ಸಾರಾಂಶ
ಹರಪನಹಳ್ಳಿ: ಎಲ್ಲರೂ ಕಾನೂನು-ನಿಯಮಗಳ ಪ್ರಕಾರ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸಬೇಕು ಎಂದು ಇಲ್ಲಿಯ ಡಿವೈಎಸ್ಪಿ ವೆಂಕಟಪ್ಪ ನಾಯಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಪ್ರಯುಕ್ತ ಆಯೋಜಿಸಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಣೇಶ ಹಬ್ಬದಲ್ಲಿ ಡಿಜೆ ಬದವಾಗಿ ಭಾರತೀಯ ಸಂಸ್ಕೃತಿಯ ವಾದ್ಯಗಳನ್ನು ಉಪಯೋಗಿಸಿ ಎಂದು ಸಲಹೆ ನೀಡಿದರು.ಗಣೇಶ ಪೆಂಡಾಲ್‌ಗಳ ಬಳಿ ಸ್ವಂಯ ಸೇವಕರನ್ನು ನೇಮಕ ಮಾಡಿ. ಪ್ರತಿ ಗಣೇಶ ಪೆಂಡಾಲ್‌ಗಳ ಬಳಿ ಸಿಸಿ ಕ್ಯಾಮೆರಾ ಅಳವಡಿಸಿ, ಗಣೇಶ ಚತುರ್ಥಿಯಲ್ಲಿ ಸಂಗ್ರವಾದ ದೇಣಿಗೆಯನ್ನು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಸದ್ವಿನಿಯೋಗಿಸಿ ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸ್ಟೇಟಸ್ ಪೋಸ್ಟ್ ಮಾಡಿದರೆ ಅಂಥವರ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗುವುದು ಅಥವಾ ರೌಡಿ ಪಟ್ಟಿ ತೆರೆಯಲಾಗುವುದು ಎಂದು ಅವರು ಎಚ್ಚರಿಸಿದರು.ಯುವ ಪಡೆ ರಚನೆ: ಪಟ್ಟಣದಲ್ಲಿ ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 25 ಯುವಕರ ಪಡೆ ರಚಿಸಿ, ರಾತ್ರಿ ಹೊತ್ತು ನಮ್ಮ ಪೊಲೀಸರ ಜತೆ ಅವರನ್ನು ರಾತ್ರಿ ಗಸ್ತಿಗೆ ಕಳುಹಿಸಲಾಗುವುದು. ಆಸಕ್ತಿ ಇರುವವರು ಪೊಲೀಸ್ ಠಾಣೆಯಲ್ಲಿ ಹೆಸರು ನೋಂದಾಯಿಸಿ ಎಂದು ಹೇಳಿದರು.
ವೃತ್ತ ನಿರೀಕ್ಷಕ ನಾಗರಾಜ ಕಮ್ಮಾರ ಮಾತನಾಡಿ, ಕೋಮು ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು. ನಮ್ಮ ಪೊಲೀಸ್ ಠಾಣೆಯ ಸಿಪಿಐ ಕಚೇರಿಯಲ್ಲಿ ಪಟ್ಟಣದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ಬೆಸ್ಕಾಂ, ಪುರಸಭೆ, ಅಗ್ನಿಶಾಮಕ ಎಲ್ಲ ಸೇರಿ ಒಂದೇ ಕಡೆ ಅನುಕೂಲವಾಗಲು ಏಕಗವಾಕ್ಷಿ ಪದ್ಧತಿ ಮಾಡಲಾಗಿದೆ ಎಂದು ಹೇಳಿದರು.ಗ್ರಾಮೀಣ ಭಾಗದಲ್ಲಿ ಆಯಾ ಗ್ರಾಪಂನಿಂದ ಅನುಮತಿ ಪಡೆಯಬೇಕು, ಸಂಚಾರಕ್ಕೆ ಅಡೆತಡೆ ಆಗದಂತೆ ಗಣೇಶ ಮೂರ್ತಿ ಸ್ಥಾಪನೆ ಮಾಡಬೇಕು. ಮೆರವಣಿಗೆಯಲ್ಲಿ 75 ಡಿಸಿಬಲ್ ಇರುವ 2 ಸ್ಪೀಕರ್‌ಗೆ ಮಾತ್ರ ಅವಕಾಶ ನೀಡಲಾಗುವುದು, ಬೆಳಗ್ಗೆ 6ರಿಂದ ರಾತ್ರಿ 10 ಗಂಟೆ ವರೆಗೆ ಮಾತ್ರ ಮೈಕ್‌ಗೆ ಅವಕಾಶ ನೀಡಲಾಗುವುದು. ಗಣೇಶ ಪೆಂಡಾಲ್ ಬಳಿ ಜೂಜು, ಇಸ್ಪೀಟ್ ಆಡುವಂತಿಲ್ಲ ಎಂದು ಅವರು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಗಣೇಶ ಹಬ್ಬದಲ್ಲಿ ಡಿಜೆ ಬದಲಾಗಿ ಕಲಾ ತಂಡಗಳನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿ, ಪಿಒಪಿ ಗಣೇಶ ಮೂರ್ತಿ ಸ್ಥಾಪನೆ ಮಾಡಬಾರದು, ಪ್ಲಾಸ್ಟಿಕ್ ಬಳಕೆ ನಿಷೇಧ, ಗಣೇಶ ಮೂರ್ತಿ ವಿಸರ್ಜನೆಗಾಗಿ ಹರಿಹರ ರಸ್ತೆಯ ಆಶ್ರಯ ಕಾಲನಿ ಬಳಿ ಹಾಗೂ ನಾಯಕನಕೆರೆ ಬಳಿ ಎರಡು ಕಡೆ ಹೊಂಡ ಮಾಡಲಾಗಿದೆ. ಅದರಲ್ಲಿಯೇ ವಿಸರ್ಜನೆ ಮಾಡಬೇಕು ಎಂದು ಹೇಳಿದರು.
ಅಂಜುಮನ್ ಮಾಜಿ ಅಧ್ಯಕ್ಷ ಜಾವೇದ್, ಪುರಸಭಾ ಸದಸ್ಯ ಜಾಕೀರ್ ಹುಸೇನ್, ವಿಎಚ್‌ಪಿಯ ಸಂತೋಷ, ಎಚ್.ಎಂ. ಜಗದೀಶ, ಬಜರಂಗ ದಳದ ವೆಂಕಟೇಶ, ಎಬಿವಿಪಿಯ ವರುಣಕೌಟಿ ಸಲಹೆ ನೀಡಿದರು.ತಾಪಂ ವೀರಣ್ಣ ಲಕ್ಕಣ್ಣನವರ್, ಪಿಎಸ್‌ಐಗಳಾದ ಕಿರಣ್ ಕುಮಾರನಾಯ್ಕ, ರಂಗಯ್ಯ, ನಾಗರತ್ನಾ, ಪುರಸಭಾ ಸದಸ್ಯ ಮಂಜುನಾಥ ಇಜಂತಕರ್, ಬೆಸ್ಕಾಂನ ಈರಣ್ಣ, ಕೊಟ್ಟೂರು ಜಿಪಂ ಮಾಜಿ ಉಪಾಧ್ಯಕ್ಷ ದೊಡ್ಡ ರಾಮಣ್ಣ, ಕುಂಚೂರು ಇಬ್ರಾಹಿಂ ಉಪಸ್ಥಿತರಿದ್ದರು.