ಘಾಟಿ ಸುಬ್ರಹ್ಮಣ್ಯದಲ್ಲಿ ದನಗಳ ಜಾತ್ರೆ ಭರಾಟೆ

| Published : Dec 27 2023, 01:31 AM IST

ಸಾರಾಂಶ

ದೊಡ್ಡಬಳ್ಳಾಪುರ: ದಕ್ಷಿಣ ಭಾರತದ ಪ್ರಮುಖ ದನಗಳ ಜಾತ್ರೆಗಳಲ್ಲಿ ಒಂದೆನಿಸಿರುವ ದೊಡ್ಡಬಳ್ಳಾಪುರ ತಾಲೂಕು ಘಾಟಿ ಸುಬ್ರಹ್ಮಣ್ಯ ವಾರ್ಷಿಕ ದನಗಳ ಜಾತ್ರೆ ಸೋಮವಾರದಿಂದ ಆರಂಭವಾಗಿದ್ದು, ರಾಜ್ಯ-ಹೊರರಾಜ್ಯಗಳ ಸಹಸ್ರಾರು ರಾಸುಗಳು ಜಾತ್ರೆಗೆ ಆಗಮಿಸಿವೆ.

ದೊಡ್ಡಬಳ್ಳಾಪುರ: ದಕ್ಷಿಣ ಭಾರತದ ಪ್ರಮುಖ ದನಗಳ ಜಾತ್ರೆಗಳಲ್ಲಿ ಒಂದೆನಿಸಿರುವ ದೊಡ್ಡಬಳ್ಳಾಪುರ ತಾಲೂಕು ಘಾಟಿ ಸುಬ್ರಹ್ಮಣ್ಯ ವಾರ್ಷಿಕ ದನಗಳ ಜಾತ್ರೆ ಸೋಮವಾರದಿಂದ ಆರಂಭವಾಗಿದ್ದು, ರಾಜ್ಯ-ಹೊರರಾಜ್ಯಗಳ ಸಹಸ್ರಾರು ರಾಸುಗಳು ಜಾತ್ರೆಗೆ ಆಗಮಿಸಿವೆ.

ನಾಗಾರಾಧನೆ ಮತ್ತು ಧಾರ್ಮಿಕ ಕ್ಷೇತ್ರವಾಗಿ ಗಮನ ಸೆಳೆದಿರುವ ಘಾಟಿ ಸುಬ್ರಹ್ಮಣ್ಯದಲ್ಲಿ ವರ್ಷಕ್ಕೊಮ್ಮೆ ನಡೆಯುವ ದನಗಳ ಜಾತ್ರೆಯನ್ನು ನೋಡುವುದಕ್ಕಾಗಿಯೇ ಸಾವಿರಾರು ಪ್ರವಾಸಿಗಳು ಬರುತ್ತಾರೆ. ಜಾತ್ರೆಗೆ ಬರುವ ಅಮೃತ ಮಹಲ್, ಹಳ್ಳಿಕಾರ್, ಮಲೆನಾಡು ಗಿಡ್ಡ, ಸೀಮೆ ರಾಸುಗಳು ಸೇರಿದಂತೆ ಹತ್ತಾರು ತಳಿಗಳ ಕಟ್ಟುಮಸ್ತು ಎತ್ತುಗಳನ್ನು ಪ್ರತಿಯೊಬ್ಬ ರೈತನೂ ಆಸೆಗಣ್ಣಿನಿಂದ ನೋಡುತ್ತಾನೆ. ಆ ಎತ್ತುಗಳಿಗೆ ತಾವೇ ಒಡೆಯನಾಗಬೇಕೆಂದು ಪೈಪೋಟಿಗೆ ಬೀಳುವ ರೈತರು ಅವುಗಳನ್ನು ಕೊಳ್ಳಲು ದೊಡ್ಡ ಮೊತ್ತದ ಹಣ ಹೂಡಲು ಸಿದ್ಧರಾಗುತ್ತಾರೆ. ಈ ಸಮಯದಲ್ಲಿ ರಂಗೇರುವ ಎತ್ತುಗಳ ವ್ಯಾಪಾರ ನೋಡುವುದೇ ಚೆನ್ನ. ಆದರೆ ಈ ಬಾರಿ ಆರಂಭಿಕ ದಿನಗಳಲ್ಲಿ ವಿಭಿನ್ನ ತಳಿಗಳ ರಾಸುಗಳ ಕೊರತೆ ಕಾಡುತ್ತಿದೆ. ಜಾತ್ರೆ ಈಗಷ್ಟೇ ಆರಂಭವಾಗಿದ್ದು, ಇನ್ನೂ 1 ವಾರ ಕಾಲ ನಡೆಯಲಿದೆ. ಹೀಗಾಗಿ ಮತ್ತಷ್ಟು ರಾಸುಗಳು ಬಂದು ಸೇರುವ ನಿರೀಕ್ಷೆಇದೆ. ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆ ರಾಜ್ಯಗಳಿಂದಲೂ ರೈತರು ಎತ್ತುಗಳನ್ನು ಕೊಳ್ಳಲು, ಮಾರಾಟ ಮಾಡಲು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಆಕರ್ಷಕ ಚಪ್ಪರಗಳ ನಿರ್ಮಾಣ:

ಎತ್ತುಗಳ ಮಾರಾಟಕ್ಕೆ ಮೊದಲು ಬಯಲನ್ನೇ ಆಶ್ರಯಿಸುತ್ತಿದ್ದ ರೈತರು ಕೆಲ ವರ್ಷಗಳಿಂದ ಸ್ವಲ್ಪ ಮಾರ್ಪಾಟು ಮಾಡಿಕೊಳ್ಳುವತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಹತ್ತಾರು ಎತ್ತುಗಳನ್ನು ಮಾರಾಟಕ್ಕೆ ತರುವ ದೊಡ್ಡ ಪ್ರಮಾಣದ ರೈತರು ಆಕರ್ಷಕ ಬಿದಿರು ಚಪ್ಪರಗಳನ್ನು ನಿರ್ಮಿಸಿಕೊಂಡು, ತಳಿರು ತೋರಣಗಳಿಂದ ಅಲಂಕರಿಸಿ, ಬಣ್ಣದ ಕಾಗದಗಳ ಅಲಂಕಾರದೊಂದಿಗೆ ಎತ್ತುಗಳನ್ನು ಮಾರಾಟಕ್ಕಿಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಸಕಲ ಸೌಕರ್ಯ: ರಾಜ್ಯದ ವಿವಿಧ ಭಾಗಗಳಿಂದ ಬರುವ ರೈತರಿಗೆ ಹಾಗೂ ರಾಸುಗಳಿಗೆ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಿಂದ ಸಕಲ ಸೌಕರ್ಯಗಳನ್ನೂ ನೀಡಲಾಗಿದೆ. ರೈತರಿಗೆ ಕುಡಿಯಲು ನೀರು, ಆಹಾರ, ರಾಸುಗಳಿಗೆ ಸಮಯಕ್ಕೆ ಸರಿಯಾಗಿ ನೀರನ್ನು ಹಾಗೂ ರಾಸುಗಳನ್ನು ಕಟ್ಟಿ ಹಾಕಲು ವ್ಯವಸ್ಥಿತ ಸ್ಥಳವನ್ನು ನಿಗದಿಪಡಿಸಿದೆ. ಆ ಮೂಲಕ ಸುವ್ಯವಸ್ಥಿತ ವ್ಯವಹಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಕುಡಿಯುವ ನೀರು ವಿದ್ಯುತ್ ದೀಪಗಳನ್ನು ಆಡಳಿತ ಮಂಡಳಿಯಿಂದ ಕಲ್ಪಿಸಲಾಗಿದೆ. ಬೆಲೆ ಗಗನಕ್ಕೆ:ಕಳೆದ 3 ವರ್ಷಗಳಿಂದ ಕೊರೋನಾ ಸೋಂಕು ಹಿನ್ನಲೆಯಲ್ಲಿ ಜಾತ್ರೆ, ರಥೋತ್ಸವಗಳು ಕಡಿಮೆಯಾಗಿದ್ದವು. ಜತೆಗೆ ಆರ್ಥಿಕ ಮುಗ್ಗಟ್ಟು ಎಲ್ಲೆಡೆ ಕಾಡುತ್ತಿತ್ತು. ಆದರೆ ಈ ಬಾರಿ ಪರಿಸ್ಥೀತಿ ಸುಧಾರಿಸಿದ್ದು, ರಾಸುಗಳ ಬೆಲೆ ಗಗನಮುಖಿಯಾಗಿದೆ. ಉತ್ತಮ ತಳಿಯ ಎತ್ತುಗಳು 2 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಾಟವಾಗುತ್ತಿವೆ. ಜೋಡೆತ್ತು ಬೆಲೆ ಸರಾಸರಿ 1 ಲಕ್ಷಕ್ಕಿಂತ ಅಧಿಕವೇ. ಜತೆಗೆ ರಾಸುಗಳಿಗೆ ಹಗ್ಗ, ಕೊರಳ ಗಂಟೆ, ಗೆಜ್ಜೆ, ಕುಣಿಕೆಗಳ ಮಾರಾಟವೂ ಜೋರಾಗಿದೆ.

ವಿವಿಧೆಡೆಗಳಿಂದ ರೈತರು ಆಗಮನ:

ದನಗಳ ಜಾತ್ರೆಗೆ ರಾಜ್ಯದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಆಂಧ್ರಪ್ರದೇಶದ ಹಿಂದುಪುರ, ಅನಂತಪುರ, ಪೆನುಕೊಂಡ, ಮಡಕಶಿರಾ, ತಮಿಳುನಾಡಿನ ಕೃಷ್ಣಗಿರಿ, ಹೊಸೂರು ಸೇರಿದಂತೆ ವಿವಿಧ ಭಾಗಗಳ ರೈತರು ತಮ್ಮ ರಾಸುಗಳೊಂದಿಗೆ ಆಗಮಿಸಿದ್ದಾರೆ.ಉತ್ತಮ ತಳಿಯ ಎತ್ತುಗಳಿಗೆ ಬಹುಮಾನ!ರೈತರು ತಾವು ತರುವ ರಾಸುಗಳನ್ನು ವರ್ಷವಿಡೀ ಯಾವ ರೀತಿ ನೋಡಿಕೊಂಡಿದ್ದಾರೆ ಹಾಗೂ ಮುಂದಿನ ರೈತರೂ ಸಹ ರಾಸುಗಳನ್ನು ಉತ್ತಮವಾಗಿ ನೋಡಿಕೊಳ್ಳಲು ಪ್ರೋತ್ಸಾಹಿಸುವ ಸಲುವಾಗಿ ದೇವಸ್ಥಾನ ವತಿಯಿಂದ ಪ್ರತಿ ವರ್ಷವೂ ವಿಶೇಷ ಬಹುಮಾನ ನೀಡಲಾಗುತ್ತದೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದಿರುವ ರಾಸುಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಬಹುಮಾನಿಸುವ ಯೋಜನೆ ಇದೆ.

ಜ.16ಕ್ಕೆ ರಥೋತ್ಸವ:

ಈ ಬಾರಿ ಜ.16ಕ್ಕೆ ತುಳು ಷಷ್ಠಿಯಂದು ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಲಕ್ಷಾಂತರ ಭಕ್ತಾದಿಗಳು ಈ ದೊಡ್ಡ ಜಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಈಗಾಗಲೇ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.ಫೋಟೋ-26ಕೆಡಿಬಿಪಿ1 -

ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯದಲ್ಲಿ ದನಗಳ ಜಾತ್ರೆ ಭರಾಟೆ..ಕಣ್ಣು ಹಾಯಿಸಿದಷ್ಟೂ ಕಾಣಸಿಗುತ್ತಿರುವ ನೂರಾರು ರಾಸುಗಳು.

26ಕೆಡಿಬಿಪಿ3 -

ಕಟ್ಟುಮಸ್ತಾದ ರಾಸುಗಳೊಂದಿಗೆ ರೈತರ ಸಂಭ್ರಮ.

26ಕೆಡಿಬಿಪಿ4- ಇತಿಹಾಸ ಪ್ರಸಿದ್ದ ಘಾಟಿ ಸುಬ್ರಹ್ಮಣ್ಯ ದೇವಾಲಯ.