ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಕ್ರಮ ಚಟುವಟಿಕೆ ಶಂಕೆ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಮಂಗಳವಾರ ನಸುಕಿನಲ್ಲಿ ದಿಢೀರ್ ದಾಳಿ ನಡೆಸಿ ಸಿಸಿಬಿ ಶೋಧ ನಡೆಸಿದೆ.ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ಬಿ.ದಯಾನಂದ್, ಕೇಂದ್ರ ಕಾರಾಗೃಹದಲ್ಲಿ ದಿಢೀರ್ ತಪಾಸಣೆ ನಡೆಸಿ ₹40 ಸಾವಿರ ನಗದು ಹಾಗೂ ಮೂರು ಚಾಕುಗಳನ್ನು ಸಿಸಿಬಿ ಜಪ್ತಿ ಮಾಡಿದೆ. ಈ ಹಣ ಹಾಗೂ ಚಾಕು ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಕ್ರಮ ಚಟುವಟಿಕೆಗಳ ಶಂಕೆ ಮೇರೆಗೆ ಜೈಲು ತಪಾಸಣೆ ನಡೆಸಲಾಗಿದೆ ಎಂದು ಹೇಳಿದರು.
ನಸುಕಿನಲ್ಲಿ ದಾಳಿ:ಅಕ್ರಮ ಚಟುವಟಿಕೆಗಳ ಮಾಹಿತಿ ಹಿನ್ನೆಲೆಯಲ್ಲಿ ಸಿಸಿಬಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಮಂಗಳವಾರ ನಸುಕಿನಲ್ಲಿ 3.30 ಗಂಟೆಗೆ ದಿಢೀರ್ ದಾಳಿ ನಡೆಸಿದೆ.ನಾಲ್ಕು ತಾಸಿಗೂ ಅಧಿಕ ಹೊತ್ತು ಜೈಲಿನಲ್ಲಿ ಜಾಲಾಡಿ ಅಲ್ಪ ಪ್ರಮಾಣದ ನಗದು ಹಾಗೂ ಚೂರಿಗಳನ್ನು ಸಿಸಿಬಿ ಜಪ್ತಿ ಮಾಡಿದೆ. ಕೆಫೆ ಕೇಸ್‌ಗೆ ನಂಟು?
ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲಿನಲ್ಲಿದ್ದ ಶಂಕಿತ ಉಗ್ರನ ಬಂಧನ ಬೆನ್ನಲ್ಲೇ ಸಿಸಿಬಿ ದಾಳಿ ನಡೆಸಿರುವುದು ಕುತೂಹಲ ಮೂಡಿಸಿದೆ.ಕೆಫೆ ಪ್ರಕರಣದಲ್ಲಿ ಶಿವಮೊಗ್ಗ ಐಸಿಸಿ ಮಾಡ್ಯುಲ್‌ನ ಶಂಕಿತ ಉಗ್ರ ಮಾಝ ಮುನೀರ್ ಅಹ್ಮದ್‌ನನ್ನು ಎನ್‌ಐಎ ಬಂಧಿಸಿದೆ. ಶಿವಮೊಗ್ಗ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಮಾಝನನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ಬಳಿಕ ಆತನನ್ನು ಆರೋಪಿಯಾಗಿನ್ನಾಗಿಸಿತು. ಈತ ನೀಡಿದ ಸುಳಿವಿನ ಮೇರೆಗೆ ಬಾಂಬರ್ ಮುಸಾವೀರ್ ಹುಸೇನ್ ಶಾಜಿಬ್ ಹಾಗೂ ಸಂಚುಕೋರ ಅಬ್ದುಲ್ ಮತೀನ್ ತಾಥಾನನ್ನು ಎನ್‌ಐಎ ಸೆರೆ ಹಿಡಿದಿತ್ತು.