ಚಿಂತನೆಗಳು ವಿಷಯದ ಮೇಲಿನ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಮತ್ತು ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭಾರತೀಯ ಸಮಾಜವು ಸಹಸ್ರಾರು ವರ್ಷಗಳ ಇತಿಹಾಸ ಹೊಂದಿದ್ದರೂ ಇಲ್ಲಿನ ಜಾತಿ ಪದ್ಧತಿ ಮತ್ತು ಅಸಮಾನತೆಯ ಇತಿಹಾಸವೂ ಅಷ್ಟೇ ಹಳೆಯದಾಗಿದೆ. ಈ ಸಾಮಾಜಿಕ ಅನಿಷ್ಠ ಮತ್ತು ಶೋಷಣೆ ವಿರುದ್ಧ ವಿವಿಧ ಕಾಲಘಟ್ಟಗಳಲ್ಲಿ ಭಿನ್ನ ಸ್ವರೂಪದ ಕ್ರಾಂತಿಗಳು ನಡೆದಿವೆ. ಅಂತಹ ಕ್ರಾಂತಿಗಳಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ನಡೆದ ಭಕ್ತಿ ಚಳವಳಿ ಒಂದು ಮೈಲಿಗಲ್ಲಾದರೆ, ಆಧುನಿಕ ಭಾರತದಲ್ಲಿ ಕಾನೂನು ಮತ್ತು ರಾಜಕೀಯ ನೆಲೆಯಲ್ಲಿ ನಡೆದ ಸಾಂವಿಧಾನಿಕ ಚಳವಳಿ ಮತ್ತೊಂದು ಮಹತ್ತರ ಘಟ್ಟವಾಗಿದೆ ಎಂದರು.ಜಾತೀಯತೆ ನಿಮೂರ್ಲನೆ ಮಾಡಿ ಎಲ್ಲರಿಗೂ ಸಮಾನತೆ ತಂದುಕೊಡುವ ನಿಟ್ಟಿನಲ್ಲಿ ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ನಿಜಕ್ಕೂ ಬಹಳ ಗೌರವಯುತವಾಗಿದೆ. 11ನೇ ಶತಮಾನದಲ್ಲಿ ರಾಮಾನುಜರು, ಭಕ್ತಿ ಮಾರ್ಗದ ಮೂಲಕ ಆಧ್ಯಾತ್ಮಿಕ ಸಮಾನತೆ ಪ್ರತಿಪಾದಿಸಿದರೆ, 20ನೇ ಶತಮಾನದಲ್ಲಿ ಡಾ.ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಾತ್ಮಕ ಮತ್ತು ಸಾಮಾಜಿಕ ಸಮಾನತೆ ತಂದುಕೊಟ್ಟರು ಎಂದು ಬಣ್ಣಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಕೆ.ಶ್ರೀಧರ್ ಮಾತನಾಡಿ, ಭಗವಂತನ ಅನುಗ್ರಹಕ್ಕೆ ಭಕ್ತಿ ಮತ್ತು ಶರಣಾಗತಿ ಮುಖ್ಯವೇ ಹೊರತು ಜಾತಿಯಲ್ಲ. ಭಿನ್ನ ಕಾಲಘಟ್ಟಗಳ, ಭಿನ್ನ ಮಾರ್ಗಗಳ ಸಮಾನತೆಯ ಸಾರಥಿಗಳಾಗಿ ಶ್ರೀ ರಾಮಾನುಜಾಚಾರ್ಯರು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ನಿಲ್ಲುತ್ತಾರೆ. ಇಂದು ನಾವು 21ನೇ ಶತಮಾನದಲ್ಲಿದ್ದರೂ ಜಾತಿ ದೌರ್ಜನ್ಯಗಳು, ಲಿಂಗ ತಾರತಮ್ಯಗಳು ಮತ್ತು ಆರ್ಥಿಕ ಅಸಮಾನತೆಗಳು ಸಂಪೂರ್ಣವಾಗಿ ಮರೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಶ್ರೀ ಲಕ್ಷ್ಮೀನರಸಿಂಹ ವಿದ್ಯಾ ಸಂಸ್ಥೆ ನಿರ್ದೇಶಕ ಡಾ.ನಂಜುಂಡಯ್ಯ ಮಾತನಾಡಿ, ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್ ಸಂಸ್ಕೃತಿಯ ಜ್ಞಾನ ಭಂಡಾರವಾಗಿದ್ದು, ಇಲ್ಲಿನ ಮಹತ್ವದ ತಾಳೆಗರಿ ಹಾಗೂ ಪ್ರಕಟಗೊಂಡಿರುವ ಪುಸ್ತಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಅಹಲ್ಯ ಮಾತನಾಡಿ, ಭಾರತ ಜ್ಞಾನ ಸಂಪತ್ಬರಿತ ದೇಶ. ಇದನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ರಾಷ್ಟ್ರೀಯ ಕಾರ್ಯಾಗಾರದ ಮಹತ್ವವನ್ನು ಯುವಪೀಳಿಗೆ ಸೂಕ್ಷ್ಮವಾಗಿ ಅರಿಯಬೇಕು ಎಂದರು.ದೇಶದ ಪರಂಪರೆಯನ್ನೂ ಉಳಿಸಬೇಕಿದೆ. ಇಂದು ತಂತ್ರಜ್ಞಾನ, ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಮನುಷ್ಯನ ನಿರ್ಧಾರಗಳೇ ಅಂತಿಮವಾಗಿದೆ. ಇಂದಿನ ಧಾರ್ಮಿಕ ಅಸಹಿಷ್ಣುತೆಯ ಕಾಲದಲ್ಲಿ, ಧರ್ಮ ಎಂದರೆ ದ್ವೇಷವಲ್ಲ. ಅದು ಎಲ್ಲರನ್ನೂ ಒಳಗೊಳ್ಳುವ ಪ್ರೀತಿ ಎಂದು ಸಾರಿದ ರಾಮಾನುಜರ ಭಕ್ತಿ ಮಾರ್ಗವು ಸಮಾಜಕ್ಕೆ ಶಾಂತಿಯನ್ನು ನೀಡಬಲ್ಲದು ಎಂದು ತಿಳಿಸಿದರು.
ಸಮಾರಂಭದಲ್ಲಿ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್‌ನ ಕುಲಸಚಿವ ಡಾ.ಕುಮಾರ ಎಸ್. ಪ್ರಾಸ್ತವಿಕವಾಗಿ ಮಾತನಾಡಿದರು. ಮಂಡ್ಯದ ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲ ಡಾ.ಶ್ರೀಕಂಠಪ್ಪ ಎ.ಎಸ್., ಎಸ್ ಎಸಿ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೇಯಸ್ ಕೃಷ್ಣನ್, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಶೃತಿ ಐ., ಡಾ.ವೆಂಕಟೇಶ್ ವಿ. ಡಾ.ಅರುಣ್ ಕುಮಾರ್ ಎಚ್.ಎಸ್, ಡಾ.ಗೋವಿಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.