ಸಾರಾಂಶ
ಹಾವೇರಿ ಜಿಲ್ಲೆ ಜಾನಪದ ವಿವಿ 24 ಬೋಧಕ-ಬೋಧಕೇತರ ಹುದ್ದೆಗಳು ಅಕ್ರಮವಾಗಿ ನೇಮಿಸಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದರೂ, ಮೌನ ವಹಿಸಿರುವುದು ಏಕೆ ಎಂದು ಹೋರಾಟಗಾರ ಶಿವಸೋಮಣ್ಣ ನಿಟ್ಟೂರ ಪ್ರಶ್ನಿಸಿದ್ದಾರೆ.
- ಹೋರಾಟಗಾರ ಶಿವಸೋಮಣ್ಣ ನಿಟ್ಟೂರ ಆಗ್ರಹ
ಕನ್ನಡಪ್ರಭ ವಾರ್ತೆ ಧಾರವಾಡ
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಕ್ರಮ ನೇಮಕ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಕರ್ನಾಟಕ ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಡಾ. ಶಿವಸೋಮಣ್ಣ ನಿಟ್ಟೂರ ಸರ್ಕಾರವನ್ನು ಆಗ್ರಹ ಮಾಡಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆ ಜಾನಪದ ವಿವಿ 24 ಬೋಧಕ-ಬೋಧಕೇತರ ಹುದ್ದೆಗಳು ಅಕ್ರಮವಾಗಿ ನೇಮಿಸಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದರೂ, ಮೌನ ವಹಿಸಿರುವುದು ಏಕೆ? ಎಂದು ಪ್ರಶ್ನೆ ಮಾಡಿದರು.
ಕುಲಪತಿ ಡಾ. ಟಿ.ಎಂ. ಭಾಸ್ಕರ್ ಹಾಗೂ ಕುಲಸಚಿವ ಶಹಜಾನ್ ಮುದಕವಿ ಈ ಅಕ್ರಮದ ಕಿಂಗ್‌ಪಿನ್. ನೇಮಕ ಪ್ರಕ್ರಿಯೆ ಯುಜಿಸಿ ನಿಮಯ ಪ್ರಕಾರ ಕ್ರಮಬದ್ಧವಾಗಿ ನಡೆದಿಲ್ಲ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಕಾನೂನು ಸಚಿವರಾದ ಎಚ್.ಕೆ. ಪಾಟೀಲರೇ, ಈ ಅಕ್ರಮದ ರೂವಾರಿಗಳ ಬೆಂಗಾವಲಿಗೆ ನಿಂತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತು ವಿಳಂಬ ಮಾಡದೆ, ಈ ಅಕ್ರಮ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಬೇಕು. ಅಲ್ಲದೇ, ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಬಿ.ಎಂ. ದುಗಾಣಿ, ಭೀಮಪ್ಪ ಭಜಂತ್ರಿ, ಕುಮಾರ ಓಲೇಕಾರ, ಶರಣಪ್ಪ ಪೂಜಾರ ಇದ್ದರು.ಇಂದು ಧರಣಿ!
ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಶನಿವಾರ ನಡೆಯುವ ಸದನದಲ್ಲಿ ಎಚ್.ಕೆ. ಪಾಟೀಲ ಐದು ಸಂಪುಟ ಬಿಡುಗಡೆ ಸಮಾರಂಭ ವೇಳೆ ಅಕ್ರಮ ನೇಮಕ ವಿರೋಧಿಸಿ, ಕಪ್ಪುಬಟ್ಟೆ ಪ್ರದರ್ಶನದ ಜೊತೆಗೆ ಧರಣಿ ನಡೆಸುತ್ತೇವೆ ಎಂದು ಸಂಶೋಧಕರ ಒಕ್ಕೂಟದ ಅಧ್ಯಕ್ಷ ಡಾ.ಶಿವಸೋಮಣ್ಣ ನಿಟ್ಟೂರು ತಿಳಿಸಿದ್ದಾರೆ.