ಹೃದಯ ಸಂಬಂಧಿ ಚಿಕಿತ್ಸೆಗೆ ಕ್ಯಾಥ್‌ಲ್ಯಾಬ್ ಅವಶ್ಯ

| Published : Oct 27 2024, 02:25 AM IST

ಸಾರಾಂಶ

ಹೃದಯ ಸಂಬಂಧಿ ಕಾಯಿಲೆಗೆ ತುರ್ತು ಚಿಕಿತ್ಸೆ ನೀಡಲು ವಿಜಯನಗರ ಜಿಲ್ಲೆಯಲ್ಲಿ ಕ್ಯಾಥ್‌ ಲ್ಯಾಬ್ ಅತಗತ್ಯವಾಗಿ ಬೇಕಾಗಿತ್ತು.

ಹೊಸಪೇಟೆ: ಹೃದಯ ಸಂಬಂಧಿ ಕಾಯಿಲೆಗೆ ತುರ್ತು ಚಿಕಿತ್ಸೆ ನೀಡಲು ವಿಜಯನಗರ ಜಿಲ್ಲೆಯಲ್ಲಿ ಕ್ಯಾಥ್‌ ಲ್ಯಾಬ್ ಅತಗತ್ಯವಾಗಿ ಬೇಕಾಗಿತ್ತು. ಅದು ಈಗ ನಗರದಲ್ಲಿ ಲಭ್ಯವಾಗಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.

ಇಲ್ಲಿನ ಸ್ಟೇಷನ್ ರಸ್ತೆಯ ಶ್ರೀಪತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸ್ಥಾಪನೆಗೊಂಡಿರುವ ಈ ಕ್ಯಾಥ್‌ ಲ್ಯಾಬ್ ಸಹಿತ ಜಯಂ ಹೃದಯಾಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಮಕ್ಕಳು ಸೇರಿದಂತೆ ಯುವಕರು ಬಲಿಯಾಗುತ್ತಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಜನರು ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ ಎಂದರು.

ಸದ್ಯ ಇಲ್ಲಿ ಯಶಸ್ವಿನಿ ಕಾರ್ಡ್ ಹೊಂದಿರುವವರಿಗೆ ಚಿಕಿತ್ಸೆಯ ಸೌಲಭ್ಯ ಇದ್ದು, ಬಿಪಿಎಲ್ ಕಾರ್ಡ್ ಜತೆಗೆ ಆಯುಷ್ಮಾನ್ ಭಾರತ್ ಯೋಜನೆಯನ್ನೂ ಜೋಡಿಸುವ ಪ್ರಯತ್ನ ನಡೆದಿದೆ. ನಗರಕ್ಕೆ ತೀರಾ ಅಗತ್ಯವಾದ ಈ ಸೌಲಭ್ಯ ಇದೀಗ ದೊರೆತಿರುವುದಕ್ಕೆ ಸಂತೋಷವಾಗಿದೆ. ಇಲ್ಲಿ ಯಾವುದೇ ಸಮಯದಲ್ಲೂ ಹೃದಯರೋಗ ತಜ್ಞರು ಲಭ್ಯರಿರುವುದೂ ಮತ್ತೊಂದು ಗಮನಾರ್ಹ ಅಂಶ ಎಂದರು.

ನೂತನ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಆಸ್ಪತ್ರೆಯೂ ತಲೆ ಎತ್ತಲಿದ್ದು, ಅಲ್ಲಿಯೂ ಇದೇ ಸೌಲಭ್ಯ ಬರಲಿದೆ. ಆಗ ಈ ಭಾಗದ ಜನರಿಗೆ ಇನ್ನಷ್ಟು ಅನುಕೂಲವಾಗಲಿದೆ. ಆ ಆಸ್ಪತ್ರೆಗೆ ಸಿಎಸ್‌ಆರ್‌ ನಿಧಿ ಬಳಕೆಗೆ ಸರ್ಕಾರ ಅನುಮತಿ ನೀಡಲು ಒಪ್ಪಿಕೊಂಡಿದೆ ಎಂದರು.

ಆಸ್ಪತ್ರೆಯ ಹೃದಯರೋಗ ತಜ್ಞ ಡಾ. ಟಿ. ಸಂದೀಪ್, ಕ್ಯಾನ್ಸರ್ ತಜ್ಞ ಡಾ. ಶಂಕರ್ ಎಂ.ಆರ್. ನೂತನ ಸೌಲಭ್ಯದ ಕುರಿತು ಮಾತನಾಡಿದರು. ಆಸ್ಪತ್ರೆಯ ಮುಖ್ಯಸ್ಥ ಡಾ. ಎಂ.ಜಿ. ರಾಘವೇಂದ್ರ ರಾವ್, ಡಾ. ಎಂ.ಆರ್. ರಾಜೇಶ್ವರಿ, ಡಾ. ಚೈತ್ರಾ ಶಂಕರ್, ವಕೀಲ ರಮೇಶ್ ಹವಾಲ್ದಾರ್ ಮತ್ತಿತರರಿದ್ದರು.