ಶಾಂತಿ, ಸೌಹಾರ್ದತೆಯಿಂದ ಹಬ್ಬಗಳು ಆಚರಿಸಿ

| Published : Mar 22 2024, 01:06 AM IST

ಸಾರಾಂಶ

ಪ್ರತಿ ವರ್ಷದಂತೆ ಈ ವರ್ಷವೂ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೇ ದೇವರಹಿಪ್ಪರಗಿ ಠಾಣಾ ವ್ಯಾಪ್ತಿಯಲ್ಲಿ ಶಾಂತಿ, ಸೌಹಾರ್ದತೆಯಿಂದ ಹೋಳಿ ಹಾಗೂ ರಂಜಾನ್ ಹಬ್ಬ ಆಚರಿಸುವಂತೆ ಪಿಎಸೈ ಬಸವರಾಜ ತಿಪ್ಪರಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪ್ರತಿ ವರ್ಷದಂತೆ ಈ ವರ್ಷವೂ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೇ ದೇವರಹಿಪ್ಪರಗಿ ಠಾಣಾ ವ್ಯಾಪ್ತಿಯಲ್ಲಿ ಶಾಂತಿ, ಸೌಹಾರ್ದತೆಯಿಂದ ಹೋಳಿ ಹಾಗೂ ರಂಜಾನ್ ಹಬ್ಬ ಆಚರಿಸುವಂತೆ ಪಿಎಸೈ ಬಸವರಾಜ ತಿಪ್ಪರಡ್ಡಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹೋಳಿ ಹಾಗೂ ರಂಜಾನ್ ಹಬ್ಬದ ಅಂಗವಾಗಿ ಗುರುವಾರ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಪ್ರತಿಯೊಂದಕ್ಕೂ ಅನುಮತಿ ಪಡೆಯಬೇಕಿದೆ. ಹೋಳಿ ಹಬ್ಬದ ಜೊತೆ ರಂಜಾನ್‌ ಹಬ್ಬವು ಸಹ ಬಂದಿರುವುದರಿಂದ ಎಲ್ಲವೂ ಸುಸೂತ್ರವಾಗಿ ನಡೆಸಬೇಕಿದೆ. ಸಂತೋಷದಿಂದ ಪರಸ್ಪರ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿ. ಆಚರಣೆಯ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಕಾನೂನು ಮೀರುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಖಡಕ್ಕಾಗಿ ಎಚ್ಚರಿಸಿದರು.

ಕ್ರೈಂ ಪಿಎಸೈ ಬಿ.ಬಿ. ಕೊಳ್ಳಿ ಮಾತನಾಡಿ, ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಎಲ್ಲ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ಧತೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ.ಮಾ.25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಬಣ್ಣದ ಹಬ್ಬವನ್ನು ಸಂತೋಷದ ಸಂಕೇತವಾಗಿ ಶಾಂತಿಯಿಂದ ಆಚರಿಸಿ, ರಾಸಾಯನಿಕ ಬಣ್ಣ ಬಳಸಬೇಡಿ, ಹಿರಿಯರ ಪಾತ್ರ ಮಹತ್ವದ್ದಾಗಿದ್ದು ಶಾಂತಿ ಸುವ್ಯವಸ್ಥೆ ಕಾಪಾಡಲು ತಾವೆಲ್ಲರೂ ಪೊಲೀಸ್ ಇಲಾಖೆ ಜೊತೆ ಸಹಕರಿಸಿ ಎಂದು ತಿಳಿಸಿದರು.

ಸಾರ್ವಜನಿಕರ ಪರವಾಗಿ ಪಟ್ಟಣದ ಪ್ರಮುಖರುಗಳಾದ ಚನ್ನವೀರಪ್ಪ ಕುದುರಿ, ಮೈಹಿಬೂಬಸಾಬ್‌ ಹುಂಡೆಕಾರ ಹಾಗೂ ಶಂಕರಗೌಡ ಬಿರಾದಾರ ಮಾತನಾಡಿ, ಪಟ್ಟಣ ಶಾಂತಿಗೆ ಹೆಸರಾಗಿದ್ದು, ಇನ್ನೊಬ್ಬರಿಗೆ ತೊಂದರೆಯಾಗದಂತೆ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಇಲಾಖೆಗೆ ಸಹಕರಿಸುತ್ತೇವೆ ಎಂದರು.

ಪ್ರಾಸ್ತಾವಿಕವಾಗಿ ಪೊಲೀಸ್ ಪೇದೆ ಸಂಜೀವ ತಳವಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಸದಸ್ಯರುಗಳಾದ ಕಾಸುಗೌಡ ಬಿರಾದಾರ ಜಲಕತ್ತಿ, ಬಸೀರ್‌ ಅಹ್ಮದ್ ಬೇಪಾರಿ, ಶಾಂತಯ್ಯ ಜಡಿಮಠ, ಕಾಶಿನಾಥ ಭಜಂತ್ರಿ ಮುಖಂಡರುಗಳಾದ ಬಾಬುಗೌಡ ಪಾಟೀಲ, ನಿಂಗಣ್ಣ ಯಂಬತನಾಳ, ರಿಯಾಜ್ ತಾಂಬೂಳಿ, ಅಜೀಜ ಯಲಗಾರ, ಸುರೇಶ ಚವ್ಹಾಣ, ಕಾಶಿನಾಥ ವಡ್ಡೋಡಗಿ, ವಿನೋದ ಚವ್ಹಾಣ, ರಾಮನಗೌಡ ಹಂಚಲಿ, ಮಲ್ಕಪ್ಪ ಕೊಳೂರ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.