ನಾಲ್ಕೈದು ದಿನಗಳಿಂದಲೂ ಸರ್ವರ್ ಡೌನ್ - ಕಾವೇರಿ-2 ತಂತ್ರಾಂಶ ಸರ್ವರ್ ಸಮಸ್ಯೆ ಶೀಘ್ರ ಬಗೆಹರಿಸಿ: ಬಿಜೆಪಿ

| N/A | Published : Feb 06 2025, 12:17 AM IST / Updated: Feb 06 2025, 01:33 PM IST

ನಾಲ್ಕೈದು ದಿನಗಳಿಂದಲೂ ಸರ್ವರ್ ಡೌನ್ - ಕಾವೇರಿ-2 ತಂತ್ರಾಂಶ ಸರ್ವರ್ ಸಮಸ್ಯೆ ಶೀಘ್ರ ಬಗೆಹರಿಸಿ: ಬಿಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ಕೈದು ದಿನಗಳಿಂದಲೂ ಸರ್ವರ್ ಡೌನ್ ಆಗಿದ್ದರಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ದಾವಣಗೆರೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

 ದಾವಣಗೆರೆ : ನಾಲ್ಕೈದು ದಿನಗಳಿಂದಲೂ ಸರ್ವರ್ ಡೌನ್ ಆಗಿದ್ದರಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ದಾವಣಗೆರೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ಪಿ.ಸಿ.ಶ್ರೀನಿವಾಸ ಭಟ್‌, ಬಿ.ಜಿ.ಅಜಯಕುಮಾ ರ, ಧನಂಜಯ ಕಡ್ಲೇಬಾಳ್ ನೇತೃತ್ವದಲ್ಲಿ ಪಕ್ಷದ ಮುಖಂಡರ ನಿಯೋಗ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿತು.

ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಉಪ ನೋಂದಣಾಧಿಕಾರಿ ಆರ್.ಎಲ್‌.ವೀಣಾ ಇತರೆ ಅಧಿಕಾರಿ, ಸಿಬ್ಬಂದಿಯನ್ನು ನಿಯೋಗ ಭೇಟಿಯಾಯಿತು. ಬುಧವಾರ ಕಚೇರಿಯ ವಸ್ತುಸ್ಥಿತಿ ಅಧ್ಯಯನ ಮಾಡಿ, ಸಾರ್ವಜನಿಕರು, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದಲ್ಲಿ ದೋಷದಿಂದ ಆಸ್ತಿ ನೋಂದಣಿಗಾಗಿ ಜನರು ಪರದಾಡುತ್ತಿರುವುದನ್ನು ತಪ್ಪಿಸುವಂತೆ ಮನವಿ ಮಾಡಿತು.

ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸರ್ವರ್ ಡೌನ್ ಆಗಿದೆಯೆಂದು ಅಧಿಕಾರಿ, ಸಿಬ್ಬಂದಿ ಹೇಳುತ್ತಿದ್ದಾರೆ. 26 ದಿನದಿಂದ ಇಸಿ ದಾಖಲೆ ಸಿಗದೇ ಆಸ್ತಿ ನೋಂದಣಿಗೆ ಬಂದ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುವ ಸ್ಥಿತಿ ಇದೆ. ಕಾವೇರಿ ತಂತ್ರಾಂಶ-2ನಲ್ಲಿ ತಾಂತ್ರಿಕ ತೊಂದರೆ ಇದ್ದರೆ, ಅದನ್ನು ಸರಿಪಡಿಸುವ ಕೆಲಸ ಸರ್ಕಾರ ಮಾಡಲಿ. ನಿತ್ಯವೂ 270-280 ನೋಂದಣಿ ಆಗುತ್ತಿದ್ದ ದಾವಣಗೆರೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ 4 ದಿನಗಳಿಂದ ಯಾವುದೇ ನೋಂದಣಿಯೂ ಆಗಿಲ್ಲ ಎಂದರು.

ತಂತ್ರಾಂಶ ಏಜೆನ್ಸಿಯೊಂದಕ್ಕೆ ₹460 ಕೋಟಿ ಬಾಕಿ ಇದೆಯೆಂಬ ಆರೋಪ ಇದೆ. ಏಜೆನ್ಸಿಗೆ ಹಣ ಕೊಡುವುದಕ್ಕೆ ಸರ್ಕಾರದ ಬಳಿ ಹಣ ಇಲ್ಲವೇ? ಕಂದಾಯ ಸಚಿವರು ಮೊದಲು ಇಂತಹ ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಬೇಕು. ಈ ಬಗ್ಗೆ ಉದಾಸೀನ ಮಾಡಿದರೆ ಉಪ ನೋಂದಣಾಧಿಕಾರಿ ಕಚೇರಿ ಎದುರು ಕಂದಾಯ ಸಚಿವರ ವಿರುದ್ಧ ಬಿಜೆಪಿ ಪ್ರತಿಭಟಿಸಬೇಕಾದೀತು ಎಂದು ಎಚ್ಚರಿಸಿದರು.

ಉಪ ನೋಂದಣಾಧಿಕಾರಿ ಆರ್.ಎಲ್.ವೀಣಾ ಮಾತನಾಡಿ, ಸಿಟಿಜನ್ ಲಾಗಿನ್‌ ನಿನ್ನೆ ಕಾರ್ಯನಿರ್ವಹಿಸಲಿಲ್ಲ. ಈಗ ಅದು ಸರಿಯಾಗಿದೆ. ಕಾವೇರಿ-2 ತಂತ್ರಾಂಶದಲ್ಲಿ ಸಣ್ಣಪುಟ್ಟ ದೋಷ, ನ್ಯೂನತೆಗಳು ಉಂಟಾಗುವುದು ಸಾಮಾನ್ಯ. ಅದನ್ನು ಇಲಾಖೆ ಮಟ್ಟದಲ್ಲಿ ಸರಿಪಡಿಸುವ ಪ್ರಯತ್ನ ನಡೆದಿದೆ. ಇನ್ನು ಮುಂದೆ ಸರ್ವರ್ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು. ತಾವೂ ಸೇರಿದಂತೆ ತಮ್ಮ ಕಚೇರಿ ಅಧಿಕಾರಿ, ಸಿಬ್ಬಂದಿ ಸಾರ್ವಜನಿಕರು, ರೈತರಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು.

ಪಕ್ಷದ ಮುಖಂಡರಾದ ಕಡ್ಲೇಬಾಳ್ ಬಸಣ್ಣ, ಪ್ರವೀಣ ಜಾಧವ್‌, ಎಚ್.ಪಿ.ವಿಶ್ವಾಸ್‌, ಜಯರುದ್ರಪ್ಪ ಇತರರು ಇದ್ದರು.