ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 9 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲೂಆರ್‌ಸಿ) ಕರ್ನಾಟಕಕ್ಕೆ ಸೂಚಿಸಿದೆ.

ಕನ್ನಡಪ್ರಭ ವಾರ್ತೆ ನವದೆಹಲಿ:

ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 9 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲೂಆರ್‌ಸಿ) ಕರ್ನಾಟಕಕ್ಕೆ ಸೂಚಿಸಿದೆ.

ದೆಹಲಿಯ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಸುದೀರ್ಘ ಒಂದೂವರೆ ಗಂಟೆಗಳ ಕಾಲ ಸಮಿತಿಯ ಸಭೆ ನಡೆಯಿತು. ತಮಿಳುನಾಡು ಎಂದಿನಂತೆ ತನ್ನ ಪಾಲಿನ ಬಾಕಿ ಇರುವ 17.49 ಟಿಎಂಸಿ ನೀರು ಸೇರಿದಂತೆ ಒಟ್ಟು 28.386 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ, ತಮಿಳುನಾಡು ಬಳಿ ಈಗಾಗಲೇ 55 ಟಿಎಂಸಿ ನೀರಿನ ಸಂಗ್ರಹವಿದೆ. ಆದರೂ, ನೀರಿಗಾಗಿ ಬೇಡಿಕೆ ಇಡುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದಲ್ಲಿ ತೀವ್ರ ಬರವಿದೆ. ಕೆಆರ್‌ಎಸ್‌ ಜಲಾಶಯದ ಸುತ್ತ ಮುತ್ತ ಮಳೆ ತುಂಬಾ ಕಡಿಮೆಯಿದೆ. ನಮಗೆ ಕುಡಿಯುವ ನೀರು ಆದ್ಯತೆಯಾಗಿದೆ. ಮಳೆ ಕೊರತೆ ನಡುವೆಯೂ ಪ್ರಾಧಿಕಾರದ ಕಳೆದ ಬಾರಿಯ ಆದೇಶವನ್ನು ಪಾಲಿಸಲಾಗಿದೆ. ಜುಲೈ 29ರಿಂದ ಆಗಸ್ಟ್‌ 23ರ ತನಕ 18 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ, ಸದ್ಯಕ್ಕೆ ಯಾವುದೇ ಕಾರಣದಿಂದಲೂ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ನಾವಿಲ್ಲ ಎಂದು ವಾದಿಸಿತು.

ಎರಡೂ ರಾಜ್ಯಗಳ ವಾದ ಆಲಿಸಿದ ಸಮಿತಿ, ಕೇರಳದಲ್ಲಿ ಮುಂದಿನ ಒಂದೆರಡು ದಿನದಲ್ಲಿ ಮಳೆಯಾಗಲಿದೆ. ಕಬಿನಿ, ಹಾರಂಗಿಗೆ ಒಳಹರಿವು ಬರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿತು. ಆಗಸ್ಟ್ 25ರಂದು ಬೆಳಗ್ಗೆ 8 ಗಂಟೆಯಿಂದ ಮುಂದಿನ 15 ದಿನಗಳ ಅವಧಿಯಲ್ಲಿ ಬಿಳಿಗುಂಡ್ಲುವಿನಲ್ಲಿ ಒಟ್ಟು 11.66 ಟಿಎಂಸಿ ನೀರು ಹರಿಯುವಂತೆ ಕರ್ನಾಟಕದ ಜಲಾಶಯಗಳಿಂದ ನೀರು ಬಿಡಬೇಕು. ಈ ಅವಧಿಯಲ್ಲಿ ಬಿಳಿಗುಂಡ್ಲುವಿನ ಹರಿವನ್ನು ನಿತ್ಯ 9 ಸಾವಿರ ಕ್ಯುಸೆಕ್ ಮಟ್ಟದಲ್ಲಿ ಖಾತ್ರಿಪಡಿಸುವ ಜವಾಬ್ದಾರಿ ಕರ್ನಾಟಕದ ಪ್ರತಿನಿಧಿಗಳ ಮೇಲಿದೆ ಎಂದು ಆದೇಶ ನೀಡಿತು. ಸಮಿತಿಯ ಮುಂದಿನ ಸಭೆ ಸೆ.8ಕ್ಕೆ ನಡೆಯಲಿದೆ.ಇಂದು ಪ್ರಾಧಿಕಾರದ ಸಭೆ:

ಈ ಮಧ್ಯೆ, ದೆಹಲಿಯ ಪ್ರಾಧಿಕಾರದ ಕಚೇರಿಯಲ್ಲಿ ಬೆಳಗ್ಗೆ 11.30ಕ್ಕೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದೆ.